World Tourism Day 2021: ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ 10 ಪ್ರವಾಸಿ ತಾಣಗಳಿವು

Sep 27, 2021

ವೈವಿಧ್ಯತೆಗೆ ಹೆಸರು ಪಡೆದಿರುವ ಭಾರತ ದೇಶದಲ್ಲಿ ಇತಿಹಾಸ ಪಡೆದಿರುವ ಅದೆಷ್ಟೋ ಪ್ರವಾಸಿ ತಾಣಗಳಿವೆ. ಭಾರತದಲ್ಲಿನ ಪ್ರಮುಖ ಪ್ರವಾಸಿ ತಾಣಗಳು ದೇಶದ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ. ಐತಿಹಾಸಿಕ ಹೆಗ್ಗುರುತುಗಳಿಂದ ಬೆರಗುಗೊಳಿಸುವ ಕಡಲತೀರಗಳು, ವಾಸ್ತುಶಿಲ್ಪಗಳು ಮತ್ತು ನೈಸರ್ಗಿಕ ವೈಭವಗಳವರೆಗೆ ಭಾರತದಲ್ಲಿ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳ ಮಾಹಿತಿ ಈ ಕೆಳಗಿನಂತಿದೆ. ಇಂತಹ ಕೂತೂಹಲಕರ ತಾಣಗಳು ನಿಮ್ಮ ಆಸಕ್ತಿಯನ್ನು ನಿಸ್ಸಂದೇಹವಾಗಿ ಹೆಚ್ಚಿಸುತ್ತವೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.

ಕಾಶ್ಮೀರ
ಭಾರತದಲ್ಲಿ ಅತ್ಯಂತ ಭವ್ಯವಾದ ಸ್ಥಳಗಳಲ್ಲಿ ಕಾಶ್ಮೀರವೂ ಒಂದು. ಇದು ನೈಸರ್ಗಿಕ ಸೌಂದರ್ಯಕ್ಕೆ ಹೆಸರು ಪಡೆದಿದೆ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಜನರು ಭಾವಿಸಿದ್ದಾರೆ. ಅಲ್ಲಿರುವ ಸುಂದರವಾದ ಸರೋವರಗಳು, ಹಣ್ಣಿನ ತೋಟಗಳು, ಹಸಿರು ಹುಲ್ಲು ಜನಪ್ರಿಯವಾಗಿದೆ ಜತೆಗೆ ಅಲ್ಲಿನ ವಾತಾವರಣ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

ಹಿಮಾಚಲ ಪ್ರದೇಶ, ಶಿಮ್ಲಾ
ಹಿಮಾಚಲದ ಶಿಮ್ಲಾ ಭಾರತದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿದೆ. ಶಿಮ್ಲಾದ ನಿಜವಾದ ಪರಂಪರೆಯ ಬಗ್ಗೆ ತಿಳಿಯಬೇಕಾದರೆ ವೈಸ್​ರೆಗಲ್​ ಲಾಡ್ಜ್, ಕ್ರೈಸ್ಟ್ ಚರ್ಚ್​ಗೆ ಭೇಟಿ ನೀಡಿ. ಹಿಮಭರಿತ ಪರ್ವತಗಳು ಮತ್ತು ಸಣ್ಣ ಕಾಲುದಾರಿಗಳು ಚಳಿಗಾಲದಲ್ಲಿ ಅದ್ಭುತ ಅನುಭವವನ್ನು ನೀಡುತ್ತವೆ.

ಲಡಾಖ್​, ಲೇಹ್
ಲಡಾಖ್​ ಲೇಹ್ ಜಿಲ್ಲೆಯು ಪೂರ್ವ ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಲಡಾಖ್​ನಲ್ಲಿ ಸುಂದರ ಸರೋವರಗಳು, ಹಿಮಾವೃತ ಗಾಳಿ, ನದಿಗಳು ಮತ್ತು ಮರಳು ದಿಬ್ಬಗಳಿಗೆ ಹೆಸರುವಾಸಿಯಾಗಿವೆ. ಪ್ಯಾಂಗಾಂಗ್​ ಸರೋವರ ಮತ್ತು ಲೇಹ್ ಅರಮನೆ ಈ ಪ್ರದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.

ಸಿಕ್ಕಿಂ, ಗ್ಯಾಂಗ್ಟಾಕ್
ಈ ಪ್ರದೇಶ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾಂಚನಜುಂಗಾ ಶಿಖರದ ಸುಂದರ ನೋಟಗಳು, ಸಂಸ್ಕೃತಿ ಮತ್ತು ಸಂಪ್ರದಾಯ ಅದ್ಭುತವಾಗಿದೆ. ಗ್ಯಾಂಗ್ಟಾಕ್ ಬೆಟ್ಟದ ತುದಿಯು ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾಗಿದೆ.

ಕೇರಳ, ಮುನ್ನಾರ್
ಮುನ್ನಾರ್​ನ ಆಕರ್ಷಣೆ ಅತ್ಯಂತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪರ್ವತಗಳು, ಸುಂದರವಾದ ಚಹಾ ತೋಟಗಳೊಂದಿಗೆ ಆಕರ್ಷಕವಾಗಿ ಕಾಣುತ್ತವೆ. ಪ್ರಶಾಂತವಾದ ಸರೋವರಗಳು, ಅಣೆಕಟ್ಟುಗಳು ಮತ್ತು ಹಸಿರು ತುಂಬಿದೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರ ಮನಸೆಳೆಯುವುದಂತೂ ಸತ್ಯ.

ಉತ್ತರ ಪ್ರದೇಶ, ವಾರಣಾಸಿ
ದೇಶದ ಪವಿತ್ರ ನಗರ ವಾರಣಾಸಿ ಜನಪ್ರಿಯತೆ ಗಳಿಸಿಕೊಂಡ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಮೋಕ್ಷ ನಗರವೆಂದೂ ಕರೆಯಲ್ಪಡುವ ಇದು ಹಿಂದೂಗಳ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ನಗರವು ಪವಿತ್ರ ಗಂಗಾ ನದಿಯ ದಡದಲ್ಲಿದೆ. ಇದು 5,000 ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಇತಿಹಾಸ ಪಡೆದ ದೇವಾಲಯಗಳು ಜನರ ಮನಸೆಳೆಯುವಂತಿದೆ.

ಗುಜರಾತ್, ರಾನ್ ಆಫ್ ಕಚ್
ಗುಜರಾತಿನ ಗ್ರೇಟ್ ರಾನ್ ಆಫ್ ಕಚ್ ಬಿಳಿ ಉಪ್ಪಿನ ಮರುಭೂಮಿಯು ಭಾರತದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. 7,500 ಚದರ ಕಿ.ಮೀ ನಷ್ಟು ವಿಸ್ತಾರವಾದ ರನ್ ಆಫ್ ಕಚ್ ವಿಶ್ವದ ಅತಿದೊಡ್ಡ ಉಪ್ಪಿನ ಮರುಭೂಮಿಗಳಲ್ಲಿ ಒಂದಾಗಿದೆ.

ರಾಜಸ್ಥಾನ, ಜೈಸಲ್ಮೇರ್
ಜೈಸಲ್ಮೇರ್ ಅನ್ನು ಚಿನ್ನದ ಮರಳಿನ ನಾಡು ಎಂದು ಕರೆಯಲಾಗುತ್ತದೆ. ಇದು ರಾಜಸ್ಥಾನದ ಒಂದು ಸುಂದರ ನಗರವಾಗಿದ್ದು, ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಮತ್ತು ರಜಪೂತ ರಾಜರ ಇತಿಹಾಸವನ್ನು ಸಾರುತ್ತದೆ. ವಿಶಾಲವಾದ ಥಾರ್ ಮರುಭೂಮಿ ಇಲ್ಲಿನ ಪ್ರಸಿದ್ದ ಸ್ಥಳವಾಗಿದೆ. ಒಂಟೆ ಸಫಾರಿಯೊಂದಿಗೆ ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ತಿಳಿಯುವ ಅವಕಾಶ ಸಿಗುತ್ತದೆ.

ಜೈಪುರ, ರಾಜಸ್ಥಾನ
ಕೆಲವು ನಗರಗಳು ಮಾತ್ರ ಹಿಂದಿನ ಶ್ರೀಮಂತ ಪರಂಪರೆಯನ್ನು ತಿಳಿಸುತ್ತವೆ. ಅವುಗಳಲ್ಲಿ ಜೈಪುರ ಕೂಡಾ ಒಂದು. ಹವಾ ಮಹಲ್, ಸಿಟಿ ಪ್ಯಾಲೇಸ್, ಜಂತರ್ ಮಂತರ್ ಮತ್ತು ಆಂಬರ್ ಕೋಟೆ ಪ್ರಖ್ಯಾತ ಪ್ರವಾಸಿ ತಾಣಗಳು.

ಮೈಸೂರು, ಕರ್ನಾಟಕ
ಮೈಸೂರಿನಲ್ಲಿರುವ ಅರಮನೆ ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದು. ಇಲ್ಲಿನ ವಾಸ್ತುಶಿಲ್ಪ ಮತ್ತು ಸಂಸ್ಕೃತಿ ವಿಶೇಷವಾಗಿದೆ. ಅರಮನೆಯ ನಗರ ಎಂಬೆಲ್ಲಾ ಹೆಸರುಗಳಿಂದ ಜನಪ್ರಿಯತೆ ಪಡೆದಿರುವ ಮೈಸೂರು ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ತಾಣಗಳಲ್ಲಿ ಒಂದಾಗಿದೆ.

Source:tv9kannada