World Sleep Day 2021: ಇಂದು ವಿಶ್ವ ನಿದ್ರಾ ದಿನ; ನಿದ್ದೆಯೇ ನಮ್ಮನೆ ದೇವ್ರು.. ಬನ್ನಿ ನಿದ್ರೆ ಮಾಡೋಣ!

Mar 19, 2021

2008 ರಲ್ಲಿ ಮೊದಲ ಬಾರಿಗೆ ವಿಶ್ವ ನಿದ್ರಾ ದಿನವನ್ನು ಆಚರಿಸಲಾಯಿತು. ಮಾನಸಿಕ, ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿದ್ರೆ ತುಂಬಾನೇ ಪ್ರಮುಖವಾಗುತ್ತೆ. ನಿದ್ರೆ ಇಲ್ಲದವರ ಮುಖ ಕಳಾಹೀನವಾಗುತ್ತದೆ. ವಿವರ್ಣವಾಗುತ್ತದೆ. ಏನನ್ನೋ ಕಳೆದುಕೊಂಡವರಂತೆ ಅವರ ಮುಖ ಕಾಣುತ್ತೆ.

ಜಗತ್ತಿನಲ್ಲಿ ಪ್ರತಿದಿನವೂ ನಿತ್ಯನೂತನ. ಅದಕ್ಕೆಂದೇ ಒಂದಲ್ಲಾ ಒಂದು ಹೆಸರು ಕೊಟ್ಟು, ಆಯಾ ದಿನದ ಆಚರಣೆ ಇದ್ದೇ ಇರುತ್ತೆ. ಹಾಗಾದ್ರೆ ಇಂದು ಯಾವ ದಿನವೆಂದು ಕೇಳಿದಿರಾ? ಇಂದಿನ ದಿನವನ್ನು ಆಚರಿಸಬೇಕು ಎಂದರೆ ನೀವು ಇಡೀ ದಿನ ನಿದ್ದೆ ಮಾಡಬೇಕು! ಅರೆ! ಏಕೆ ಹೀಗೆ ಎಂದರೆ, ಇಂದು (ಮಾರ್ಚ್ 19) ವಿಶ್ವ ನಿದ್ರಾ ದಿನ (World Sleep Day 2021). ನಾವು ನಿದ್ರೆಗೂ ಒಂದು ದಿನವನ್ನು ಮೀಸಲಿಟ್ಟಿದ್ದೇವೆ ಎಂಬುದೇ ನಿದ್ರೆಯನ್ನು ನಾವು ಎಷ್ಟು ಇಷ್ಟ ಪಡುತ್ತೇವೆ ಎಂಬುದನ್ನು ತೋರಿಸುತ್ತೆ. ಹಾಗಂತ.. ‘ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ! ನನ್ನ ತಮ್ಮಾ ಮಂಕುತಿಮ್ಮ’ ಎಂದು ಎಚ್ಚರಿಸುವ ಹಾಗಿಲ್ಲ ಇಂದು! ಜಾಗ್ರತೆ

2008 ರಲ್ಲಿ ಮೊದಲ ಬಾರಿಗೆ ವಿಶ್ವ ನಿದ್ರಾ ದಿನವನ್ನು ಆಚರಿಸಲಾಯಿತು. ಮಾನಸಿಕ, ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿದ್ರೆ ತುಂಬಾನೇ ಪ್ರಮುಖವಾಗುತ್ತೆ. ನಿದ್ರೆ ಇಲ್ಲದವರ ಮುಖ ಕಳಾಹೀನವಾಗುತ್ತದೆ. ವಿವರ್ಣವಾಗುತ್ತದೆ. ಏನನ್ನೋ ಕಳೆದುಕೊಂಡವರಂತೆ ಅವರ ಮುಖ ಕಾಣುತ್ತೆ. ಹಾಗಾದರೆ ನಿದ್ರೆಯ ಮಹತ್ವವೇನು? ನಿದ್ರೆ ಇಲ್ಲದಿದ್ದರೆ ಏನೆಲ್ಲಾ ಆಗುತ್ತೆ? ಅಷ್ಟಕ್ಕೂ ಎಷ್ಟು ನಿದ್ದೆ ಮಾಡಬೇಕು? ಹೆಚ್ಚು ನಿದ್ರೆ ಮಾಡಿದರೆ ಏನಾದರೂ ತೊಂದರೆಯಾಗುತ್ತಾ? ಇಲ್ಲಿದೆ ವಿವರ.

ಆರೋಗ್ಯ ಕಾಪಾಡುತ್ತೆ ನಿದ್ದೆ
ಇಡೀ ದಿನ ಕೆಲಸ ಮಾಡಿ ದಣಿದಿರುತ್ತೇವೆ. ಮನಸಿಗೂ ದೇಹಕ್ಕೂ ಆಯಸವಾಗಿರುತ್ತದೆ. ಸಾಕಪ್ಪ ಸಾಕು ಒಂದರೆ ನಿಮಿಷ ದಣಿವಾರಿಸಿಕೊಳ್ಳಲು ಬಿಡುವು ಸಿಕ್ಕರೆ ಸಾಕು ಎಂದು ಅನಿಸಿಬಿಡುತ್ತದೆ. ಕುಳಿತಲ್ಲೇ ಕಣ್ಣು ಮುಚ್ಚಿಕೊಂಡು ಬರುತ್ತದೆ. ಇಂತಹ ಪರಿಸ್ಥಿತಿ ಎಲ್ಲರಿಗೂ ಎದುರಾಗಿರುತ್ತದೆ. ಯಾವಾಗ ನಿಮಗೆ ಈ ಅನುಭವ ಆಯಿತೋ ಆಗ ನಿಮಗೆ ನಿದ್ರೆಯ ಅವಶ್ಯಕತೆ ಇದೆ ಎಂದರ್ಥ. ದಿನವಿಡಿ ದಣಿದ ಮನಸು ದೇಹಕ್ಕೆ ವಿರಾಮ ನೀಡುವುದೇ ನಿದ್ರೆ.

ದೇಹದ ತೂಕದ ಮೇಲೂ ಬೀರುತ್ತೆ ಪರಿಣಾಮ
ಉತ್ತಮ ನಿದ್ರೆ ದೇಹದ ತೂಕದ ಮೇಲೂ ಪರಿಣಾಮ ಬೀರುತ್ತೆ. ಅಗತ್ಯ ನಿದ್ರೆ ಮಾಡಿದ್ದರೆ ದೇಹ ಸಮತೂಕದಲ್ಲಿರುತ್ತೆ. ನಿದ್ದೆಗೆಟ್ಟರೆ ದೇಹದ ಸತ್ವ ಖಾಲಿಯಾಗಿ ನಿಧಾನವಾಗಿ ತೂಕದ ಮೇಲೆ ಪರಿಣಾಮ ಬೀರುತ್ತೆ. ಹಾಗೇ, ನಿದ್ರೆ ಹೆಚ್ಚಾದರೂ ನಿಧಾನವಾಗಿ ದೇಹದ ತೂಕ ಹೆಚ್ಚಾಗುತ್ತಾ ಹೋಗುತ್ತದೆ.

ಒತ್ತಡ ನಿವಾರಣೆಗೆ ನಿದ್ರೆಯೇ ಔಷಧ
ಕೆಲಸ, ಸಂಸಾರ ಅದೂ ಇದೂ ಅಂತ ಇಡೀ ದಿನ ಓಡಾಡಿಕೊಂಡ ಒತ್ತಡ ಮನಸಿನ ಮೇಲೆ ಬಿದ್ದಿರುತ್ತೆ. ಈ ಒತ್ತಡ ನಿವಾರಣೆಗೆ ನಿದ್ರೆಯೇ ರಾಮಬಾಣ. ದೇಹದ ಒಟ್ಟೂ ಕಾರ್ಯವಿಧಾನ ಸಮತೋಲನದಲ್ಲಿ ನಡೆಯಬೇಕು ಎಂದರೆ ಅಗತ್ಯ ಪ್ರಮಾಣದ ನಿದ್ರೆಯನ್ನು ನೀವು ಮಾಡಲೇಬೇಕು.

ನಿದ್ರೆ ನಿಮ್ಮ ಜೀವ ಉಳಿಸುತ್ತೆ!
ಹೌದು, ಸಮಪ್ರಮಾಣದಲ್ಲಿ ನಿದ್ರಿಸುವುದರಿಂದ ಮನಸು ಆಹ್ಲಾದಕರವಾಗಿರುತ್ತದೆ. ಯಾವುದೇ ಪ್ರಯಾಣವನ್ನು ನಿದ್ರೆ ಇಲ್ಲದೆ ಕೈಗೊಂಡರೆ ಅಪಘಾತ ಸಂಭವಿಸುವ ಅವಕಾಶಗಳೂ ಇರುತ್ತವೆ. ಉತ್ತಮ ನಿದ್ರೆ ಮಾಡಿಕೊಂಡು ವಾಹನ ಚಾಲನೆ ಮಾಡಿದರೆ ಈ ಸಂಭಾವ್ಯತೆ ಕಡಿಮೆ.

ನಿದ್ರೆಯೇ ನಮ್ಮನೆ ದೇವ್ರು! ಬನ್ನಿ ನಿದ್ರೆ ಮಾಡೋಣ.

Source:TV9Kannada