Tokyo Olympics: ಕೂದಲೆಳೆಯಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್​ನಲ್ಲಿ ಕರ್ನಾಟಕದ ಅದಿತಿ ಅಶೋಕ್​ಗೆ ಸೋಲು

Aug 7, 2021

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಾರೂ ನಿರೀಕ್ಷಿಸಿರದ ಗಾಲ್ಫ್ ಕ್ರೀಡೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತಾದರೂ ಪದಕ ಗೆಲ್ಲುವಲ್ಲಿ ವಿಫಲವಾಗಿದೆ.ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿದೆ.

ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಶನಿವಾರ ನಡೆದ ಸುತ್ತಿನಲ್ಲಿ ಅದಿತಿ ಮೂರನೇ ಸ್ಥಾನ ಪಡೆದುಕೊಂಡರಾದರೂ ನ್ಯೂಜಿಲೆಂಡ್​ನ ಲೈಡಿಯಾ ಕೊ ಜೊತೆ ಟೈ ಆಯಿತು. ಎರಡನೇ ಸ್ಥಾನದಲ್ಲಿ ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ಅಮೆರಿಕಾ ಇತ್ತು. ಇದೇವೇಳೆ ಮಳೆ ಬಂದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು.

ಸ್ವಲ್ಪ ಸಮಯದ ಬಳಿಕ ಮಳೆ ನಿಂತ ಪರಿಣಾಮ ಅಂತಿಮ ಫೈನಲ್ ರೌಂಡ್​​ ಆರಂಭಿಸಲಾಯಿತು. ಇದರಲ್ಲಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮೊದಲ ಮೂರು ಸುತ್ತಿನ ಅಂತ್ಯಕ್ಕೆ ಪದಕ ಬೇಟೆಯಲ್ಲಿದ್ದ ಅದಿತಿ, ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಎರಡನೇ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಹಾಗಿದ್ದರೂ 23 ವರ್ಷದ ಬೆಂಗಳೂರು ಮೂಲದ ಅದಿತಿ, ಒಲಿಂಪಿಕ್ಸ್ ಗಾಲ್ಫ್ ಇತಿಹಾಸದಲ್ಲೇ ಭಾರತದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

Source: Tv9 kannada