ರಾಬರ್ಟ್ ಗಳಿಕೆ ಒಂದು ವಾರಕ್ಕೆ 78.36 ಕೋಟಿ! ತೆಲುಗು ಕಲೆಕ್ಷನ್ ಎಷ್ಟು?
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ರಾಬರ್ಟ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಒಂದು ವಾರದ ನಂತರವೂ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ನಾಗಾಲೋಟ ಮುಂದುವರಿದಿದೆ.
ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆರೆಕಂಡು ಒಂದು ವಾರ ಕಳೆದಿದೆ. ಮಾ.11ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ವಾರದಲ್ಲಿ ರಾಬರ್ಟ್ ಗಳಿಸಿದ್ದೆಷ್ಟು ಎಂಬುದನ್ನು ತಿಳಿದುಕೊಳ್ಳುವ ಕಾತರದಲ್ಲಿ ಇದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. 8 ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 78.36 ಕೋಟಿ ರೂ. ಗಳಿಸಿದೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ 17.24 ಕೋಟಿ ರೂ. ಬಾಚಿಕೊಂಡಿತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂತು. ಒಂದು ವಾರದ ಬಳಿಕವೂ ರಾಬರ್ಟ್ ನಾಗಾಲೋಟ ಮುಂದುವರಿದಿದೆ. ಫ್ಯಾಮಿಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವುದು ರಾಬರ್ಟ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಕನ್ನಡದ ಜೊತೆಗೆ ತೆಲುಗಿಗೂ ಡಬ್ ಆಗಿ ರಾಬರ್ಟ್ ತೆರೆಕಂಡಿದೆ. ಆಂಧ್ರ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲೂ ಈ ಸಿನಿಮಾ ಅಬ್ಬರಿಸಿದೆ. ಪರಭಾಷಿಕರ ನೆಲದಲ್ಲಿ ಈ ಚಿತ್ರ 7 ದಿನಕ್ಕೆ ಒಟ್ಟು 7.61 ಕೋಟಿ ರೂ. ಸಂಪಾದಿಸಿದೆ. ಇದು ಗಮನಾರ್ಹ ಬೆಳವಣಿಗೆ. ‘ಒಡೆಯ’ ಚಿತ್ರದ ಬಳಿಕ ದರ್ಶನ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆ ಕಾಯುವಿಕೆಗೆ ಅರ್ಥ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ಅಭಿಮಾನಿಗಳು ಮನಸಾರೆ ಒಪ್ಪಿಕೊಂಡು ಗೆಲ್ಲಿಸಿದ್ದಾರೆ.
ಈವರೆಗಿನ ಕನ್ನಡ ಮತ್ತು ತೆಲುಗು ವರ್ಷನ್ ಸೇರಿಸಿದರೆ ಒಟ್ಟು 85.97 ಕೋಟಿ ರೂ. ಆಗಲಿದೆ. ಅಂದರೆ ರಾಬರ್ಟ್ 100 ಕೋಟಿ ರೂ. ಕ್ಲಬ್ ಸೇರಲು ಇನ್ನು 15 ಕೋಟಿ ರೂ. ಮಾತ್ರ ಬಾಕಿ. ಇಂದಿಗೂ ಅನೇಕ ಕಡೆಗಳಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಶೀಘ್ರದಲ್ಲೇ ದರ್ಶನ್ ಸೆಂಚುರಿ ಬಾರಿಸುವ ಲಕ್ಷಣ ಕಾಣಿಸುತ್ತಿದೆ. ‘ರಾಬರ್ಟ್’ನಿಂದ ನಟಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್ ಅವರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಗೆಲುವಿನ ಸಂಭ್ರಮದಲ್ಲಿರುವ ದರ್ಶನ್ ಅವರು ಇತ್ತೀಚೆಗಷ್ಟೇ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದುಕೊಂಡಿದ್ದಾರೆ.
Source:TV9Kannada