Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
ಪ್ರಭುದೇವ (Prabhudheva) ಎಂದರೆ ಮೊದಲು ನೆನಪಾಗುವುದು ಡ್ಯಾನ್ಸ್. ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಅವರು ಡ್ಯಾನ್ಸ್ ಮಾಡುತ್ತಾರೆ. ಪ್ರಭುದೇವ (Prabhudeva) ನಟಿಸುವ ಪ್ರತಿ ಸಿನಿಮಾದಲ್ಲಿಯೂ ಅಭಿಮಾನಿಗಳು ಇಂಥ ಡ್ಯಾನ್ಸ್ ಬಯಸುವುದು ಸಹಜ. ಆದರೆ ಅವರ ಮುಂದಿನ ಸಿನಿಮಾದಲ್ಲಿ ಅದ್ಭುತ ನೃತ್ಯವನ್ನು ನಿರೀಕ್ಷಿಸುವುದು ಸ್ವಲ್ಪ ಕಷ್ಟ ಎನಿಸುತ್ತಿದೆ. ಅವರ ಹೊಸ ಸಿನಿಮಾ ‘ಪೊಯ್ಕ್ಕಾಲ್ ಕುದುರೈ’ (Poikkal Kuthirai) ಚಿತ್ರದ ಫಸ್ಟ್ ಲುಕ್ ನೋಡಿದ ಬಳಿಕ ಇಂಥ ಅಭಿಪ್ರಾಯ ಮೂಡುತ್ತಿದೆ. ಯಾಕೆಂದರೆ, ಈ ಸಿನಿಮಾದಲ್ಲಿ ಅವರು ಒಂದು ಕಾಲು ಇಲ್ಲದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ!
‘ಪೊಯ್ಕ್ಕಾಲ್ ಕುದುರೈ’ ಚಿತ್ರದ ಫಸ್ಟ್ಲುಕ್ ಬಿಡುಗಡೆ ಆಗಿದೆ. ಅದನ್ನು ಕಂಡು ಪ್ರಭುದೇವ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊಣಕಾಲಿನವರೆಗೆ ಕಾಲು ಕಳೆದುಕೊಂಡು, ಮರದ ಕಾಲು ಅಳವಡಿಸಿಕೊಂಡಿರುವ ವ್ಯಕ್ತಿಯ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಮಗು ಎತ್ತಿಕೊಂಡು, ಇನ್ನೊಂದು ಕೈಯಲ್ಲಿ ದೊಡ್ಡ ಸ್ಪ್ಯಾನರ್ ಹಿಡಿದು ಫೈಟ್ ಮಾಡಲು ಸಿದ್ಧವಾಗಿರುವ ಭಂಗಿಯಲ್ಲಿ ಅವರ ಫಸ್ಟ್ಲುಕ್ ಮೂಡಿಬಂದಿದೆ.
ಈ ಚಿತ್ರಕ್ಕೆ ಸಂತೋಷ್ ಪಿ. ಜಯಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೇ.40ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿಕೊಂಡು ಈ ವರ್ಷ ಡಿಸೆಂಬರ್ ವೇಳೆಗೆ ಚಿತ್ರವನ್ನು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವರಲಕ್ಷ್ಮೀ ಶರತ್ಕುಮಾರ್ ಮತ್ತು ರೈಸಾ ವಿಲ್ಸನ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಆದರೆ ಇಬ್ಬರೂ ಕೂಡ ಪ್ರಭುದೇವಗೆ ಜೋಡಿ ಅಲ್ಲ ಎನ್ನಲಾಗುತ್ತಿದೆ. ಪ್ರಕಾಶ್ ರೈ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
Source: Tv9 kannada