Omicron: 7 ತಿಂಗಳ ನಂತರ ಒಂದೇ ದಿನ 1 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು; 3,000 ಗಡಿ ದಾಟಿದ ಒಮಿಕ್ರಾನ್
ಕಳೆದ 24 ಗಂಟೆಗಳಲ್ಲಿ 1,17,100 ಹೊಸ ಕೊವಿಡ್ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಈ ಮೂಲಕ ಭಾರತದಲ್ಲಿ ಕೊರೊನಾ ಪ್ರಕರಣಗಳು ಲಕ್ಷ ಗಡಿಯನ್ನು ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯದ ಇಂದಿನ ಮಾಹಿತಿಯ ಪ್ರಕಾರ, ದೇಶದ ಪ್ರಸ್ತುತ ಪ್ರಕರಣಗಳ ಸಂಖ್ಯೆ 3,71,363 ರಷ್ಟಿದೆ. ಭಾರತದಲ್ಲಿ ಕೊನೆಯ ಬಾರಿಗೆ ಒಂದೇ ದಿನ ಒಂದು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು 2021ರ ಜೂನ್ 6ಕ್ಕೆ. ಏಳು ತಿಂಗಳ ನಂತರ ಭಾರತದಲ್ಲಿ ಮತ್ತೆ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿವೆ. ಅಲ್ಲದೇ ಈ ಬಾರಿ ದೇಶದಲ್ಲಿ 10,000 ಪ್ರಕರಣದಿಂದ ಕೇವಲ ಎಂಟೇ ದಿನದಲ್ಲಿ 1 ಲಕ್ಷ ಪ್ರಕರಣಕ್ಕೆ ಏರಿಕೆಯಾಗಿದ್ದು ಆತಂಕ ಹುಟ್ಟಿಸಿದೆ. ಒಮಿಕ್ರಾನ್ ಪ್ರಕರಣಗಳಲ್ಲೂ ತೀವ್ರ ಏರಿಕೆ ಕಂಡುಬರುತ್ತಿದ್ದು, ಇದುವರೆಗೆ ಒಟ್ಟು 3,007 ಪ್ರಕರಣಗಳು ವರದಿಯಾಗಿವೆ. ದೇಶದ 27 ರಾಜ್ಯಗಳಲ್ಲಿ ಒಮಿಕ್ರಾನ್ ವರದಿಯಾಗಿದ್ದು, ಸೋಂಕಿತರಲ್ಲಿ 1,199 ರೋಗಿಗಳು ಗುಣಮುಖರಾಗಿದ್ದಾರೆ.
ಭಾರತದಲ್ಲಿ ದೈನಂದಿನ ಕೊರೊನಾ ಪಾಸಿಟಿವಿಟಿ ದರವು ಶೇ.7.74ಕ್ಕೆ ತಲುಪಿದೆ. ಭಾರತದಲ್ಲಿ ಒಂದೇ ದಿನ 302 ರೋಗಿಗಳು ಸಾವನ್ನಪ್ಪಿದ್ದು, ದೇಶದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 4,83,178 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 30,836 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಚೇತರಿಕೆ ಪ್ರಮಾಣ ಶೇ.97.57ಕ್ಕೆ ತಲುಪಿದೆ.
ದೇಶದಲ್ಲಿ ಇದುವರೆಗೆ 68 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದಲ್ಲದೆ ಸುಮಾರು ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ ಲಸಿಕಾ ಅಭಿಯಾನದಲ್ಲಿ ಇದುವರೆಗೆ ಸುಮಾರು 149.66 ಕೋಟಿಗೂ ಅಧಿಕ ಡೋಸ್ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ.
India reports 1,17,100 fresh COVID cases, 30,836 recoveries, and 302 deaths in the last 24 hours
Daily positivity rate: 7.74%
Active cases: 3,71,363
Total recoveries: 3,43,71,845
Death toll: 4,83,178Total vaccination: 149.66 crore doses pic.twitter.com/5uqB5lmnMj
— ANI (@ANI) January 7, 2022
ಇಂದು ಪ್ರಧಾನಿ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಸಾಧ್ಯತೆ:
ದೇಶಾದ್ಯಂತ ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಉನ್ನತ ಮಟ್ಟದ ಸಭೆ ನಡೆಸುವ ಸಾಧ್ಯತೆಯಿದೆ. ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಮತ್ತು ಅದನ್ನು ಸಾಮೂಹಿಕವಾಗಿ ಎದುರಿಸುವುದು ಹೇಗೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೋಂಕಿತ ವ್ಯಕ್ತಿಗಳಿಂದ ಇತರರಿಗೆ ಸೋಂಕು ಹರಡವುದನ್ನು ತಪ್ಪಿಸಲು ಪರೀಕ್ಷೆಗಳನ್ನು ಹೆಚ್ಚಿಸುವಂತೆ ಕೇಂದ್ರವು ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಸಭೆ ನಡೆಸುವ ತೀರ್ಮಾನ ಕೈಗೊಂಡಿರುವುದು ಪ್ರಾಮುಖ್ಯತೆ ಪಡೆದಿದೆ.
Source: tv9kannada