Mysuru Dasara 2021: ಅಕ್ಟೋಬರ್ 1ರಿಂದ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

Sep 23, 2021

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ. ರಾಜ ಪರಂಪರೆಯ ಅರಮನೆಯಲ್ಲಿ ದಸರಾ ಸಿದ್ದತೆಗಳು ಮೇಳೈಸುತ್ತಿವೆ. ಆದರೆ ಅಕ್ಟೋಬರ್ 1ರಿಂದ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಅಕ್ಟೋಬರ್ 1ರಿಂದ ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕ ದಸರಾ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಯೊಳಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅರಮನೆ ಖಾಸಗಿ ದರ್ಬಾರ್ ಹಾಲ್‌ನಲ್ಲಿ ಅಕ್ಟೋಬರ್ 1 ಕ್ಕೆ ಶುಕ್ರವಾರ ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯಲಿದೆ. ಸಿಂಹಾಸನ ಜೋಡಣೆಗೂ ಮುನ್ನ ಹೋಮ ಹವನ ಮಾಡಲಾಗುತ್ತೆ. ಹೀಗಾಗಿ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಮತ್ತೊಂದು ಕಡೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ಕ್ಕೆ ಗಜಪಡೆಗೆ ತಾಲೀಮು ನಡೆಯುತ್ತಿದೆ. ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ ಮತ್ತೆ ತಾಲೀಮು ಮಾಡಿಸಲಾಗುತ್ತಿದೆ. ಮೊದಲಿಗೆ 200 ಕೆಜಿ ಭಾರ ಹೊರಿಸಿ ತಾಲೀಮು ಮಾಡಲಾಯಿತು. ಇಂದು 500 ಕೆಜಿ ಭಾರವನ್ನು ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ. ಹಂತ ಹಂತವಾಗಿ ತೂಕವನ್ನು ಹೆಚ್ಚಿಸಿ ಮೈಸೂರು ಅರಮನೆ ಆವರಣದಲ್ಲಿಯೇ ಕ್ಯಾಪ್ಟನ್ ಅಭಿಮನ್ಯುಗೆ ತಾಲೀಮು ನಡೆಸಲಾಗುತ್ತಿದೆ. ಮೈಸೂರು ದಸರಾ ದಿನದಂದು ಕ್ಯಾಪ್ಟನ್ ಅಭಿಮನ್ಯು 750 ಕೆಜಿಯ ಅಂಬಾರಿ ಹೊರಲಿದ್ದಾನೆ.

Source:tv9kannada