Kuvempu Birthday : ಅಭಿಜ್ಞಾನ ; ‘ಮನೆಯಲ್ಲಂತೂ ದನಗಳಿಲ್ಲ, ನಮ್ಮನ್ನು ದನ ಕಾಯಲು ಎಲ್ಲಿಗೆ ಕಳಿಸುತ್ತೀರಿ ಎಂದು ಕೇಳೇಬಿಟ್ಟೆವು’

Dec 29, 2021

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.

ಪೂರ್ಣಚಂದ್ರ ತೇಜಸ್ವಿ ಬರೆದ ‘ಅಣ್ಣನ ನೆನಪು’ ಕೃತಿಯಿಂದ.

‘ಓದದೇ ತಿರುಗಿಕೊಂಡಿದ್ದರೆ ಯಾರು ನಿಮಗೆ ಮನೆಯಲ್ಲಿ ಕೂರಿಸಿ ಊಟ ಹಾಕುತ್ತಾರೆ? ಮನುಷ್ಯ ಊಟ ಸಂಪಾದಿಸಲು ಏನಾದರೂ ಕೆಲಸ ಮಾಲೇಬೇಕು. ನೀವು ಸ್ಕೂಲಿಗೆ ಹೋಗದಿದ್ದರೆ ನಿಮ್ಮನ್ನು ದನ ಕಾಯಲು ಕಳಿಸಬೇಕಾಗುತ್ತದೆ’

ನಮ್ಮ ಮೊಂಡಾಟಕ್ಕೆ ರೇಗಿ ಹೇಳಿದರು.

ನಮ್ಮ ಮನೆಯಲ್ಲಿ ದನ ಎಮ್ಮೆ ಯಾವುದೂ ಇರಲಿಲ್ಲ. ಆದ್ದರಿಂದ ನಮ್ಮನ್ನು ದನ ಕಾಯಲು ಎಲ್ಲಿಗೆ ಕಳಿಸುತ್ತಾರೆಂದು ಕೇಳಿದೆವು. ನಮ್ಮ ಪ್ರಶ್ನೆ ಅವರನ್ನೂ ಚಿಂತಿಸುವಂತೆ ಮಾಡಿತು. ವಿದ್ಯಾಭ್ಯಾಸದ ಅಗತ್ಯವನ್ನು ನಮ್ಮ ತಲೆಗೆ ನಾಟುವಂತೆ ಮಾಡುವುದು ಹೇಗೆಂದು ಕೊಂಚ ಹೊತ್ತು ಯೋಚಿಸಿ ನೋಡು, ನಾವು ಯಾರೂ ನಿಮ್ಮನ್ನು ದನ ಕಾಯಲು ಕಳಿಸುವುದಿಲ್ಲ. ಆದರೆ ನಾವೆಲ್ಲ ಎಷ್ಟು ದಿನ ಇರುತ್ತೇವೆ. ಆಮೇಲಾದರೂ ನೀವು ಕೆಲಸ ಮಾಡಬೇಕಲ್ಲ. ವಿದ್ಯಾಭ್ಯಾಸ ಇಲ್ಲದವರು ಜಲಗಾರ ರಾಮನ ಕೆಲಸ ಮಾಡಿಕೊಂಡಿರಬೇಕಾಗುತ್ತದೆ. ನಾನು, ನಿನ್ನ ಅಮ್ಮ ಎಲ್ಲ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ, ಲೋಕ ಹೀಗೇ ಇರುತ್ತೆ ಅಂತ ನೀವು ತಿಳಿಯಬಾರದು’ ಎಂದು ಗಂಭೀರವಾಗಿ ಹೇಳಿದರು.

ಈ ಹೇಳಿಕೆಯಿಂದ ನಮಗೆ ವಿದ್ಯಾಭ್ಯಾಸದ ಹಿರಿಮೆ ಕಿಂಚಿತ್ ಅರ್ಥವಾಗದಿದ್ದರೂ ವಿದ್ಯಾಭ್ಯಾಸ ಮಾಡದಿದ್ದವನು ಜಲಗಾರ ರಾಮನಂತೆ ಬದುಕಬೇಕಾಗುತ್ತದೆ ಎನ್ನುವುದು ಕೊಂಚ ದಿಗಿಲಿಕ್ಕಿಸಿತು. ಒಂಟಿಕೊಪ್ಪಲು ಆಗ ಎಷ್ಟೊಂದು ಹಿಂದುಳಿದಿತ್ತೆಂದರೆ ತಲೆಯಮೇಲೆ ಮಲ ಹೊರುವ ಜಾಡಮಾಲಿಗಳ ದೊಡ್ಡ ಗುಂಪೇ ನಮ್ಮ ಮನೆಯಿಂದ ಕೊಂಚ ದೂರದಲ್ಲಿ ಕೇರಿ ಕಟ್ಟಿಕೊಂಡಿತ್ತು. ಅವರ ಬಡತನ, ಕೊಳಕು ಹೇಳಲಸಾಧ್ಯ! ನಾವು ಹೊಲದಕಡೆ ತಿರುಗಾಡಲು ಹೋದಾಗೆಲ್ಲ ಅವರ ಕೇರಿಯ ಕಡೆಗೆ ಇಣುಕಿ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದೆವು.

ಜಲಗಾರ ರಾಮ ಆ ಕೇರಿಯ ಅವರಲ್ಲಿ ಒಬ್ಬ. ಹಬ್ಬಗಳಲ್ಲಿ ವಿಶೇಷ ಅಡಿಗೆ ತಗೊಂಡು ಹೋಗಲೂ, ದಸರಾ ಸಮಯದಲ್ಲಿ ಇನಾಮು ಪಡೆಯಲೂ ನಮ್ಮ ಮನೆಗೆ ಬರುತ್ತಿದ್ದ. ನಮ್ಮ ಅಣ್ಣ ರಾಮಕೃಷ್ಣಾಶ್ರಮದಲ್ಲಿ ಇದ್ದಾಗಿನಿಂದಲೂ ಅವನು ಅವರಿಗೆ ಪರಿಚಯ. ಆ ಸಲುಗೆಯ ಮೇಲೆ ಅವನು ನಾವೇನಾದರೂ ‘ಇನಾಮು ಕೊಡುವುದಿಲ್ಲ’ ಎಂದು ಹೇಳಿದರೆ ನಮಗೇ ಹೆದರಿಸುತ್ತಿದ್ದ. ಎಲ್ಲರೆದುರೂ ”ನಿಮ್ಮ ಹೇಲು ಉಚ್ಚೆ ಎಲ್ಲ ಬಳಿದಿದ್ದೇನೆ! ನನಗೇ ಮುಂದೆ ಹೋಗೆಂದು ಹೇಳುತ್ತೀರಾ” ಎಂದು ಅವಮಾನವಾಗುವಂತೆ ದಬಾಯಿಸುತ್ತಿದ್ದ. ಜಲಗಾರ ರಾಮನ ಮೇಲೆ ಮತ್ತು ಕ್ಷೌರಕ್ಕೆ ಬರುತ್ತಿದ್ದ ದಾಸಿ ಮೇಲೆ ನಾವೆಷ್ಟೇ ಚಾಡಿ ಹೇಳಿದರೂ ಅವರಿಗೆ ನಮ್ಮ ತಂದೆ ಬಯ್ಯುತ್ತಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಸಿದ್ದೇಶ್ವರಾನಂದರ ಜೊತೆ ಇದ್ದಾಗಿನಿಂದಲೂ ಇವರು ಪರಿಚಯವಿದ್ದುದಿರಬೇಕು. ಈ ಇಬ್ಬರೂ ಕೆಲಸಕ್ಕೆ ಮನೆಗೆ ಬಂದರೆ ನಮ್ಮ ಜೂರತ್‌ಗಳಿಗೆ ಹೆಚ್ಚು ಬೆಲೆಯನ್ನೇ ಕೊಡುತ್ತಿರಲಿಲ್ಲ. ದಾಸಿ ಸಹ ರಾಮನಂತೆಯೇ! ನಮಗೆ ಚಂದಮಾಮದಲ್ಲಿ ಬರುವ ರಾಜಕುಮಾರರಂತೆ ಅಥವಾ ನಾಟಕದವರಂತೆ ಉದ್ದ ಕೂದಲು ಬಿಡಬೇಕೆಂದು ಎಷ್ಟೊಂದು ಆಸೆ ಇತ್ತು! ಕ್ಷೌರ ಮಾಡುವಾಗ ನಮಗೆ ಕೂದಲು ಸ್ವಲ್ಪ ಉದ್ದ ಬಿಡೋ ಎಂದು ಎಷ್ಟು ಹೇಳಿದರೂ ದಾಸಿ ನಮ್ಮ ತಂದೆ ಮಾತಿನ ಪ್ರಕಾರವೇ ಸಮ್ಮರ್ ಕಟ್ ಮಾಡಿ ನಮ್ಮ ದ್ವೇಷಕ್ಕೆ ತುತ್ತಾಗಿದ್ದ.

ದಾರಿ ಮಧ್ಯೆ ಜಲಗಾರ ರಾಮನ ಉದಾಹರಣೆಯ ಜೊತೆಗೆ ಒಂದಲ್ಲ ಒಂದು ದಿನ ನಾವು ಜೀವನವನ್ನು ಏಕಾಂಗಿಗಳಾಗಿ ಎದುರಿಸಬೇಕಾಗುತ್ತದೆ ಎನ್ನುವ ಸತ್ಯವನ್ನು ಹೇಳಿದ್ದು ಸಹ ನಮ್ಮ ಮೇಲೆ ಅಂಥದೇನೂ ಪರಿಣಾಮ ಮಾಡಲಿಲ್ಲ. ಏಕೆಂದರೆ ಅಣ್ಣ ಅಮ್ಮ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಆಗ ನಮಗೆ ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ಮೊಂಡಾಟ ಮುಂದುವರಿಸಿಕೊಂಡೇ ಸ್ಕೂಲಿನವರೆಗೂ ಹೋದೆವು. ಆಗ ಈಗಿನಂತೆ ಶಿಶುವಿಹಾರಕ್ಕೂ ಸಹ ಅಪ್ಲಿಕೇಶನ್ನು, ಇಂಟರ್‌ವ್ಯೂ, ಕ್ಯಾಪಿಟೇಶನ್ನು ಯಾವುದೂ ಇರಲಿಲ್ಲ. ಅಪ್ಪನೋ ಅಮ್ಮನೋ ಮಕ್ಕಳಿಗೆ ನಾಲ್ಕು ಚೆನ್ನಾಗಿ ಬಿಗಿದು ಎಳತಂದು ಸ್ಕೂಲಿಗೆ ಬಿಡುತ್ತಿದ್ದರು. ಮಿಕ್ಕಿದ್ದೆಲ್ಲಾ ಮೇಷ್ಟರ ಜವಾಬ್ದಾರಿ.

Abhijnana Kuvempu Birthday Special Anecdote from Annana Nenapu by Kannada writer Poornachadra Thejaswi

                                ಅಣ್ಣನ ನೆನಪಿನೊಂದಿಗೆ ತೇಜಸ್ವಿ

ನಮ್ಮ ತಂದೆ ಮೇಷ್ಟರ ಹತ್ತಿರ ಏನೋ ಮಾತಾಡಿದರು. ಮೇಷ್ಟರು ನನಗೆ ರಾಮಾಯಣದ ಮೇಲೆ ಕೆಲವು ಪ್ರಶ್ನೆ ಕೇಳಿದರು. ಚೈತ್ರನಿಗೆ ಅದನ್ನೂ ಕೇಳಲಿಲ್ಲ. ಇಬ್ಬರನ್ನೂ ಸ್ಕೂಲಿಗೆ ಸೇರಿಸಿಕೊಂಡರು. ಎಲ್ಲ ಕ್ಲಾಸುಗಳೂ ಒಂದೇ ರೂಮಿನಲ್ಲಿದ್ದರೂ ಹುಡುಗರು ಆಯಾ ಕ್ಲಾಸಿನ ಗುಂಪಿನಲ್ಲಿ ಕುಳಿತುಕೊಳ್ಳಬೇಕಿತ್ತು. ಚೈತ್ರ ನನ್ನ ಜೊತೆಯೇ ಕೂರುವುದೆಂದು ಹಠ ಹಿಡಿದ. ಅಣ್ಣ ಉಪಾಯಗಾಣದೆ ಒಂದೆರಡು ದಿನ ಅವನೊಟ್ಟಿಗೇ ಕುಳಿತಿರಲಿ ಎಂದು ಮೇಷ್ಟರಿಗೆ ಹೇಳಿದರು. ಅಣ್ಣ ನಮ್ಮನ್ನು ಕ್ಲಾಸಿನೊಳಗೆ ಬಿಟ್ಟು ನಿರ್ಗಮಿಸಿದ ಕೂಡಲೆ ನಮಗೆ ತಬ್ಬಲಿಗಳಾದಂತೆ ಅನ್ನಿಸಿತು.

ಅದು ಪಡುವಾರಳ್ಳಿ ಒಂಟಿಕೊಪ್ಪಲುಹಳ್ಳಿ ನಡುವಿದ್ದ ಸ್ಕೂಲು. ಹಳ್ಳಿ ಹುಡುಗರೇ ಬಹು ಸಂಖ್ಯೆಯಲ್ಲಿ ತುಂಬಿದ್ದರು. ಎಲ್ಲರೂ ಪಕ್ಕಾ ಕೊಳಕರು. ಅನೇಕರ ಮೂಗಿನಲ್ಲಿ ಸಿಂಬಳ! ಉಚ್ಚೆ ವಾಸನೆ! ನಾವೇನೂ ಅಂಥ ನಯ ನಾಜೂಕಿನ ಹುಡುಗರಲ್ಲದಿದ್ದರೂ ನಮಗೆ ಸ್ಕೂಲಿನ ಬಗ್ಗೆ ಇದ್ದ ಅಸಹನೆಯೂ ಸೇರಿ ವಿಪರೀತ ರೇಜಿಗೆಯಾಯ್ತು. ಮೇಷ್ಟರ ಪಾಡಿಗೆ ಮೇಷ್ಟರು ಎಂಥದೋ ಪಾಠ ಗೊಣಗುತ್ತಾ ಇದ್ದರು. ಹುಡುಗರ ಪಾಡಿಗೆ ಹುಡುಗರು ಅದಕ್ಕೆ ಸಂಪೂರ್ಣ ವಿಮುಖರಾಗಿ ಕುಳಿತು ಹರಟುತ್ತಾ ಜಗಳವಾಡುತ್ತಾ ಇದ್ದರು. ಆ ಸ್ಕೂಲು ಜಲಗಾರರ ಕೇರಿಗಿಂತ ಯಾವ ತರದಲ್ಲೂ ಆಪ್ಯಾಯಮಾನ ವಾಗಿರಲಿಲ್ಲ. ಒಂದಿಬ್ಬರು ಮದುವೆ ವಯಸ್ಸಿಗೆ ಬಂದಿದ್ದಂಥ ದಾಂಡಿಗರೂ ಒಂದನೇ ಕ್ಲಾಸಿನಲ್ಲಿ ಕುಳಿತಿದ್ದರು. ಅವರೆಲ್ಲಾ ಎಷ್ಟು ಕೆಟ್ಟವರಾಗಿದ್ದರೆಂದರೆ ಅಣ್ಣ ನಮ್ಮನ್ನು ಬಿಟ್ಟು ಕಣ್ಮರೆಯಾಗುತ್ತಲೂ ಅಕ್ಕಪಕ್ಕ ಇದ್ದವರು ನಮ್ಮತ್ತ ಸರಿದು ಕುಳಿತು, ಒಬ್ಬ ನನ್ನನ್ನು ಚಿವುಟಿದ, ಇನ್ನೊಬ್ಬ ಚೈತ್ರನ ಜೇಬಿನಲ್ಲಿದ್ದ ಬಳಪ ತೆಗೆದುಕೊಂಡು ಅರ್ಧ ಮುರಿದು ಜೇಬಿಗೆ ಹಾಕಿಕೊಂಡ. ಒಟ್ಟಿನಲ್ಲಿ ನಮ್ಮಿಬ್ಬರಿಗೂ ಆ ಸ್ಕೂಲು ಕ್ಷಣಕ್ಷಣಕ್ಕೂ ಅಸಹನೀಯವಾಗುತ್ತಾ ಹೋಯ್ತು. ದಿನವೆಲ್ಲಾ ಇವರ ನಡುವೆ ಇಲ್ಲಿ ಕುಳಿತಿರುವುದು ನಮಗೆ ಸಾಧ್ಯವೇ ಇರಲಿಲ್ಲ. ಕ್ಲಾಸಿನೊಳಗೇ ಇಷ್ಟು ಹಿಂಸೆ ಕೊಡುವವರು ಇನ್ನು ಕ್ಲಾಸು ಬಿಟ್ಟ ಮೇಲೆ ಏನೇನು ಮಾಡುತ್ತಾರೋ ಎಂದು ಗಾಬರಿಯಾಗಿ ನಾನು ಚೈತ್ರನಿಗೆ “ಮನೆಗೆ ಓಡಿಬಿಡೋಣ ಕಣೋ”ಎಂದು ಗುಟ್ಟಾಗಿ ಹೇಳಿದೆ. ಇಬ್ಬರೂ ಸ್ಟೇಟು ಪುಸ್ತಕ ತಗೊಂಡು ಮೇಷ್ಟರು ಅತ್ತ ತಿರುಗಿದಾಗ ಎದ್ದು, ತೆರೆದ ಬಾಗಿಲಿಂದ ಒಂದೇ ಉಸುರಿಗೆ ಮನೆ ಕಡೆ ಓಟ ಕಿತ್ತೆವು.

Source: tv9kannada