Kousalya Supraja Rama Review: ಮನಕಲಕುವ ಅಮ್ಮನ ಮಮತೆ;
ನಿರ್ದೇಶಕ ಶಶಾಂಕ್ ಸಿನಿಮಾಗಳಲ್ಲಿ ಮುಖ್ಯವಾಗಿ ಇರುವ ಅಂಶವೆಂದರೆ, ಫ್ಯಾಮಿಲಿ ಸೆಂಟಿಮೆಂಟ್. ಅದರಲ್ಲೂ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾಗಳನ್ನು ಮಾಡುವುದರಲ್ಲಿ ಅವರ ಆಸಕ್ತಿ ಹೆಚ್ಚು. ‘ಕೌಸಲ್ಯಾ ಸುಪ್ರಜಾ ರಾಮ’ ಕೂಡ ಅಂಥದ್ದೇ ಒಂದು ಸಿನಿಮಾ. ಈ ಟೈಟಲ್ ಇಟ್ಟಾಗಲೇ ಈ ಬಾರಿ ಅಮ್ಮ- ಮಗನ ಕಥೆ ಹೇಳಲು ನಿರ್ದೇಶಕ ಶಶಾಂಕ್ ರೆಡಿ ಆಗಿದ್ದಾರೆ ಎಂಬುದು ಗೊತ್ತಾಗಿತ್ತು. ಇದೀಗ ಸಿನಿಮಾ ತೆರೆಗೆ ಬಂದಿದೆ. ಹಾಗಾದ್ರೆ ಸಿನಿಮಾ ಹೇಗಿದೆ?
ಗಂಡಸು ಎಂಬ ಧಿಮಾಕಿನ ಕಥೆ
ಶಶಾಂಕ್ ತಮ್ಮ ಸಿನಿಮಾಗಳಲ್ಲಿ ಫ್ಯಾಮಿಲಿ ಆಡಿಯೆನ್ಸ್‌ಗೆ ಇಷ್ಟವಾಗುವ ಕಥೆ ಹೇಳುವುದರ ಜೊತೆಗೆ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಚರ್ಚೆಗೆ ತರುತ್ತಾರೆ. ಮೊಗ್ಗಿನ ಮನಸು, ಕೃಷ್ಣಲೀಲಾದಲ್ಲಿ ಅಂಥ ವಿಚಾರಗಳನ್ನು ಗಮನಿಸಬಹುದು. ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದಲ್ಲಿಯೂ ಆ ಪ್ರಯತ್ನವನ್ನು ಶಶಾಂಕ್ ಮುಂದುವರಿಸಿದ್ದಾರೆ. ಸಿದ್ದೇಗೌಡ (ರಂಗಾಯಣ ರಘು) ಎಂಬ ವ್ಯಕ್ತಿಗೆ ತಾನು ಗಂಡಸು, ತಾನು ಮಾಡಿದ್ದೇ ಕರೆಕ್ಟ್ ಎಂಬ ಅಹಂ. ಹೆಣ್ಣೆಂದರೆ, ಅಡುಗೆ ಮನೆಗೆ ಸೀಮಿತ, ಆಕೆಗೆ ಜವಾಬ್ದಾರಿ ಇಲ್ಲ, ಗಂಡ್ಸೇ ಎಲ್ಲವನ್ನೂ ನಿಭಾಯಿಸುವುದು ಎಂಬ ಧಿಮಾಕು ಆತನಿಗೆ. ತನ್ನ ಮಗ ರಾಮೇಗೌಡ (ಕೃಷ್ಣ) ಕೂಡ ತನ್ನಂತೆ ಇರಬೇಕು ಎಂಬುದು ಆತನ ಆಜ್ಞೆ. ಇಂತಹ ಮನಸ್ಥಿತಿ ಕೊನೆಗೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ? ‘ನಾನು ಗಂಡ್ಸು, ನಾನು ಮಾಡಿದ್ದೇ ಸರಿ..’ ಎಂಬ ಗುಣದಿಂದಾಗಿ ಈ ಅಪ್ಪ-ಮಗ ಏನೆಲ್ಲ ಪಾಠಗಳನ್ನು ಕಲಿಯುತ್ತಾರೆ ಎಂಬುದನ್ನು ಆಗಾಗ, ಹಾಸ್ಯಮಯವಾಗಿ, ಅಲ್ಲಲ್ಲಿ ಎಮೋಷನಲ್ ಆಗಿ ಹೇಳಿ ಸಫಲರಾಗಿದ್ದಾರೆ ಶಶಾಂಕ್.
ಪುರುಷ ಪ್ರಧಾನ ಅಹಂಗೆ ಪೆಟ್ಟು
ಬಹುತೇಕ ಎಲ್ಲರ ಮನೆಗಳಲ್ಲೂ ನಡೆಯಬಹುದಾದ ಕಥೆಯನ್ನು ಬಹಳ ಸೂಕ್ಷ್ಮವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಶಶಾಂಕ್. ಪುರುಷ ಅಹಂ ಯಾವ ಮಟ್ಟಕ್ಕೆ ಇರುತ್ತದೆ ಮತ್ತು ನಿಜವಾದ ಗಂಡಸು ಯಾರು ಎಂಬುದನ್ನು ಬಹಳ ಅರ್ಥಗರ್ಭಿತವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಎಮೋಷನಲ್ ಆದ ಪ್ರೇಮ ಕಥೆಗಳನ್ನೇ ಜಾಸ್ತಿ ಹೇಳಿದ್ದ ಶಶಾಂಕ್, ಈ ಬಾರಿ ಅದರ ಜೊತೆಗೆ ಅಮ್ಮ ಮಗನ ಬಾಂಧವ್ಯವನ್ನು ಮನಮುಟ್ಟುವ ರೀತಿಯಲ್ಲಿ ತೋರಿಸಿದ್ದಾರೆ. ಶಶಾಂಕ್ ಬರೆದ ಕಥೆಗೆ ಯಧುನಂದನ್ ರಚಿಸಿರುವ ಚಿತ್ರಕಥೆ, ಸಂಭಾಷಣೆ ಸಿನಿಮಾದ ತಾಕತ್ತನ್ನು ಜಾಸ್ತಿ ಮಾಡಿದೆ. ಮೊದಲರ್ಧ ಸರಾಗವಾಗಿ ಸಾಗುವ ಸಿನಿಮಾ, ದ್ವಿತಿಯಾರ್ಧಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ, ಕೊಂಚ ಅತ್ತಿತ್ತ ವಾಲುತ್ತದೆ. ಮುತ್ತುಲಕ್ಷ್ಮೀ ಎಂಬ ಪಾತ್ರದ ಹಿನ್ನೆಲೆಯನ್ನು ಇನ್ನಷ್ಟು ಸ್ಟ್ರಾಂಗ್ ಮಾಡುವ ಸಾಧ್ಯತೆಗಳಿದ್ದವು. ಕಥೆ ಸಾಗಿದಂತೆ, ಮಾಮೂಲಿ ಸ್ಪೀಡ್‌ಗೆ ಮರಳುವ ಕಥೆಯು ಅಂತಿಮವಾಗಿ ನೋಡುಗರನ್ನು ಭಾವನಾತ್ಮಕವಾಗಿ ಕಟ್ಟಿಹಾಕುವಲ್ಲಿ ಯಶಸ್ಸು ಪಡೆಯುತ್ತದೆ.
ಕಲಾವಿದರೇ ಹೈಲೈಟ್
ಶಶಾಂಕ್‌ಗೆ ಮೊದಲ ಗೆಲುವು ಸಿಕ್ಕಿರುವುದೇ ಕಲಾವಿದರ ಆಯ್ಕೆ ಮೂಲಕ. ತಾನು ಗಂಡಸು ಎಂಬ ಅಹಂನ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಅವರದ್ದು ಅಮೋಘ ನಟನೆ. ಕೌಸಲ್ಯಾ ಪಾತ್ರದಲ್ಲಿ ಸುಧಾ ಬೆಳವಾಡಿ ಮುದ್ಮುದ್ದು ಅಮ್ಮ. ಪುರುಷ ಪ್ರಧಾನ ಕುಟುಂಬದಲ್ಲಿ ಯಾವುದೇ ಸ್ವಾತಂತ್ರ್ಯ ಇಲ್ಲದೇ ಬದುಕುವ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಅವರ ಪಾತ್ರ ಮೂಡಿಬಂದಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ಇಲ್ಲಿದೆ ಎರಡು ಶೇಡ್‌ನ ಪಾತ್ರ. ಅದನ್ನವರು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ಬರುವ ಬೃಂದಾ ಆಚಾರ್ಯ ಪಾತ್ರವು ಇಷ್ಟವಾಗುತ್ತದೆ. ಪ್ರೇಕ್ಷಕರಿಗೆ ಇಲ್ಲಿ ಸಖತ್ ಸರ್ಪ್ರೈಸ್ ಎನಿಸುವುದು ನಟಿ ಮಿಲನಾ ನಾಗರಾಜ್ ಪಾತ್ರ. ಅದೇನೂ ಎಂಬುದನ್ನು ತೆರೆಮೇಲೆ ನೋಡಬೇಕು. ಸಿನಿಮಾವು ಎಲ್ಲೂ ಬೋರ್ ಆಗದಂತೆ ನೋಡಿಸಿಕೊಂಡುವ ಹೋಗುವುದಕ್ಕೆ ನಟ ನಾಗಭೂಷಣ್ ಅವರ ಕೊಡುಗೆ ಜಾಸ್ತಿ ಇದೆ. ಆಗಾಗ ಕಾಮಿಡಿ ಕಿಕ್ ಕೊಡುತ್ತ, ನಗಿಸುತ್ತಾರೆ ಅವರು.
ಮೋಡಿ ಮಾಡುವ ಅರ್ಜುನ್ ಜನ್ಯ
ಈ ಚಿತ್ರದ ‘ಶಿವಾನಿ..’, ‘ಇರು ಇರು..’ ಹಾಡುಗಳು ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತದಲ್ಲೂ ಅರ್ಜುನ್ ಜನ್ಯ ಹೆಚ್ಚು ಸ್ಕೋರ್ ಮಾಡುತ್ತಾರೆ. ಸುಜ್ಞಾನ್ ಅವರ ಛಾಯಾಗ್ರಹಣ ಚೆನ್ನಾಗಿದೆ. ಒಟ್ಟಾರೆ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಸಾರಾಂಶ ಮತ್ತು ಕೆಲ ಸಂಭಾಷಣೆಗಳು ಬಹುತೇಕರ ಮನಸ್ಸಿಗೆ ನಾಟುತ್ತದೆ.