KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

Mar 24, 2021

Yash: ಇತ್ತೀಚೆಗೆ ಇಡೀ ‘ಕೆಜಿಎಫ್​ ಚಾಪ್ಟರ್​ 2’ ತಂಡ ಒಂದು ಕಡೆ ಸೇರಿಕೊಂಡಿದೆ. ಪ್ರಶಾಂತ್​ ನೀಲ್​, ಯಶ್​, ಗರುಡ ರಾಮ್​, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರ ಜೊತೆ ರಾಧಿಕಾ ಪಂಡಿತ್​ ಕೂಡ ಒಟ್ಟಾಗಿ ಕಾಲ ಕಳೆದಿದ್ದಾರೆ.

ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​: ಚಾಪ್ಟರ್​ 2’ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಈ ಸಿನಿಮಾ ತಂಡದಿಂದ ಬರುವ ಎಲ್ಲ ಅಪ್​ಡೇಟ್​ಗಳಿಗಾಗಿ ಸಿನಿಪ್ರಿಯರು ಕಾಯುತ್ತ ಇರುತ್ತಾರೆ. ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ‘ರಾಕಿಂಗ್​ ಸ್ಟಾರ್​​’ ಯಶ್​ ಬಳಗದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳದ್ದು. ಅಂಥ ಎಲ್ಲ ಫ್ಯಾನ್ಸ್​ಗಾಗಿ ಲೇಟೆಸ್ಟ್ ಮಾಹಿತಿ ಹಂಚಿಕೊಂಡಿದೆ ‘ಕೆಜಿಎಫ್​ 2’ ಟೀಮ್​.

ಹೇಗೆ ಸಾಗುತ್ತಿದೆ KGF 2 ಕೆಲಸ?
‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಶೂಟಿಂಗ್​ ಈಗಾಗಲೇ ಮುಗಿದಿದೆ. ಜುಲೈ 16ರಂದು ಈ ಸಿನಿಮಾ ತೆರೆಕಾಣುವುದು ಕೂಡ ಖಚಿತ ಆಗಿದೆ. ಹಾಗಾದರೆ ಸದ್ಯ ಈ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ಪ್ರಶಾಂತ್​ ನೀಲ್​ ಉತ್ತರ ನೀಡಿದ್ದಾರೆ. ಸದ್ಯಕ್ಕೆ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಆ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಪ್ರಶಾಂತ್​ ನೀಲ್​ ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಡಬ್ಬಿಂಗ್​ ಶುರು ಮಾಡಿದ ರಾಕಿ ಭಾಯ್​!
ಈ ಬಹುನಿರೀಕ್ಷಿತ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಬಹಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಈಗ ರಾಕಿ ಭಾಯ್​ ಅಲಿಯಾಸ್​ ಅಭಿಮಾನಿಗಳ ನೆಚ್ಚಿನ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಡಬ್ಬಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಶ್ ಜೊತೆ ಇರುವ ಫೋಟೋವನ್ನು ಪ್ರಶಾಂತ್​ ನೀಲ್​ ಶೇರ್​ ಮಾಡಿಕೊಂಡಿದ್ದು, ‘ರಾಕಿ ಜೊತೆ ಡಬ್ಬಿಂಗ್​ ಮಾಡುವುದು ಯಾವಾಗಲೂ ರಾಕಿಂಗ್​ ಆಗಿರುತ್ತದೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಇತ್ತೀಚೆಗೆ ಇಡೀ ‘ಕೆಜಿಎಫ್​ ಚಾಪ್ಟರ್​ 2’ ತಂಡ ಒಂದು ಕಡೆ ಸೇರಿಕೊಂಡಿದೆ. ಪ್ರಶಾಂತ್​ ನೀಲ್​, ಯಶ್​, ಗರುಡ ರಾಮ್​, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರ ಜೊತೆ ರಾಧಿಕಾ ಪಂಡಿತ್​ ಕೂಡ ಒಟ್ಟಾಗಿ ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋವನ್ನೂ ಪ್ರಶಾಂತ್​ ಹಂಚಿಕೊಂಡಿದ್ದಾರೆ. ‘ಅದ್ಭುತವಾಗಿ ಶುರುವಾದ ಈ ಪಯಣಕ್ಕೆ ಕೊನೆ ಇಲ್ಲ’ ಎಂದು ತಮ್ಮ ಕೆಜಿಎಫ್​ ಫ್ಯಾಮಿಲಿ ಜೊತೆಗಿನ ಜರ್ನಿಯನ್ನು ಪ್ರಶಾಂತ್​ ಬಣ್ಣಿಸಿದ್ದಾರೆ.

‘ಕೆಜಿಎಫ್​ 1’ ಸೂಪರ್​ ಹಿಟ್​ ಆಗಿದ್ದರಿಂದ ಚಾಪ್ಟರ್​ 2 ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಅವರ ಆಗಮನದಿಂದಾಗಿ ಚಿತ್ರದ ತೂಕ ಹೆಚ್ಚಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ 17.7 ಕೋಟಿ​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಚಿತ್ರದ ಮೇಲೆ ಸಿನಿಪ್ರಿಯರಿಗೆ ಯಾವ ಮಟ್ಟಿಗಿನ ಕಾತರ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ. ಇನ್ನು ‘ಕೆಜಿಎಫ್​ 2’ ಬಿಡುಗಡೆಗೂ ಮುನ್ನವೇ ಪ್ರಶಾಂತ್​ ನೀಲ್​ ‘ಸಲಾರ್​’ ಸಿನಿಮಾದ ಕಡೆಗೆ ಗಮನ ಹರಿಸಿದ್ದು ಆ ಬಗ್ಗೆಯೂ ಅಚ್ಚರಿಯ ಸುದ್ದಿಗಳು ಕೇಳಿಬರುತ್ತಿವೆ.

Source:TV9Kannada