ವಿಜಯೇಂದ್ರ ಪ್ರಸಾದ್ ಅವರು ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು ಎಂಬುದನ್ನು ಕಂಗನಾ ವಿವರಿಸಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ‘ಎಮರ್ಜೆನ್ಸಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಗನಾ ರಣಾವತ್ ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ವಿಶೇಷ ಎಂದರೆ ರಾಜಮೌಳಿ (Rajamouli) ತಂದೆ, ಕಥೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅವರಿಗೆ ಈ ಸಿನಿಮಾ ಇಷ್ಟವಾಗಿದೆ. ಅಷ್ಟೇ ಅಲ್ಲ ಅನೇಕ ದೃಶ್ಯಗಳನ್ನು ನೋಡಿ ಅವರು ಕಣ್ಣೀರು ಹಾಕಿದ್ದಾರೆ. ಈ ವಿಚಾರವನ್ನು ಸ್ವತಃ ಕಂಗನಾ ರಣಾವತ್ ಬಿಚ್ಚಿಟ್ಟಿದ್ದಾರೆ.
ವಿಜಯೇಂದ್ರ ಪ್ರಸಾದ್ ಅವರು ಹಲವು ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ‘ಬಾಹುಬಲಿ’, ‘ಬಜರಂಗಿ ಭಾಯಿಜಾನ್’ ಸೇರಿ ಅನೇಕ ಹಿಟ್ ಸಿನಿಮಾಗಳಿಗೆ ಕಥೆ ನೀಡಿದ್ದು ವಿಜಯೇಂದ್ರ ಪ್ರಸಾದ್ ಅವರೇ. ಅವರ ಕಲ್ಪನೆಗೆ ಮತ್ತೊಬ್ಬರು ಸಾಟಿಯಿಲ್ಲ. ಅವರು ಈಗ ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು ಎಂಬುದನ್ನು ಕಂಗನಾ ವಿವರಿಸಿದ್ದಾರೆ.
ವಿಜಯೇಂದ್ರ ಪ್ರಸಾದ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿರುವ ಕಂಗನಾ, ‘ಸಂಪೂರ್ಣ ಎಡಿಟಿಂಗ್ ಮುಗಿದ ನಂತರ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದ ಮೊದಲ ವ್ಯಕ್ತಿ ವಿಜಯೇಂದ್ರ ಪ್ರಸಾದ್. ಅವರು ದೃಶ್ಯಗಳನ್ನು ನೋಡುವಾಗ ಹಲವಾರು ಬಾರಿ ಕಣ್ಣನ್ನು ಒರೆಸಿಕೊಂಡರು. ಸಿನಿಮಾ ನೋಡಿದ ನಂತರ ‘ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ನನ್ನ ಬಗ್ಗೆ ಮೆಚ್ಚುಗೆ ಸೂಚಿಸಿದರು’ ಎಂಬುದಾಗಿ ಕಂಗನಾ ಹೇಳಿದ್ದಾರೆ.
‘ನನ್ನ ಎಲ್ಲಾ ಗುರುಗಳ ಮತ್ತು ಹಿತೈಷಿಗಳ ಆಶೀರ್ವಾದದೊಂದಿಗೆ ಎಮರ್ಜೆನ್ಸಿ ಚಿತ್ರ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಬರಲು ಸಿದ್ಧವಾಗಿದೆ. ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ’ ಎಂದು ಕಂಗನಾ ತಿಳಿಸಿದ್ದಾರೆ.
ಕಂಗನಾ ನಿರ್ದೇಶನದ ಮೊದಲ ಸೋಲೋ ಡೈರೆಕ್ಷನ್ ಸಿನಿಮಾ ‘ಎಮರ್ಜೆನ್ಸಿ’. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ವಿಶಾಕ್ ನಾಯರ್, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಂಗನಾ ನಿರ್ಮಾಪಕಿ ಕೂಡ ಹೌದು.