Indian Railways: ಪ್ಯಾಸೆಂಜರ್ ರೈಲು ಸೇವೆ ಪೂರ್ಣ ಪ್ರಮಾಣದ ಪ್ರಯಾಣ: ಏಪ್ರಿಲ್ ಬಳಿಕ ಪುನಾರಂಭ ಸಾಧ್ಯತೆ
Indian Railway- Passenger Rail Services: ಹಂತ ಹಂತವಾಗಿ ಜನರ ಪ್ರಯಾಣಕ್ಕೆ ಲಭ್ಯವಾಗುತ್ತಿರುವ ಪ್ಯಾಸೆಂಜರ್ ರೈಲು ಸೇವೆಗಳು 2021ರ ಏಪ್ರಿಲ್ 1 ರ ಬಳಿಕ, ಪೂರ್ಣ ಪ್ರಮಾಣದಲ್ಲಿ ಸೇವೆಗೆ ಲಭ್ಯವಾಗಬಹುದು.
ದೆಹಲಿ: ಕೊರೊನಾ ಕಾಲದ ಬಿಕ್ಕಟ್ಟುಗಳು ಹಂತ ಹಂತವಾಗಿ ಕರಗುತ್ತಿವೆ. ಕೊವಿಡ್ ವಿರುದ್ಧದ ಲಸಿಕೆ ಬಂದ ನಂತರ ಹಾಗೂ ದೇಶವ್ಯಾಪಿ ಲಾಕ್ಡೌನ್ ಹಿಂಪಡೆದ ಬಳಿಕ, ಜನಜೀವನ ಯಥಾಸ್ಥಿತಿಗೆ ಬರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆಯೊಂದು ಆಗುತ್ತಿದೆ. ಇದುವರೆಗೆ ಪೂರ್ಣ ತೆರೆದಿರದ ಭಾರತೀಯ ಪ್ಯಾಸೆಂಜರ್ ರೈಲ್ವೇ ಸೇವೆಗಳು (Indian Railway- Passenger Rail Services) ಏಪ್ರಿಲ್ 1ರ ಬಳಿಕ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಸಿಗುವ ಸಾಧ್ಯತೆ ಕಂಡುಬಂದಿದೆ.
ಹಂತ ಹಂತವಾಗಿ ಜನರ ಪ್ರಯಾಣಕ್ಕೆ ಲಭ್ಯವಾಗುತ್ತಿರುವ ಪ್ಯಾಸೆಂಜರ್ ರೈಲು ಸೇವೆಗಳು 2021ರ ಏಪ್ರಿಲ್ 1 ರ ಬಳಿಕ, ಪೂರ್ಣ ಪ್ರಮಾಣದಲ್ಲಿ ಜನರ ಸೇವೆಗೆ ಲಭ್ಯವಾಗಬಹುದು ಎಂದು ಊಹಿಸಲಾಗಿದೆ. ಈಗಾಗಲೇ ಹಬ್ಬ, ಆಚರಣೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ನಡೆಸಲು ಜನರು ಆರಂಭಿಸಿದ್ದಾರೆ. ಜೊತೆಗೆ, ಏಪ್ರಿಲ್ ನಂತರ ಹಬ್ಬದ ಸಡಗರಗಳು ಹೆಚ್ಚಾಗುತ್ತವೆ. ಈ ಕಾರಣದಿಂದ ಊರಿಗೆ ಅಥವಾ ನೆಂಟರ ಮನೆಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ, ಅಗತ್ಯತೆ ಗಮನಿಸಿ ರೈಲ್ವೇ ಸೇವೆ ಪುನಾರಂಭಿಸುವ ಸಾಧ್ಯತೆ ಇದೆ.
ಮಾರ್ಚ್ 2020ರಲ್ಲಿ ಕೊವಿಡ್ ಕಾರಣದಿಂದ ದೇಶವ್ಯಾಪಿ ಲಾಕ್ಡೌನ್ ಘೋಷಿಸಲಾಯಿತು. ಅದರಂತೆ ರೈಲ್ವೇ ಸೇವೆಗಳು ಕೂಡ ನಿಲ್ಲಲ್ಪಟ್ಟವು. ಎಲ್ಲಾ ಪ್ಯಾಸೆಂಜರ್ ರೈಲು ಸೇವೆಗಳನ್ನು ಲಾಕ್ಡೌನ್ನಿಂದಾಗಿ ಸ್ಥಗಿತಗೊಳಿಸಲಾಯಿತು. ಆನಂತರ, ಕಳೆದ ಕೆಲವು ತಿಂಗಳಿನಿಂದ ರೈಲು ಸೇವೆ ಪುನಾರಂಭಿಸಲಾಗಿದೆ. ಕ್ರಮೇಣವಾಗಿ ಕಾರ್ಯನಿರ್ವಹಿಸುತ್ತಿರುವ ರೈಲುಗಳ ಸಂಖ್ಯೆಯನ್ನೂ ಏರಿಸಲಾಗುತ್ತಿದೆ. ಪ್ರಸ್ತುತ, ದೇಶದಲ್ಲಿ ಶೇ. 65ಕ್ಕೂ ಹೆಚ್ಚು ರೈಲುಗಳು ಕೆಲಸ ಮಾಡುತ್ತಿವೆ. 2021 ಜನವರಿಯಲ್ಲಿ, 250ಕ್ಕೂ ಹೆಚ್ಚು ರೈಲುಗಳು ಮತ್ತೆ ಪ್ರಯಾಣ ಆರಂಭಿಸಿವೆ.
ಪೂರ್ಣ ಪ್ರಮಾಣದ ಪ್ಯಾಸೆಂಜರ್ ರೈಲು ಸೇವೆ ಪುನಾರಂಭಕ್ಕೆ ಸದ್ಯ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಅದಕ್ಕಾಗಿ ಎಲ್ಲಾ ವಿಧದಲ್ಲಿ ಚರ್ಚೆ ಮಾಡಬೇಕು. ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ. ಒಂದುವೇಳೆ ಪೂರ್ಣ ಪ್ರಮಾಣದಲ್ಲಿ ಪ್ಯಾಸೆಂಜರ್ ರೈಲುಗಳು ಹಳಿಗೆ ಇಳಿದರೆ, ಜನರಲ್, ಶತಾಬ್ಧಿ, ರಾಜ್ಧಾನಿ ಹಾಗೂ ಬಹುತೇಕ ಎಲ್ಲಾ ಉಪನಗರ, ಮೆಟ್ರೋ ರೈಲುಗಳು ಕಾರ್ಯ ಆರಂಭಿಸಲಿವೆ.
ಪ್ರಸ್ತುತ ಪಶ್ಚಿಮ ರೈಲು ಮಾರ್ಗ ಮುಂಬೈನಲ್ಲಿ 704 ಲೋಕಲ್ ರೈಲುಗಳು ಸಂಚರಿಸುತ್ತಿವೆ. ಸೆಂಟ್ರಲ್ ರೈಲ್ವೇ ಮಾರ್ಗದಲ್ಲಿ 706 ರೈಲುಗಳು ಸಂಚರಿಸುತ್ತಿವೆ. ಈ ಮೂಲಕ, ಒಟ್ಟು ಸುಮಾರು 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ರೈಲ್ವೇ ಸೇವೆ ಬಳಸಿಕೊಳ್ಳುತ್ತಿದ್ದಾರೆ.
ಈ ನಡುವೆ, ಹೆಚ್ಚು ಪ್ರಯಾಣಿಕರ ಹರಿವನ್ನು ಗುರುತಿಸಿರುವ ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕ ಸ್ನೇಹಿ ಪಾವತಿ ವಿಧಾನವನ್ನು ಅಳವಡಿಸಿಕೊಂಡಿದೆ. ‘AutoPay’ ಸೌಲಭ್ಯವಿರುವ ‘i-Pay’ ಪಾವತಿ ವಿಧಾನವನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರ ಟಿಕೆಟ್ ಬುಕಿಂಗ್ ವಿಧಾನ ಹಾಗೂ ತತ್ಕಾಲ್ ಬುಕಿಂಗ್ನ ಮರುಪಾವತಿಯನ್ನು (Refund) ಸುಲಭವಾಗಿಸಿದೆ.
Source:TV9Kannada