Farmers Green Shawl ಸಾಲು ಸಾಲು ರೈತ ಪ್ರತಿಭಟನೆ: ಮೈಸೂರಿನಲ್ಲಿ ಹಸಿರು ಶಾಲುಗಳಿಗೆ ಹೆಚ್ಚಿದ ಡಿಮ್ಯಾಂಡ್!

Feb 11, 2021

ಮೈಸೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಅನ್ನದಾತರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದು, ಈಗಾಗಲೇ ರೈತರು ಟ್ರ್ಯಾಕ್ಟರ್ ಪೆರೇಡ್, ಕೆಂಪುಕೋಟೆಗೆ ಮುತ್ತಿಗೆ, ಉಪವಾಸ ಸತ್ಯಾಗ್ರಹ, ರಾಷ್ಟ್ರೀಯ ರಾಜ್ಯ ಹೆದ್ದಾರಿ ತಡೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಸೇರಿ ಹತ್ತು ಹಲವು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಅವರ ಕೋಪ ತಾಪ ಇನ್ನೂ ತಣ್ಣಗಾಗಿಲ್ಲ. ಹೋರಾಟಗಳು ಇನ್ನೂ ಮುಂದುವರಿದಿದೆ. ಈ ಮಧ್ಯೆ, ರೈತರ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಹೈಲೈಟ್ ಆಗಿರುವುದು ಅನ್ನದಾತರ ಟ್ರೇಡ್ ಮಾರ್ಕ್ ಆಗಿರುವ ಹಸಿರು ಶಾಲು.

ಹಸಿರು ಶಾಲು – ಹೆಚ್ಚಿದ ಡಿಮ್ಯಾಂಡ್
ಹೌದು ದೇಶದ ಬಾವುಟದಲ್ಲಿ ಸಮೃದ್ಧಿಯ ಸಂಕೇತವಾಗಿರುವುದು ಹಸಿರು. ಹಸಿರೇ ರೈತರ ಉಸಿರು. ಇಂತಹ ಹಸಿರು ಶಾಲನ್ನು ತಮ್ಮ ಹೆಗಲಿಗೇರಿಸಿ ಹೊರಟರೇ.. ಅದೇನೋ ಒಂದು ರೀತಿಯ ಗತ್ತು ಗಮತ್ತು. ಇನ್ನು ವಿಜಯದ ಸಂಕೇತವಾಗಿ ಆ ಹಸಿರು ಶಾಲನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಒಟ್ಟಿಗೆ ತಿರುಗಿಸುವುದನ್ನು ನೋಡುವುದೆ ಚೆಂದ. ಇಂತಹ ಹಸಿರು ಶಾಲಿಗೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯ ಕಿಚ್ಚು ಬೆಂಗಳೂರನ್ನು ಹೊರತುಪಡಿಸಿದರೆ ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ಮೈಸೂರಿನಲ್ಲಿ ಹೆಚ್ಚಾಗಿದೆ.

ಹೀಗಾಗಿ ಹಸಿರು ಶಾಲನ್ನು ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಗುಣಮಟ್ಟಕ್ಕೆ ತಕ್ಕಂತೆ ಹಸಿರು ಶಾಲಿನ ಬೆಲೆ ನಿಗದಿ ಮಾಡಲಾಗಿದೆ. ಒಂದು ಹಸಿರು ಶಾಲಿಗೆ 60 ರೂಪಾಯಿಯಿಂದ 350 ರೂಪಾಯಿವರೆಗೂ ಇದೆ. ಇದೀಗ ಮೈಸೂರಿನಲ್ಲಿ ಪ್ರತಿದಿನ ಸುಮಾರು 100 ರಿಂದ 150 ಶಾಲುಗಳು ಮಾರಾಟವಾಗುತ್ತಿದೆ. ಇದು ಕಳೆದ ತಿಂಗಳು ಅಂದರೆ ದೆಹಲಿಯಲ್ಲಿ ರೈತರ ಹೋರಾಟ ತೀವ್ರವಾದಾಗ ಹೆಚ್ಚಾಗಿತ್ತು. ಮೈಸೂರಿನಲ್ಲೇ ಕಳೆದ ಎರಡು ತಿಂಗಳಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಸಿರು ಶಾಲುಗಳು ಮಾರಾಟವಾಗಿವೆ.

ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆಯಾದ ದಿನದಿಂದ ಹಸಿರು ಶಾಲನ್ನು ನಾವು ರೈತರು ಬಳಸುತ್ತಿದ್ದೇವೆ. ಹಿಂದೆ ರೈತ ಸಂಘದ ಸದಸ್ಯರಾದವರಿಗೆ ಹಸಿರು ಶಾಲು ನೀಡಿ ಸ್ವಾಗತಿಸಲಾಗುತಿತ್ತು. ಇತ್ತೀಚೆಗೆ ಕೆಲವು ರಾಜಕೀಯ ನಾಯಕರು ಸಹ ಹಸಿರು ಶಾಲು ಬಳಸುತ್ತಾರೆ. ಇತ್ತೀಚೆಗೆ ಹಸಿರು ಶಾಲಿಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲರೂ ಹಸಿರು ಶಾಲನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ರೈತರ ಹೊರತಾಗಿ ಸಾರ್ವಜನಿಕರು ಹಸಿರು ಶಾಲನ್ನು ಬಳಸಿ ಅನ್ನದಾತರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಇದು ಖುಷಿಯ ವಿಚಾರ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಹಸಿರು ಶಾಲನ್ನು ಬಳಸುತ್ತಿರುವುದು ನೋವು ತಂದಿದೆ – ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ 

ಕಳೆದ ಒಂದು ತಿಂಗಳಿಂದ ಹಸಿರು ಶಾಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದು ಹಸಿರು ಶಾಲಿನ ಸೀಸನ್ ಆಗಿದೆ. ನಮ್ಮ ಬಳಿಯೂ ಸ್ಟಾಕ್ ಇಲ್ಲ. ಹಸಿರು ಶಾಲು ಹೆಚ್ಚಾಗಿ ತಯಾರಾಗುವುದು ತಮಿಳುನಾಡಿನ ತಿರುಪುರದಲ್ಲಿ. ನಾವು ಸಹ ಆರ್ಡರ್ ಮಾಡಿದ್ದೇವೆ ಇನ್ನು ಸ್ಟಾಕ್ ಬರಬೇಕಾಗಿದೆ. ಹೀಗಾಗಿಯೇ ಸಾಕಷ್ಟು ಮುಂಗಡ ಸಹ ಪಡೆಯಲಾಗಿದೆ. ಸ್ಟಾಕ್ ಬಂದ ನಂತರ ಹಸಿರು ಶಾಲು ಪೂರೈಕೆ ಮಾಡಲಾಗುವುದು ಎಂದು ಮೈಸೂರು ವ್ಯಾಪಾರಿ ಕಲ್ಪೇಶ್ ತಿಳಿಸಿದ್ದಾರೆ.

ದೇಶದ ಗೌರವ – ಎಲ್ಲರ ಹೆಮ್ಮೆ:
ಹಸಿರು ಶಾಲು ಅನ್ನದಾತರ ಹೆಮ್ಮೆ ಗೌರವದ ಸಂಕೇತ. ನಮಗೆ ಅನ್ನ ನೀಡುವ ಅನ್ನದಾತನ ಟ್ರೇಡ್ ಮಾರ್ಕ್ ಇದಾಗಿದೆ. ಹಸಿರು ಶಾಲು ಹೊದ್ದು ಬಂದವರನ್ನು ಬಹುತೇಕರು ಅತ್ಯಂತ ಗೌರವಪೂರ್ವಕವಾಗಿ ಕಾಣುತ್ತಾರೆ. ಇಂತಹ ಹಸಿರು ಶಾಲನ್ನು ಹಾಕಿಕೊಂಡು ಇಂದಿನ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂತಹ ಮಹತ್ವದ ಹಸಿರು ಶಾಲಿಗೆ ಎಲ್ಲರೂ ಗೌರವ ಸಲ್ಲಿಸುವಂತಾಗಲಿ. ಇದರ ದುರ್ಬಳಕೆ ನಿಲ್ಲಲಿ ಎನ್ನುವುದೇ ಟಿವಿ9 ಡಿಜಿಟಲ್‌ನ ಆಶಯ.

Source:TV9Kannada