Fact Check: ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ಯುವಜನರಿಗೆ ರೂ. 4000 ಕೊಡ್ತಾರಂತೆ! ಇದರಲ್ಲಿ ನಿಜ ಇದೆಯಾ?

Aug 19, 2021

ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬರುತ್ತಲೇ ಇರುತ್ತವೆ. ಆ ಪೈಕಿ ಎಷ್ಟು ಸತ್ಯವೋ ಸುಳ್ಳೋ ತಿಳಿದುಕೊಳ್ಳುವುದೇ ಹರಸಾಹಸ ಆಗಿಬಿಡುತ್ತದೆ. ಈಗ ತಾಜಾ ಉದಾಹರಣೆ ಅಂತ ಇದನ್ನೇ ತೆಗೆದುಕೊಳ್ಳಿ: ಕೊರೊನಾ ಚಿಕಿತ್ಸೆಗಾಗಿ ಯುವಜನರಿಗಾಗಿ ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ (Pradhanmantri Ramban Suraksha Yojana) ಅಡಿಯಲ್ಲಿ 4000 ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಈಗ ಈ ಸುದ್ದಿ ನಿಜವೋ ಸುಳ್ಳೋ ಎಂಬುದನ್ನು ಸರ್ಕಾರವೇ ಜನರಿಗೆ ಮಾಹಿತಿ ನೀಡುವಂತಾಗಿದೆ. ಪ್ರೆಸ್ ಇನ್​ಫರ್ಮೇಷನ್ ಬ್ಯುರೋದ ಫ್ಯಾಕ್ಟ್​ ಚೆಕ್​ (PIB Fact Check) ಈ ಸುದ್ದಿ ಸುಳ್ಳು ಎಂಬುದನ್ನು ಖಾತ್ರಿ ಪಡಿಸಿದೆ. ಕೇಂದ್ರ ಸರ್ಕಾರದಿಂದ ಇಂಥ ಯಾವ ಯೋಜನೆಯೂ ಚಾಲನೆಯಲ್ಲಿ ಇಲ್ಲ ಎಂದು ತಿಳಿಸಲಾಗಿದೆ.

ಈಗ ವೈರಲ್ ಸುದ್ದಿಯಲ್ಲಿ ಹಬ್ಬಿಸಿರುವಂತೆ ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ ಎಂಬುದರ ಅಡಿಯಲ್ಲಿ ಎಲ್ಲ ಯುವ ಜನರಿಗಾಗಿ ಕೊರೊನಾ ವೈರಸ್ ಚಿಕಿತ್ಸೆಗೆ 4000 ರೂಪಾಯಿಯ ಸಹಾಯ ದೊರೆಯುತ್ತದೆ. ನೋಂದಣಿಗಾಗಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಭರ್ತಿ ಮಾಡಿ. ಗಮನದಲ್ಲಿರಲಿ, ಅರ್ಜಿ ಸಲ್ಲಿಕೆಗೆ ಇಂಥದ್ದು ಕೊನೆ ದಿನ. ಬೇಗ ಬೇಗ ಅರ್ಜಿ ಹಾಕಿಕೊಳ್ಳಿ. ನನಗೆ ಈಗಾಗಲೇ ನಾಲ್ಕು ಸಾವಿರ ರೂಪಾಯಿ ಸಿಕ್ಕಿದೆ. ಈಗ ಇಲ್ಲಿ ನೀಡಿರುವ ಲಿಂಕ್​ ಮೂಲಕ ಅರ್ಜಿ ಪಡೆಯಿರಿ ಎಂಬ ಒಕ್ಕಣೆ ಹರಿದಾಡುತ್ತಿದೆ.

PIB Fact Check ಏನು ಹೇಳುತ್ತದೆ?
ಸರ್ಕಾರಿ ಸಂಸ್ಥೆಯಾದ ಪ್ರೆಸ್ ಇನ್​ಫರ್ಮೇಷನ್ ಬ್ಯುರೋ ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ. ಆ ನಂತರ ತಿಳಿಸಿರುವಂತೆ, ಕೇಂದ್ರ ಸರ್ಕಾರದಿಂದ ಇಂಥ ಯಾವ ಯೋಜನೆ (ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ) ನಡೆಯುತ್ತಾ ಇಲ್ಲ. ಇಂಥ ಸುಳ್ಳು ವೆಬ್​ಸೈಟ್​ಗಳಿಗೆ ನಿಮ್ಮ ನಿಜವಾದ ಮಾಹಿತಿಯನ್ನು ನೀಡಬೇಡಿ ಎಂದು ಹೇಳಲಾಗಿದೆ.

ಆಧಾರ್ ಮೇಲೆ ಸಾಲ
ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಅದರಲ್ಲಿ ಸಾಲ ನೀಡುವ ಬಗ್ಗೆ ಪ್ರಸ್ತಾವ ಇದೆ. ಆಧಾರ್​ ಸಂಖ್ಯೆಯ ಮೇಲೆ ಸಾಲ ಸಿಗುತ್ತದೆ ಎಂಬ ಭರವಸೆಯನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಪ್ರಧಾನಮಂತ್ರಿ ಯೋಜನೆ ಎಂದು ಹೆಸರಿಡಲಾಗಿದೆ. ಈ ವಾಟ್ಸಾಪ್ ಸಂದೇಶದಲ್ಲಿ ಬರೆದಿರುವಂತೆ, ಪ್ರಧಾಮಂತ್ರಿ ಯೋಜನಾ ಆಧಾರ್ ಕಾರ್ಡ್ ಸಾಲ, ಶೇ 1ರ ಬಡ್ಡಿ, ಶೇ 50ರ ರಿಯಾಯಿತಿ. 8126974825 ಸಂಖ್ಯೆಗೆ ಕರೆ ಮಾಡಿ ಮಾತನಾಡಿ.

ಪಿಐಬಿಯಿಂದ ಈ ಸಂದೇಶದಿಂದ ಸತ್ಯಾಂಶ ಏನು ಎಂಬುದನ್ನು ಪರಿಶೀಲಿಸಲಾಗಿದೆ. ಅದು ಹೇಳಿರುವಂತೆ, ವಾಟ್ಸಾಪ್​ನಲ್ಲಿ ಹರಿದಾಡುತ್ತಿರುವ ಶೇ 1ರ ಬಡ್ಡಿ ದರರಲ್ಲಿ ಆಧಾರ್​ ಕಾರ್ಡ್​ ಮೇಲೆ ಸಾಲ ನೀಡಲಾಗುವುದು ಎಂಬ ಮಾಹಿತಿ ಸುಳ್ಳು. ಪ್ರಧಾನಮಂತ್ರಿ ಹೆಸರಲ್ಲಿ ಅಂಥ ಯಾವ ಯೋಜನೆಯೂ ಇಲ್ಲ ಎನ್ನಲಾಗಿದೆ.

ಈ ರೀತಿಯ ಸುದ್ದಿಯ ಸತ್ಯವನ್ನು ಹೇಗೆ ತಿಳಿಯುವುದು?
ಯಾವುದೇ ಸುದ್ದಿ ಅಥವಾ ಮಾಹಿತಿಯಲ್ಲಿ ನೀಡಲಾದ ಸತ್ಯಾಂಶಗಳ ಬಗ್ಗೆ ಸಂದೇಹವಿದ್ದರೆ ಅದನ್ನು PIB FactCheckಗೆ ಕಳುಹಿಸಬಹುದು. ಸಂಪೂರ್ಣ ತನಿಖೆಯ ನಂತರ, ನಿಮಗೆ ಸರಿಯಾದ ಮಾಹಿತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಆ ವಿವರವನ್ನು PIB FactCheckಗೆ ವಿವಿಧ ಮೂಲಗಳ ಮೂಲಕ ಕಳುಹಿಸಬಹುದು.

Source: tv9 Kannada