Deepak Punia: ಸೆಮಿ ಫೈನಲ್ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ: ಭಾರತಕ್ಕೆ ಪದಕದ ನಿರೀಕ್ಷೆ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷ ಕುಸ್ತಿಪಟುಗಳಾದ ರವಿ ದಹಿಯಾ, ದೀಪಕ್ ಪುನಿಯಾ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದು ಬೀಗಿದ್ದು ಸೆಮಿ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಪುರುಷರ 57 ಕೆ.ಜಿ ವಿಭಾಗದಲ್ಲಿ ರವಿ ದಹಿಯಾ ಮತ್ತು ಪುರುಷರ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು. ಈ ಮೂಲಕ ಪದಕದ ಆಸೆ ಮೂಡಿಸಿದ್ದಾರೆ.
ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.
ಇತ್ತ ಪುರುಷರ 86 ಕೆ.ಜಿ. ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಕುಸ್ತಿಪಟು ದೀಪಕ್ ಪುನಿಯಾ ಕೂಡಾ ನೈಜೀರಿಯಾದ ಅಗಿಮೋರ್ ಎದುರು 12-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇವರು ಚೀನಾದ ಶೂಶೆನ್ ಲಿನ್ ವಿರುದ್ಧ 6-3ರಲ್ಲಿ ರೋಚಕ ಗೆಲುವು ದಾಖಲಿಸಿದರು. ಜಿದ್ದಾಜಿದ್ದಿನಿಂದ ಸಾಗಿದ ಸಮಬಲದ ಹೋರಾಟದ ಕೊನೆಯ ಕ್ಷಣದಲ್ಲಿ ದೀಪಕ್ ಮೇಲುಗೈ ಸಾಧಿಸಿದರು.
Source: Tv9 kannada