Budget 2023: ಈ ಬಾರಿಯ ಬಜೆಟ್ ಗಾತ್ರ ಎಷ್ಟು? ವಿತ್ತೀಯ ಕೊರತೆ, ಖರ್ಚಿನ ವಿವರ ಇಲ್ಲಿದೆ
Budget Size 2023-24; ಈ ಬಾರಿಯ ಬಜೆಟ್ ಗಾತ್ರ ಎಷ್ಟಿದೆ? ವಿತ್ತೀಯ ಕೊರತೆ ಕಳೆದ ಬಾರಿಗಿಂತ ಎಷ್ಟು ಕಡಿಮೆಯಾಗಿದೆ? ಇಲ್ಲಿದೆ ಪೂರ್ತಿ ವಿವರ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2023-24ನೇ ಸಾಲಿನ ಬಜೆಟ್ (Budget 2023) ಅನ್ನು ಬುಧವಾರ ಮಂಡನೆ ಮಾಡಿದ್ದಾರೆ. ಈ ಬಾರಿ ಮಂಡನೆ ಮಾಡಲಾದ ಬಜೆಟ್ನ ಒಟ್ಟು ವೆಚ್ಚ 45,03,097 ಕೋಟಿ ರೂ. ಆಗಿದೆ. ಕಳೆದ ವರ್ಷ 41.9 ಲಕ್ಷ ಕೋಟಿ ರೂ. ವೆಚ್ಚದ ಬಜೆಟ್ ಮಂಡನೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 3 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾದಂತಾಗಿದೆ. ಈ ಬಾರಿಯ ಬಜೆಟ್ನಲ್ಲಿ ಸಾಲಗಳನ್ನು ಹೊರತುಪಡಿಸಿ ಒಟ್ಟು 27.2 ಲಕ್ಷ ಕೋಟಿ ಸ್ವೀಕೃತಿ, ನಿವ್ವಳ ತೆರಿಗೆ ಸ್ವೀಕೃತಿ 23.3 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ದೇಶದ ಜಿಡಿಪಿಯ ಶೇ 5.9ರಷ್ಟು ವಿತ್ತೀಯ ಕೊರತೆ ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಮಾರುಕಟ್ಟೆ ಸ್ವೀಕೃತಿ ಅಂದಾಜು 11.8 ಲಕ್ಷ ಕೋಟಿ ರೂ. ನಿರೀಕ್ಷಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ (2022-23) ಪರಿಷ್ಕೃತ ವೆಚ್ಚ, ಸ್ವೀಕೃತಿಯ ವಿವರವನ್ನೂ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಸಾಲಗಳನ್ನು ಹೊರತುಪಡಿಸಿ ಒಟ್ಟು 24.3 ಲಕ್ಷ ಕೋಟಿ ಸ್ವೀಕೃತಿ, ನಿವ್ವಳ ತೆರಿಗೆ ಆದಾಯ 20.9 ಲಕ್ಷ ಕೋಟಿ ರೂ. ಆಗಿದೆ. ಒಟ್ಟು ವೆಚ್ಚ 41.9 ಲಕ್ಷ ಕೋಟಿ ರೂ, ಆಗಿದ್ದು, ವಿತ್ತೀಯ ಕೊರತೆ ಜಿಡಿಪಿಯ ಶೇ 6.4ರಷ್ಟು ಇದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ. ಈ ಲೆಕ್ಕಾಚಾರಕ್ಕೆ ಹೋಲಿಸಿದರೆ ಮುಂಬರುವ ಹಣಕಾಸು ವರ್ಷದ ವಿತ್ತೀಯ ಕೊರತೆ ಪ್ರಮಾಣ ತುಸು ಕಡಿಮೆ ಇರಲಿದೆ.
2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ 4.5ರ ಒಳಗೆ ತರುವ ಗುರಿಗೆ ನಾವು ಬದ್ಧರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ ವಿತ್ತೀಯ ಕೊರತೆ ಕಡಿಮೆಯಾಗುತ್ತಿದೆ. ಮುಂಬರುವ ಹಣಕಾಸು ವರ್ಷದಲ್ಲಿ ಇದು ಶೇ 5.9ಕ್ಕೆ ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಂಡವಾಳ ವೆಚ್ಚವನ್ನು ಏಪ್ರಿಲ್ 1ರ ವೇಳೆಗೆ ಶೇ 33ರಷ್ಟು, ಅಂದರೆ 10 ಲಕ್ಷ ಕೋಟಿ ರೂ. ಹೆಚ್ಚಿಸುವ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದು ದೇಶದ ಒಟ್ಟಾರೆ ಆರ್ಥಿಕ ಉತ್ಪಾದನೆಯ ಶೇ 3.3ರಷ್ಟಾಗಲಿದೆ. ಜತೆಗೆ, ಮಧ್ಯಮ ವರ್ಗದವರಿಗೆ ನೆರವಾಗುವುದಕ್ಕಾಗಿ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿಯೂ ಅವರು ಬದಲಾವಣೆ ಮಾಡಿದ್ದಾರೆ.
Source: TV9Kannada