Budget 2021 | ಹಳೆಯ, ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಲು ಹೊಸ ನೀತಿ ಘೋಷಿಸಿದ ನಿರ್ಮಲಾ ಸೀತಾರಾಮನ್​

Feb 1, 2021

ಮಿತಿಮೀರುತ್ತಿರುವ ಮಾಲಿನ್ಯ ಮತ್ತು ಇಂಧನ ಬಳಕೆ ಕಡಿಮೆ ಮಾಡುವ ಸಲುವಾಗಿ ವಿದ್ಯುತ್​ ಚಾಲಿತ ವಾಹನಗಳನ್ನು ಉತ್ತೇಜಿಸಲು, ಮೋಟಾರು ವಾಹನಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು 2019ರ ಜುಲೈ 26ರಂದು ಸಾರಿಗೆ ಇಲಾಖೆ ಪ್ರಸ್ತಾಪ ಇಟ್ಟಿತ್ತು. ನಂತರ ಸ್ಕ್ರಾಪಿಂಗ್ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಯೂ ಸಿಕ್ಕಿತ್ತು.

ದೆಹಲಿ: ಹಳೆಯದಾದ ಮತ್ತು ಮಾಲಿನ್ಯಕಾರಕ ವಾಹನಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಇಂದು ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಹೊಸ ನೀತಿ ಘೋಷಿಸಿದ್ದು, ಇದನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಅನುಷ್ಠಾನಕ್ಕೆ ತರಬೇಕಿದೆ.

ಈ ನೂತನ ಸ್ವಯಂಪ್ರೇರಿತ ಸ್ಕ್ರಾಪಿಂಗ್​ ನಿಯಮದಂತೆ ಖಾಸಗಿ ವಾಹನಗಳನ್ನು 20 ವರ್ಷ ಹಳೆಯ ಖಾಸಗಿ ವಾಹನಗಳನ್ನು ಮತ್ತು 15ವರ್ಷಗಳ ಹಳೆಯ ವಾಣಿಜ್ಯ ಬಳಕೆ ವಾಹನಗಳನ್ನು ಸಂಪೂರ್ಣ ಪರಿಶೀಲನೆಗೆ ಒಡ್ಡಬೇಕು. ಅದರಲ್ಲಿ ಅವುಗಳ ಸಾಮರ್ಥ್ಯ ಕುಂದಿದ್ದು ಕಂಡುಬಂದರೆ ಸ್ವಯಂಪ್ರೇರಣೆಯಿಂದ ಮಾಲೀಕರು ಗುಜರಿಗೆ ಹಾಕಲೇಬೇಕಾಗುತ್ತದೆ. ವಾಹನಗಳ ಹೊಸ ಸ್ಕ್ರಾಪಿಂಗ್​ ನೀತಿ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುತ್ತದೆ ಹಾಗೇ ದೇಶದ ಆಮದು ಶುಲ್ಕವನ್ನು ದೊಡ್ಡಮಟ್ಟದಲ್ಲಿ ಕಡಿತಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿರುವ 15ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು. 2022ರ ಏಪ್ರಿಲ್​ 1ರಿಂದ ಅದು ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಕಳೆದ ವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು.

ಮಿತಿಮೀರುತ್ತಿರುವ ಮಾಲಿನ್ಯ ಮತ್ತು ಇಂಧನ ಬಳಕೆ ಕಡಿಮೆ ಮಾಡುವ ಸಲುವಾಗಿ ವಿದ್ಯುತ್​ ಚಾಲಿತ ವಾಹನಗಳನ್ನು ಉತ್ತೇಜಿಸಲು, ಮೋಟಾರು ವಾಹನಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು 2019ರ ಜುಲೈ 26ರಂದು ಸಾರಿಗೆ ಇಲಾಖೆ ಪ್ರಸ್ತಾಪ ಇಟ್ಟಿತ್ತು. ನಂತರ ಸ್ಕ್ರಾಪಿಂಗ್ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಯೂ ಸಿಕ್ಕಿತ್ತು.

Source: TV9Kannada