Budget 2021 | ಭಾರತದಲ್ಲಿ ಲಕ್ಷ ಜನರಿಗೆ ಒಬ್ಬ ಮನೋವೈದ್ಯನೂ ಇಲ್ಲ
ಜ್ವರ ಬಂದಾಗ ಆಸ್ಪತ್ರೆಗೆ ಹೋಗುವಂತೆಯೇ, ಮಾನಸಿಕ ಕಾಯಿಲೆ, ಖಿನ್ನತೆಗಳಿಗೂ ವೈದ್ಯರನ್ನು ಸಂಪರ್ಕಿಸಬೇಕು ಎಂಬ ತಿಳಿವಳಿಕೆ ಜನರಲ್ಲಿ ಹುಟ್ಟಬೇಕು. ಇವುಗಳೆಲ್ಲ ಸಾಧ್ಯವಾಗಲು ಮಾನಸಿಕ ತಜ್ಞರ ಹೆಚ್ಚಳ ಮಾಡಬೇಕಿರುವುದೇ ಸರ್ಕಾರದ ಎದುರಿನ ಮೊದಲ ಹೆಜ್ಜೆ.
ಒಂದು ಲಕ್ಷ ಜನಸಂಖ್ಯೆಗೆ ಮೂವರು ಮನೋವೈದ್ಯರಾದರೂ ಇರಬೇಕು ಎನ್ನುತ್ತದೆ ಜಾಗತಿಕ ಸೂಚ್ಯಂಕ. ಐರೋಪ್ಯ ದೇಶಗಳಲ್ಲಿ ಲಕ್ಷ ಜನರಿಗೆ ಆರು ಮನೋವೈದ್ಯರು ಲಭ್ಯರಿದ್ದಾರಂತೆ. ಭಾರತದಲ್ಲಿ ಮಾತ್ರ ಲಕ್ಷಕ್ಕೆ 0.75 ಮನೋವೈದ್ಯರಷ್ಟೇ ಇದ್ದಾರೆ ಎನ್ನುತ್ತದೆ ಅಂಕಿಅಂಶ.ಅಲ್ಲದೇ ದೇಶದಲ್ಲಿ ವರ್ಷಕ್ಕೆ ಕೇವಲ 700 ಮನೋವೈದ್ಯರಷ್ಟೇ ಸೃಷ್ಟಿಯಾಗುತ್ತಿದ್ದಾರೆ. ಇದೇ ಸರಾಸರಿಯಲ್ಲಿ ಮುಂದುವರೆದರೆ ವರ್ಷಂಪ್ರತಿ 2000 ಮನೋವೈದ್ಯರ ಕೊರತೆ ಉಂಟಾಗಲಿದೆ. ಈ ಅಂಕಿಅಂಶವೇ ಸಾಕು ಮಾನಸಿಕ ಆರೋಗ್ಯವನ್ನು ಎಲ್ಲಿಟ್ಟಿದ್ದೇವೆಂದು ತಿಳಿಸಲು.
ಈ ವರ್ಷದ ಬಜೆಟ್: ನಿರೀಕ್ಷೆಯೇನು? ಮಾಡಬೇಕಾದದ್ದೇನು?
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ರಾತ್ರಿ ಕಳೆದು ಹಗಲು ಮೂಡುವಷ್ಟರಲ್ಲಿ ಸುಧಾರಣೆ ಮಾಡಲಂತೂ ಸಾಧ್ಯವಿಲ್ಲ. ಅದೊಂದು ನಿಧಾನಗತಿಯ ಪ್ರಕ್ರಿಯೆ. ಆದರೆ ಈ ನಿಧಾನಕ್ಕೇ ಒಂದಿಷ್ಟು ವೇಗ ತುಂಬುವ ನಿರೀಕ್ಷೆಗಳನ್ನು ಪ್ರಸಕ್ತ ಬಜೆಟ್ ಮೂಲಕ ನಿರೀಕ್ಷಿಸಬಹುದು.
ಸರ್ಕಾರಿ ಯೋಜನೆಗಳು ಮಾನಸಿಕ ಆರೋಗ್ಯವನ್ನು ಪರಿಗಣಿಸಲಿ
ಮೊತ್ತಮೊದಲು ಮಾನಸಿಕ ಆರೋಗ್ಯ ಕ್ಷೇತ್ರವನ್ನು ಆದ್ಯತೆಯ ವಿಷಯವಾಗಿ ಸರ್ಕಾರ ಮತ್ತು ಸಾರ್ವಜನಿಕರು ಪರಿಗಣಿಸಬೇಕು. ಜ್ವರ ಬಂದಾಗ ಆಸ್ಪತ್ರೆಗೆ ಹೋಗುವಂತೆಯೆ, ಮಾನಸಿಕ ಖಾಯಿಲೆ, ಖಿನ್ನತೆಗಳಿಗೂ ವೈದ್ಯರನ್ನು ಸಂಪರ್ಕಿಸಬೇಕು ಎಂಬ ತಿಳಿವಳಿಕೆ ಜನರಲ್ಲಿ ಹುಟ್ಟಬೇಕು. ಇವುಗಳೆಲ್ಲ ಸಾಧ್ಯವಾಗಲು ಮಾನಸಿಕ ತಜ್ಞರ ಹೆಚ್ಚಳ ಮಾಡಬೇಕಿರುವುದೇ ಸರ್ಕಾರದ ಎದುರಿನ ಮೊದಲ ಹೆಜ್ಜೆ. ಆಯುಷ್ಮಾನ್ ಭಾರತ್ದಂತಹ ಯೋಜನೆಯಲ್ಲಿ ಮಾನಸಿಕ ಆರೋಗ್ಯವನ್ನು ಪರಿಗಣಿಸಿಲ್ಲ ಎಂಬುದು ಬಹುದೊಡ್ಡ ದುರಂತವಲ್ಲದೇ ಮತ್ತೇನಲ್ಲ. 2021ರ ಬಜೆಟ್ ಆದರೂ ಮಾನಸಿಕ ಆರೋಗ್ಯವನ್ನು ಆದ್ಯತೆಯ ಮೇರೆಗೆ ಪರಿಗಣಿಸಲಿ ಎಂಬುದೇ ಆಶಯ.
ದೇಶಾದ್ಯಂತ ಮಾನಸಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು. ಓರ್ವ ವ್ಯಕ್ತಿ ಒತ್ತಡ, ಖಿನ್ನತೆಯಿಂದ ಬಳಸುತ್ತಿದ್ದರೆ ಸಮಾಜ ಅವರ ಜತೆ ನಿಲ್ಲಬೇಕಾದ ರಾಷ್ಟ್ರಿಯ ಮಾನಸಿಕ ಆರೋಗ್ಯ ನೀತಿಯನ್ನು ಜಾರಿಗೆ ತರಬೇಕು. ಸದ್ಯ ಮೆಟ್ರೋ ನಗರಗಳಿಗೆ ಸೀಮಿತವಾದ ಉತ್ತಮ ಮನೋವೈದ್ಯರು ಗ್ರಾಮೀಣ ಭಾಗಗಳಲ್ಲೂ ಸೇವೆ ಸಲ್ಲಿಸುವಂತಾಗಬೇಕು. ಇವೆಲ್ಲವೂ ಸಾಧ್ಯವಾಗಲು ಮನೋವೈದ್ಯರ ಸಂಖ್ಯೆ ಹೆಚ್ಚಿಸಲು ಉತ್ತೇಜನ ನೀಡಬೇಕು.ಈ ವರ್ಷದ ಬಜೆಟ್ ಮೇಲೆ ಇಂತಹ ಬೆಟ್ಟದಷ್ಟು ನಿರೀಕ್ಷೆಗಳಂತೂ ಇವೆ.
Source: TV9 Kannada