Ananth Nag Birthday: 74ನೇ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೊ ಅನಂತ್ ನಾಗ್

Sep 4, 2021

ವಿಭಿನ್ನ ಪಾತ್ರಗಳ ಮುಖಾಂತರ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಜನ್ಮದಿನವಿಂದು. 1948ರ ಸೆಪ್ಟೆಂಬರ್ 4ರಂದು ಭಟ್ಕಳ ತಾಲೂಕಿನ ಶಿರಾಲಿಯ ನಾಗರಕಟ್ಟೆಯಲ್ಲಿ ಜನಿಸಿದರು. ಇಂದು 74ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ಕನ್ನಡ ಚಿತ್ರರಂಗ ಶುಭಾಶಯಗಳನ್ನು ಕೋರಿದೆ. ಪ್ರಸ್ತುತ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿರುವ ಅವರು, ತಮ್ಮ ಪೋಷಕ ಪಾತ್ರಗಳ ಮುಖಾಂತರ ಗಮನ ಸೆಳೆಯುತ್ತಿದ್ದಾರೆ.

ನಾಗರಕಟ್ಟೆಯಲ್ಲಿ ಜನಿಸಿದ ಅನಂತ್​ನಾಗ್, ಬಾಲ್ಯವನ್ನು ಅಲ್ಲೇ ಕಳೆದರು. ನಂತರ ಉಡುಪಿಯ ಅಜ್ಜರಕಾಡಿನ ಕ್ಯಾಥೋಲಿಕ್ ಸ್ಕೂಲ್​, ದಕ್ಷಿಣ ಕನ್ನಡದ ಆನಂದ ಆಶ್ರಮ, ಉತ್ತರ ಕನ್ನಡದ ಚಿತ್ರಾಪುರ ಮಠಗಳಲ್ಲಿ ತಮ್ಮ ಶಾಲಾ ವ್ಯಾಸಂಗವನ್ನು ಮಾಡಿದರು. 9ನೇ ತರಗತಿಗೆ ಮುಂಬೈಗೆ ತೆರಳಿ ವ್ಯಾಸಂಗವನ್ನು ಮುಂದುವರೆಸಿದರು. ಸೇನೆಗೆ ಸೇರುವ ಬಯಕೆಯಿದ್ದ ಅವರಿಗೆ ತೂಕ ಕಡಿಮೆಯಿದ್ದುದು ಹಾಗೂ ದೃಷ್ಟಿ ದೋಷದ ಸಮಸ್ಯೆ ಹಿನ್ನೆಡೆ ಉಂಟುಮಾಡಿತು. ನಂತರ ರಂಗಭೂಮಿಯ ಕಡೆಗೆ ಮುಖಮಾಡಿದ ಅವರು, ಕೊಂಕಣಿ, ಕನ್ನಡ ಹಾಗೂ ಮರಾಠಿ ಭಾಷೆಯ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.

1973ರಲ್ಲಿ ಅನಂತ್​ನಾಗ್ ‘ಸಂಕಲ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1975ರಲ್ಲಿ ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ಯಲ್ಲಿ ಮುಖ್ಯಪಾತ್ರವನ್ನು ಅನಂತ್ ನಾಗ್ ನಿರ್ವಹಿಸಿದರು. ಆ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಯಿತು. ಶಂಕರ್​ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರವಾಹಿಯಲ್ಲಿ ಅನಂತ್ ನಾಗ್ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಅನಂತ್​ನಾಗ್ ಈವರೆಗೆ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅವುಗಳಲ್ಲಿ ಕನ್ನಡದ ಸುಮಾರು 200ಕ್ಕೂ ಅಧಿಕ ಚಿತ್ರಗಳು ಸೇರಿವೆ. ಇವುಗಳಲ್ಲದೇ ಹಿಂದಿ, ಮರಾಠಿ, ಮಲಯಾಳಂ, ತಮಿಳು, ತೆಲುಗು ಮೊದಲಾದ ಭಾಷೆಯ ಚಿತ್ರಗಳಲ್ಲಿ ಅನಂತ್​ನಾಗ್ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕೆಜಿಎಫ್ ಚಾಪ್ಟರ್ 1’, ‘ಕವಲುದಾರಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮೊದಲಾದ ಚಿತ್ರಗಳ ಅಭಿನಯಕ್ಕೆ ಅನಂತ್ ನಾಗ್ ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಸದ್ಯ ಅನಂತ್ ಬತ್ತಳಿಕೆಯಲ್ಲಿ ‘ಗಾಳಿಪಟ 2’, ‘ವಿಜಯಾನಂದ’, ‘ಮೇಡ್ ಇನ್ ಬೆಂಗಳೂರು’ ಸೇರಿದಂತೆ ಹಲವಾರು ಚಿತ್ರಗಳಿವೆ.

ಅನಂತ್​ನಾಗ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಬೇಕು ಎಂಬುದು ಕನ್ನಡ ಅಭಿಮಾನಿಗಳ ಬಯಕೆ. ಅದಕ್ಕಾಗಿ ಇತ್ತೀಚೆಗೆ ಅನಂತ್ ಫಾರ್ ಪದ್ಮ ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಕನ್ನಡ ಚಿತ್ರರಂಗ ಅಭೂತಪೂರ್ವವಾಗಿ ಬೆಂಬಲಿಸಿತ್ತು. ಅದರ ಭಾಗವಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಯುಟ್ಯೂಬ್ ಚಾನಲ್​ನಲ್ಲಿ ಅನಂತ್ ನಾಗ್ ಕುರಿತಂತೆ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಲಾಗಿತ್ತು.

ಅನಂತ್ ನಾಗ್ 1987ರಲ್ಲಿ ಗಾಯತ್ರಿ ಅವರನ್ನು ವಿವಾಹವಾದರು. ದಂಪತಿಗೆ ಅದಿತಿ ಎಂಬ ಪುತ್ರಿಯಿದ್ದಾರೆ. ಎವರ್ ಗ್ರೀನ್ ಹೀರೊಗೆ ಬಂದಿರುವ ಪ್ರಶಸ್ತಿಗಳೂ ಹಲವಾರು. ಮಿಂಚಿನ ಓಟ, ಅವಸ್ಥೆ, ಹೊಸ ನೀರು, ಗಂಗವ್ವ ಗಂಗಾಮಾಯಿ ಚಿತ್ರಗಳ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭ್ಯವಾಗಿದೆ. ಡಾ.ವಿಷ್ಣುವರ್ಧನ್ ಜೀವಮಾನ ಸಾಧನೆ ಪ್ರಶಸ್ತಿಯೂ ಅನಂತ್ ನಾಗ್ ಅವರಿಗೆ ಲಭಿಸಿದೆ. ಇವುಗಳೊಂದಿಗೆ ಹಲವಾರು ಫಿಲ್ಮ್​ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿದ್ದು ಅನಂತ್ ನಾಗ್, ಶಾಸಕರಾಗಿ ಸಚಿವರೂ ಆಗಿದ್ದವರು.

Source:Tv9kannada