’60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಸಂಪೂರ್ಣ ಉಚಿತ’

Mar 8, 2021

ಗಜೇಂದ್ರಗಡ(ಮಾ.08): ಇಂದಿನಿಂದ 60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ವಿತರಿಸಲಾಗುವುದು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶ್ವಿನಿ ಕೊಪ್ಪದ ಹೇಳಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌- 19 ಲಸಿಕಾ ಜನಜಾಗೃತಿ ಅಭಿಯಾನ ಉದ್ದೇಶಿಸಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತ್ತು 45 ವರ್ಷ ಮೇಲ್ಪಟ್ಟವರಿಗೆ ಕೋಮಾರ್ಬಿಡ್‌ ಅಂಶಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಪಾಶ್ರ್ವವಾಯು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುವವರು ಕೋವಿಡ್‌- 19 ರೋಗದ ವಿರುದ್ಧ ಲಸಿಕೆ ಪಡೆದು ಸುರಕ್ಷತವಾಗಿರುವಂತೆ ಆರೋಗ್ಯ ಇಲಾಖೆಯಿಂದ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಕೊರೋನಾ ಮುಕ್ತವಾಗಿಸಲು ಸಹಕರಿಸಿ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಸರ್ಕಾರದ ಮಾರ್ಗ ಸೂಚಿಯಂತೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಲಸಿಕಾಕರಣವನ್ನು ಮಾ. 8ರಿಂದ ಪ್ರಾರಂಭಿಸಲಾಗುವದು. ಹೀಗಾಗಿ ಸಾರ್ವಜನಿಕರು ಕೋವಿಡ್‌ ಪೋರ್ಟಲ್‌ನಲ್ಲಿ ನೋಂದಣಿ ಅಥವಾ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬಹುದು. ಹೀಗಾಗಿ ಲಸಿಕೆ ಪಡೆಯಲು ಆಸ್ಪತ್ರೆಗೆ ಆಗಮಿಸುವಾಗ ಭಾವಚಿತ್ರ ಇರುವ ಗುರುತಿನ ಚೀಟಿ ತಂದಿರಬೇಕು. ಬಳಿಕ ಆಸ್ಪತ್ರೆಯಲ್ಲಿ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದ ನಂತರ ಲಸಿಕೆ ನೀಡಿದ ಬಳಿಕ ಮುಂಜಾಗ್ರತಾ ಹಿನ್ನೆಲೆಯಲ್ಲಿ ಅರ್ಧ ತಾಸು ನಿಗಾವಹಿಸಲಾಗುವುದು ಎಂದರು.

ಡಾ. ಮಹೇಶ ಚೋಳಿನ ಮಾತನಾಡಿ, ಸರ್ಕಾರಗಳು ರಾಜ್ಯದಲ್ಲಿ ಜನತೆಯ ಆರೋಗ್ಯ ದೃಷ್ಠಿಯಿಂದ ಹಾಗೂ ಕೆಲ ವರದಿಗಳ ಹಿನ್ನಲೆಯಲ್ಲಿ ಮಹಾಮಾರಿ ಕೊರೋನಾ 2ನೇ ಅಲೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರ್ವಜನಿಕರು ಸರ್ಕಾರ ಬಿಡುಗಡೆ ಮಾಡಿರುವ ಮುಂಜಾಗ್ರತಾ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಜರ್‌ ಬಳಕೆಗೆ ಮುಂದಾಗಬೇಕು ಎಂದರು.

Source: Suvarna News