ಬೆಂಗಳೂರು: ಬಾಡಿಗೆದಾರರಿಗೂ ಗೃಹ ಜ್ಯೋತಿ ಸಿಗಲಿದೆ. 200 ಯುನಿಟ್ ಒಳಗೆ ಉಪಯೋಗ ಮಾಡೋ ಬಾಡಿಗೆದಾರರಿಗೂ ಉಚಿತ ವಿದ್ಯುತ್ (Free Electricity) ಯೋಜನೆ ಅನ್ವಯ ಆಗುತ್ತದೆ. ಕಮರ್ಷಿಯಲ್ ಅವರಿಗೆ ಯೋಜನೆ ಅನ್ವಯ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆದಾರರಿಗೂ ಉಚಿತ ವಿದ್ಯುತ್ ಕೊಡ್ತೀವಿ. ಬಡವರು ಯಾರು 200 ಯುನಿಟ್ ಒಳಗೆ ಬಳಸುತ್ತಾರೆ, ಅವರಿಗೆ ಉಚಿತವಾತ ವಿದ್ಯುತ್ ಕೊಡ್ತೀವಿ. 200 ಯುನಿಟ್ ಒಳಗೆ ಬಳಸೋರು ಬಿಲ್ ಕಟ್ಟೋ ಹಾಗೆ ಇಲ್ಲ. ಬಾಡಿಗೆದಾರರಿಗೂ ಇದು ಅನ್ವಯ ಆಗುತ್ತೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾಪ ಅವರಿಗೆ ಏನೂ ಇಲ್ಲ ಅದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ. ಬಿಜೆಪಿ (BJP) ಅವರಿಗೆ ಯಾವ ನೈತಿಕತೆ ಇದೆ ಪ್ರತಿಭಟನೆ ಮಾಡೋಕೆ?. ಬಿಜೆಪಿ ಅವರು 10 ಗಂಟೆ ವಿದ್ಯುತ್ ಕೊಡ್ತೀವಿ ಅಂದ್ರು ಕೊಟ್ರಾ?, ಸಾಲಮನ್ನಾ ಮಾಡ್ತೀವಿ ಅಂದ್ರು ಮಾಡಿದ್ರಾ?, ನೀರಾವರಿಗೆ 1.5 ಲಕ್ಷ ಕೋಟಿ ಖರ್ಚು ಮಾಡ್ತೀನಿ ಅಂದ್ರು ಮಾಡಿದ್ರಾ?, ಹೀಗಿರುವಾಗ ನಮ್ಮನ್ನ ಪ್ರಶ್ನೆ ಮಾಡೋಕೆ ಇವರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ಬಿಜೆಪಿ ಅವರು ಹೇಳಿದ್ದು ಮಾಡಲಿಲ್ಲ. ನಾವು ಹೇಳಿದ್ದು ಮಾಡಿದ್ರು ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ಬಿಜೆಪಿ ಜನ ವಿರೋಧಿ ಪಕ್ಷ. ಅವರು ಅಧಿಕಾರದಲ್ಲಿ ಇದ್ದಾಗ ಲೂಟಿ ಹೊಡೆದು, ಲಂಚ ಹೊಡೆದು, ರಾಜ್ಯಕ್ಕೆ ಕೆಟ್ಟ ಹೆಸರು ಕೊಟ್ಟು ಹೋದ್ರು. ಈಗ ನಮಗೆ ಪಾಠ ಹೇಳಿ ಕೊಡ್ತಾರೆ ಏನ್ ಹೇಳೋಣ. ಬಿಜೆಪಿ ಅವರು ಕೊಟ್ಟ ಎಷ್ಟು ಭರವಸೆ ಈಡೇರಿಸಿದ್ರೆ ಹೇಳಲಿ. ನಾವು ಬಂದ 15 ದಿನಗಳ ಒಳಗೆ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ಹಿಂದೆ ನಾನು ಸಿಎಂ ಆಗಿದ್ದಾಗ ಕೊಟ್ಟಿದ್ದ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದೇನೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಿದ್ದು ಯಾರು? ಕೃಷಿ ಭಾಗ್ಯ ನಿಲ್ಲಿಸಿದ್ದು ಯಾರು? ಪಶು ಭಾಗ್ಯ, ಶೂ ಭಾಗ್ಯ ನಿಲ್ಲಿಸಿದ್ದು ಯಾರು? ಸೈಕಲ್ ನಿಲ್ಲಿಸಿದ್ದು ಯಾರು ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ರು.

 

Source: PUBLICTV Kannada

 
 
 

200 ಯುನಿಟ್ ಒಳಗೆ ಬಳಸುವ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಅನ್ವಯ: ಸಿಎಂ

Jun 6, 2023