ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್; ನಾಳೆಯಿಂದ ಬಿಳಿಗಿರಿ ರಂಗನ ಬೆಟ್ಟ, ಶೃಂಗೇರಿ ಪ್ರವಾಸ

Oct 6, 2021

ಬೆಂಗಳೂರು: ಇಂದಿನಿಂದ 4 ದಿನಗಳ ಕಾಲ ರಾಷ್ಟ್ರಪತಿ ರಾಮನಾಥ ಕೋವಿಂದ್ (Ramnath Kovind) ಕರ್ನಾಟಕ ಪ್ರವಾಸದಲ್ಲಿ ಇರಲಿದ್ದಾರೆ. ಇಂದಿನಿಂದ ರಾಷ್ಟ್ರಪತಿಗಳ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಐಎಎಫ್‌ ವಿಶೇಷ ವಿಮಾನದಲ್ಲಿ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಕರ್ನಾಟಕ ಪ್ರವಾಸ ಮುಗಿಸಿ ಅ. 9ರಂದು ರಾಷ್ಟ್ರಪತಿಗಳು ದೆಹಲಿಗೆ ವಾಪಾಸ್ ಹೋಗಲಿದ್ದಾರೆ.

ನಾಲ್ಕು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಅ. 7ರಂದು ಸಂಜೆ ಮಂಗಳೂರಿಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ. 8ರಂದು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅ. 9ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಮನಾಥ್ ಕೋವಿಂದ್ ದೆಹಲಿಗೆ ತೆರಳಲಿದ್ದಾರೆ.

ಅ. 8ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಅದಕ್ಕಾಗಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 7 ಮತ್ತು 8ರಂದು ರಾಮನಾಥ್ ಕೋವಿಂದ್ ಮಂಗಳೂರಿನ ಸರ್ಕ್ಯುಟ್ ಹೌಸ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳು ಮಂಗಳೂರಿನ ಸರ್ಕ್ಯುಟ್ ಹೌಸ್‌ಗೆ ಆಗಮಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ್ದು, ನಾಳೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಇಂದು ಮತ್ತು ನಾಳೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಈ ವೇಳೆ ರಾಷ್ಟ್ರಪತಿಗಳು ಚಾಮರಾಜನಗರದಲ್ಲಿ 450 ಬೆಡ್​ಗಳ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ರಾಷ್ಟ್ರಪತಿಗಳು ಆಗಮಿಸುತ್ತಿರುವುದರಿಂದ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿ ರಂಗನ ಬೆಟ್ಟ ಸಮೀಪ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ. ಚಾಮರಾಜನಗರ ಜಿಲ್ಲಾಡಳಿತ ಅಕ್ಟೋಬರ್ 7ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿ ರಂಗನ ಬೆಟ್ಟ, ಚಾಮರಾಜನಗರ ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

15 ಕಿ. ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಏರ್ ಕ್ರಾಫ್ಟ್‌ ಬಳಕೆ, ಏರ್ ಬಲೂನ್ ಹಾರಾಟ, ಬ್ಯಾನರ್, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಜಿಲ್ಲಾ ಪೊಲೀಸರಿಗೂ ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರಾಷ್ಟ್ರಪತಿಗಳ ಜೊತೆ ಪಾಲ್ಗೊಳ್ಳಲಿದ್ದಾರೆ.

ರಾಮನಾಥ ಕೋವಿಂದ್‌ ಶಾರದಾ ಪೀಠಕ್ಕೆ ಅ. 8ರಂದು ಆಗಮಿಸುವ ಹಿನ್ನೆಲೆಯಲ್ಲಿ ಮೂರು ಹೆಲಿಕಾಪ್ಟರ್‌ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್‌, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಗಿದೆ.

Source:tv7kannada