ಕುರುಕಲು ತಿಂಡಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಮನೆಯಲ್ಲಿದ್ದಾಗ ನೆಚ್ಚಿನ ಆಹಾರಕ್ಕಾಗಿ ಹಠ ಹಿಡಿಯೋದು ಸಹಜ. ಅವರಿಗಾಗಿ ನಾವಿಂದು ಒಂದು ಸುಲಭದ ರೆಸಿಪಿ ಹೇಳಿಕೊಡುತ್ತೇವೆ. ರಿಬ್ಬನ್ ಸೇವ್ ಮಾಡೋದು ಸುಲಭವಾಗಿದ್ದು, ಇದನ್ನು ತಯಾರಿಸಲು ಹೆಚ್ಚಿನ ಪದಾರ್ಥಗಳು ಬೇಕಾಗಿಲ್ಲ. ಇದನ್ನು ಮನೆಯಲ್ಲೇ ತಯಾರಿಸುವುದರಿಂದ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳೊ ಅಗತ್ಯವಿರುವುದಿಲ್ಲ. ರಿಬ್ಬನ್ ಸೇವ್ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಕಡಲೆ ಹಿಟ್ಟು – ಅರ್ಧ ಕಪ್
ಗೋಧಿ ಹಿಟ್ಟು – ಕಾಲು ಕಪ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಹಿಂಗ್ – ಕಾಲು ಟೀಸ್ಪೂನ್
ಎಣ್ಣೆ – ಮುಕ್ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

 

 

ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಗೋಧಿ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಹಿಂಗ್ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
* ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ, ಹಿಟ್ಟಿನ ಮಿಶ್ರಣಕ್ಕೆ ಸುರಿಯಿರಿ.
* ಹಿಟ್ಟಿಗೆ ಅಗತ್ಯವಿರುವಂತೆ ನೀರು ಬೆರೆಸುತ್ತಾ ಮೃದುವಾದ ಹಿಟ್ಟಿನ ಹದಕ್ಕೆ ತನ್ನಿ.
* ಈಗ ಚಕ್ಕುಲಿ ಮೇಕರ್‌ನಲ್ಲಿ ರಿಬ್ಬನ್ ಸೇವ್ ತಯಾರಿಸೋ ಅಚ್ಚನ್ನು ಬಳಸಿ ಹಿಟ್ಟನ್ನು ಒತ್ತಿಕೊಳ್ಳಿ. ನಿಮ್ಮ ಬಳಿ ಚಕ್ಕುಲಿ ಮೇಕರ್ ಇಲ್ಲವೆಂದರೆ ಹಿಟ್ಟನ್ನು ತೆಳ್ಳಗೆ ಲಟ್ಟಿಸಿಕೊಂಡು, ಚಾಕುವಿನ ಸಹಾಯದಿಂದ ರಿಬ್ಬನ್ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.
* ಸೇವ್ ರಿಬ್ಬನ್ ಅನ್ನು ನೇರವಾಗಿ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ. ನೀವು ಎಣ್ಣೆಯಲ್ಲಿ ಕರಿಯಲು ಇಷ್ಟಪಡುವುದಿಲ್ಲವೆಂದಾದರೆ ಮೊದಲೇ ಕಾಯಿಸಿಟ್ಟ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 10 ನಿಮಿಷಗಳ ಕಾಲ ಬೇಯಿಸಬಹುದು.
* ಬಳಿಕ ರಿಬ್ಬನ್ ಸೇವ್ ಅನ್ನು ತಣ್ಣಗಾಗಿಸಿ, ಮಕ್ಕಳಿಗೆ ಸವಿಯಲು ನೀಡಿ.
* ನೀವಿದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ವಾರಗಳ ವರೆಗೆ ಸವಿಯಬಹುದು.

Source: PUBLIC TV Kannada

 
 
 

ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

Jun 24, 2023