ರೋಡ್‌ ಸೇಫ್ಟಿ ಸೀರೀಸ್‌: ಇಂಡಿಯಾ ಲೆಜೆಂಡ್ಸ್‌ ಚಾಂಪಿಯನ್‌

Mar 22, 2021

ರಸ್ತೆ ಸುರಕ್ಷತಾ ವಿಶ್ವ ಸೀರೀಸ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ರಾಯ್ಪುರ(ಮಾ.22): ಉದ್ಘಾಟನಾ ಆವೃತ್ತಿಯ ರಸ್ತೆ ಸುರಕ್ಷತಾ ವಿಶ್ವ ಸೀರೀಸ್‌ ಟಿ20 ಕ್ರಿಕೆಟ್‌ ಟೂರ್ನಿಯ ಚಾಂಪಿಯನ್‌ ಆಗಿ ಇಂಡಿಯಾ ಲೆಜೆಂಡ್ಸ್‌ ತಂಡ ಹೊರಹೊಮ್ಮಿದೆ. ಕಳೆದ 2 ವಾರಗಳಿಂದ ಇಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಸಚಿನ್‌ ತೆಂಡುಲ್ಕರ್‌ ನೇತೃತ್ವದ ಇಂಡಿಯಾ ಲೆಜೆಂಡ್ಸ್‌ ತಂಡ, ಸನತ್‌ ಜಯಸೂರ್ಯ, ತಿಲಕರತ್ನೆ ದಿಲ್ಶಾನ್‌ ಸೇರಿ ಹಲವು ದಿಗ್ಗಜ ಕ್ರಿಕೆಟಿಗರನ್ನು ಒಳಗೊಂಡಿದ್ದ ಲಂಕಾ ವಿರುದ್ಧ 14 ರನ್‌ಗಳ ಗೆಲುವು ಸಾಧಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್‌, ಯುವರಾಜ್‌ ಸಿಂಗ್(60), ಯೂಸುಫ್‌ ಪಠಾಣ್‌(62) ಸ್ಫೋಟಕ ಆಟದ ನೆರವಿನಿಂದ ಭಾರತ 4 ವಿಕೆಟ್‌ಗೆ 181 ರನ್‌ ಗಳಿಸಿತ್ತು.

ರೋಡ್ ಸೇಫ್ಟಿ ಸೀರೀಸ್‌: ಸಚಿನ್‌, ಯುವಿ ಅಬ್ಬರ, ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್‌ ಸನತ್ ಜಯಸೂರ್ಯ(43) ಹಾಗೂ ಚಿಂತಕ ಜಯಸಿಂಘೆ(40) ಆಕರ್ಷಕ ಬ್ಯಾಟಿಂಗ್‌ ಹೊರತಾಗಿಯೂ 14 ರನ್‌ಗಳ ಸೋಲು ಕಂಡಿತು. ಫೈನಲ್‌ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ ಯೂಸುಫ್ ಪಠಾಣ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ತಿಲಕರತ್ನೆ ದಿಲ್ಶಾನ್‌ ಸರಣಿಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸ್ಕೋರ್‌: ಇಂಡಿಯಾ ಲೆಜೆಂಡ್ಸ್‌ 181/4

ಲಂಕಾ ಲೆಜೆಂಡ್ಸ್‌ 167/7

Source:Suvarna news