ಹೊಸ ರಜೆ ನಗದೀಕರಣ ನಿಯಮ; ಉದ್ಯೋಗಿಗಳಿಗೆ ವಾರ್ಷಿಕ 20,000 ಉಳಿಕೆ!

Feb 8, 2023

ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ಪ್ರಯೋಜನವಾಗಲಿದೆ. ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಉದ್ಯೋಗಿಗಳು ನಿವೃತ್ತರಾದಾಗ ಸಿಗುವ ಗಳಿಕೆ ರಜೆ ನಗದೀಕರಣ (Leave Encashment) ಸೌಲಭ್ಯದ ಮೇಲೆ ಈವರೆಗೆ 3 ಲಕ್ಷ ರೂ.ಗೆ ಮಾತ್ರ ತೆರಿಗೆ ವಿನಾಯಿತಿ (Tax Exemption) ದೊರೆಯುತ್ತಿತ್ತು. ಸರ್ಕಾರೇತರ ಕ್ಷೇತ್ರದ ಉದ್ಯೋಗಿಗಳಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್​​​ನಲ್ಲಿ (Budget 2023) ಘೋಷಣೆ ಮಾಡಿದ್ದರು. ಇದು 2023ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ. 22 ಲಕ್ಷ ರೂ. ವಿನಾಯಿತಿ ವಿಸ್ತರಣೆಯ ಪ್ರಮಾಣ ಶೇ 30ರಷ್ಟಾಗಲಿದ್ದು, ಉದ್ಯೋಗಿಗಳಿಗೆ ಒಟ್ಟಾರೆ ಅಂದಾಜು 7 ಲಕ್ಷ ರೂ.ನಷ್ಟು ಪ್ರಯೋಜನ ದೊರೆಯಲಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ. ಉದ್ಯೋಗಿಯೊಬ್ಬರು 30-35 ವರ್ಷಗಳ ಅವಧಿಗೆ ಈ ವಿನಾಯಿತಿ ಪಡೆದರೆ ಅವರ ವಾರ್ಷಿಕ ಪ್ರಯೋಜ 20,000 ರೂ.ನಷ್ಟಾಗಲಿದೆ ಎಂದು ಅವರು ಹೇಳಿದ್ದಾರೆ.

ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ನಿವೃತ್ತಿಯ ಸಂದರ್ಭದಲ್ಲಿ ಪ್ರಯೋಜನವಾಗಲಿದೆ. ಅವರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿದರೂ ಹಳೆಯ ತೆರಿಗೆ ಪದ್ಧತಿ ಆಯ್ದುಕೊಂಡರೂ ಅವರಿಗೆ ಈ ಪ್ರಯೋಜನ ದೊರೆಯಲಿದೆ ಎಂದು ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.

 

ಹೊಸ ಗಳಿಕೆ ರಜೆ ನಗದೀಕರಣ ನಿಯಮವು ಏಮ್ಸ್​ ಸೇರಿದಂತೆ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ನೌಕರರಿಗೂ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಜೆ ನಗದೀಕರಣ ಎಂದರೇನು?

ಭಾರತದ ಕಾರ್ಮಿಕ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ವೇತನದಾರ ಉದ್ಯೋಗಿಯು ವಾರ್ಷಿಕವಾಗಿ ಕನಿಷ್ಠ ಪಾವತಿ ರಜೆಯನ್ನು (Paid Leaves) ಪಡೆಯಲು ಅರ್ಹನಾಗಿದ್ದಾನೆ. ಆದಾಗ್ಯೂ, ಈ ರಜೆಗಳನ್ನು ಪ್ರತಿ ವರ್ಷ ತೆಗೆದುಕೊಳ್ಳಲಾಗುವುದಿಲ್ಲ. ಇದು ಮುಂದಿನ ವರ್ಷದ ಪಾವತಿ ರಜೆಗಳ ಜತೆ ಸೇರ್ಪಡೆಯಾಗುತ್ತಾ ಹೋಗುತ್ತದೆ. ಇಂಥ ರಜೆಗಳನ್ನು ನಿವೃತ್ತಿಯಾಗುವ ಸಂದರ್ಭದಲ್ಲಿ ನಗದೀಕರಣ ಮಾಡಿಕೊಳ್ಳಲು ಉದ್ಯೋಗಿಗೆ ಅವಕಾಶ ಇರುತ್ತದೆ. ಹೀಗೆ ರಜೆಯ ಬದಲಿಗೆ ಉದ್ಯೋಗಿಯು ನಗದನ್ನು ಪಡೆಯುವ ಪ್ರಕ್ರಿಯೆಯನ್ನು ರಜೆ ನಗದೀಕರಣ ಅಥವಾ ಲೀವ್ ಎನ್​ಕ್ಯಾಶ್​ಮೆಂಟ್ ಎಂದು ಕರೆಯಲಾಗುತ್ತದೆ.

ರಜೆ ನಗದೀಕರಣಕ್ಕೆ ತೆರಿಗೆ ಪಾವತಿಸಬೇಕೇ?

ರಜೆ ನಗದೀಕರಣವು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಉದ್ಯೋಗದ ಸಂದರ್ಭದಲ್ಲಿ ರಜೆ ನಗದೀಕರಣ ಮಾಡಿಸಿಕೊಂಡರೆ ಅದನ್ನು ವೇತನದಿಂದ ಗಳಿಸಿದ ಆದಾಯ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89 ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಇದಕ್ಕಾಗಿ 10ಇ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ, ಇದೀಗ ಸರ್ಕಾರವು ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದರಿಂದ ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

Source: TV9