ಸ್ನೇಹಕ್ಕಷ್ಟೇ ರಾಜಿ; ವಂಚನೆ ಪ್ರಕರಣಕ್ಕಿಲ್ಲ ವಿನಾಯಿತಿ: ಉಮಾಪತಿ ಶ್ರೀನಿವಾಸ ಗೌಡ ಸ್ಪಷ್ಟನೆ

Jul 14, 2021

ದರ್ಶನ್ ಅವರಿಗೆ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಮಾಪತಿ ಶ್ರೀನಿವಾಸ ಗೌಡ ಸ್ಪಷ್ಟನೆ ನೀಡಿದ್ದಾರೆ. ನಮ್ಮ ನಡುವೆ ಇದ್ದ ಗೊಂದಲಗಳು ಬಗೆಹರಿದೆವೆ. ಆದರೆ ಕಾನೂನು ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ನಾನು ಮತ್ತು ದರ್ಶನ್ ಅವರು ಮೊದಲಿನಿಂದಲೂ ಚೆನ್ನಾಗಿಯೇ ಇದ್ದೆವು. ಸ್ನೇಹಿತರ ವಿಷಯದಲ್ಲಿ ಇದ್ದ ಗೊಂದಲಗಳು ಪರಿಹಾರವಾಗಿವೆ; ಆ ವಿಷಯದಲ್ಲಿ ರಾಜಿಯಾಗಿದ್ದೇನೆ ಎಂದು ಉಮಾಪತಿ ಶ್ರೀನಿವಾಸ ಗೌಡ ಇಂದು ತಿಳಿಸಿದ್ದಾರೆ. ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ನೇಹದ ವಿಚಾರದಲ್ಲಿ ರಾಜಿಯಾಗಿದ್ದೇವೆ, ನಿಜ. ಆದರೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಹೋರಾಟ ಮುಂದುವರೆಯಲಿದೆ. ಆ ಪ್ರಕರಣದ ಸತ್ಯಾಸತ್ಯತೆ ತನಿಖೆಯ ನಂತರ ಹೊರಬರಲಿದೆ  ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಊಹಾಪೋಹಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅರುಣಾ ಕುಮಾರಿಯವರು ಪ್ರೆಸ್ ಮೀಟ್ ಮಾಡಲಿ. ನಾನು ಕಾನೂನಿನ ಮುಖಾಂತರವೇ ಉತ್ತರ ಕೊಡುತ್ತೇನೆ ಎಂದು ಉಮಾಪತಿ ತಿಳಿಸಿದ್ದಾರೆ. ದರ್ಶನ್ ಅವರ ಕುರಿತು ನಾನೂ ಆರೋಪ ಮಾಡಿಲ್ಲ; ಅವರೂ ನನ್ನ ಕುರಿತು ಮಾಡಿಲ್ಲ. ಇದ್ದ ಕೆಲ ಗೊಂದಲಗಳು ನಿನ್ನೆಯ ಮಾತುಕತೆಯಲ್ಲಿ ಪರಿಹಾರವಾಗಿದೆ. ದರ್ಶನ್ ಅವರ ಜೊತೆ ಮುಂದೆ ಸಿನಿಮಾ ಮಾಡುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಅವರ ಜೊತೆ ಮಾಡುತ್ತಿರುವ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ, ಅದನ್ನು ದರ್ಶನ್ ಅವರೇ ಹೇಳಬೇಕು. ನಾನು ಹೇಳುವುದಿಲ್ಲ. ಅವರು ರೈಲಿನ ಇಂಜಿನ್ ಇದ್ದಂತೆ; ನಾವೆಲ್ಲಾ ಅದರ ಬೋಗಿಗಳು ಎಂದು ಉಮಾಪತಿ ಹೇಳಿದರು. ಅರುಣಾ ಕುಮಾರಿ ಮಾಡುತ್ತಿರುವ ಆರೋಪದ ಕುರಿತಂತೆ ಮಾತನಾಡಿದ ಅವರು, ಆಕೆಯ ಬಳಿ ಏಕೆ ಯಾರೂ ದಾಖಲೆಗಳನ್ನು ಕೇಳುತ್ತಿಲ್ಲ. ಹೆಣ್ಣು ತಪ್ಪು ಮಾಡಿದರೆ ಅದು ತಪ್ಪೇ ಎಂದು ಹೇಳಿದರು.

Source: TV9 Kannada