ಸುನಿಲ್ ಗಾವಸ್ಕರ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಹಾಫ್ ಸೆಂಚುರಿ! ಲಿಟಲ್ ಮಾಸ್ಟರ್ ಜರ್ನಿ ವಿಶೇಷ ಇಲ್ಲಿದೆ..
Sunil Gavaskar: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 16 ವರ್ಷ ಸಾಧನೆ ತೋರಿದ ಗವಾಸ್ಕರ್, ಹಲವಾರು ದಾಖಲೆಗಳನ್ನು ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುನ್ನತ ಮೈಲುಗಲ್ಲು ಸಾಧಿಸುವಲ್ಲಿಯೂ ಅವರು ಮುಖ್ಯ ಪಾತ್ರ ವಹಿಸಿದರು.
ಸುನಿಲ್ ಗಾವಸ್ಕರ್ ಎಂಬ ವಿಶ್ವ ಕ್ರಿಕೆಟ್ ಕಂಡ ಅದ್ಭುತ ಪ್ರತಿಭೆ ಭಾರತದ ಪರ ಮೈದಾನಕ್ಕಿಳಿದು ಇಂದಿಗೆ 50 ವರ್ಷಗಳಾದವು. ಟ್ರಿನಿಡಾಡ್ನಲ್ಲಿ ನಡೆಯುತ್ತಿದ್ದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಾವಸ್ಕರ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಸುನಿಲ್ ಗಾವಸ್ಕರ್ ಎರಡು ತಲೆಮಾರು ಹಿಂದಿನ ಆಟಗಾರ ಎಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಗಾವಸ್ಕರ್ ಆಟ, ದಾಖಲೆ, ಸಾಧನೆ, ಹೊಸ ಕ್ರಿಕೆಟಿಗರಿಗೆ ಅವರ ಅಮೂಲ್ಯ ಸಲಹೆಗಳು, ಕ್ರಿಕೆಟ್ ಮೇಲಿನ ಅವರ ಅಭಿಮಾನ, ಪ್ರೀತಿ ಇಂದಿಗೂ ಅವರನ್ನು ಅಭಿಮಾನದಿಂದ ನೋಡುವಂತಾಗಿದೆ.
ಸುನಿಲ್ ಮನೋಹರ್ ಗವಾಸ್ಕರ್ ಮುಂಬೈನಲ್ಲಿ ಜನಿಸಿದರು. ಸೈಂಟ್ ಕ್ಸೇವಿಯರ್ ಹೈಸ್ಕೂಲ್ನಲ್ಲಿ ಕಲಿಯುತ್ತಿರಬೇಕಾದರೆ ಭಾರತದ ಬೆಸ್ಟ್ ಸ್ಕೂಲ್ಬಾಯ್ ಕ್ರಿಕೆಟರ್ ಎಂಬ ಖ್ಯಾತಿ ಪಡೆದರು. ಶಾಲಾ ಕ್ರಿಕೆಟ್ನ ಯಶಸ್ವಿ ದಿನಗಳ ಬಳಿಕ ಅವರು ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ವಸೀರ್ ಸುಲ್ತಾನ್ ಕೊಲ್ಟ್ಸ್ ಇಲೆವೆನ್ಗೆ 1966/67ರ ವೇಳೆಗೆ ಆಟವಾಡಲು ಆರಂಭಿಸಿದರು. ಮುಂಬೈ ರಣಜಿ ಟ್ರೋಫಿ ಸ್ಕ್ವಾಡ್ನಲ್ಲಿ ಎರಡು ವರ್ಷಗಳ ಕಾಲ ಇದ್ದರೂ ಮೈದಾನಕ್ಕಿಳಿದು ಆಟವಾಡುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ.
ಆದರೆ, 1968/69ರ ವೇಳೆಗೆ ಕರ್ನಾಟಕ ತಂಡದ ವಿರುದ್ಧ ರಣಜಿ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶ ಪಡೆದರು. ರಣಜಿ ತಂಡದಲ್ಲಿ ಕೆಲವು ಉತ್ತಮ ಪ್ರದರ್ಶನ ತೋರಿದ್ದು, ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು. 1970/71ರ ಭಾರತದ ವೆಸ್ಟ್ ಇಂಡೀಸ್ ಟೂರ್ನಲ್ಲಿ ಗವಾಸ್ಕರ್ ಸ್ಥಾನ ಪಡೆದರು. ನಂತರ ಗವಾಸ್ಕರ್ ಬ್ಯಾಟ್ ಬೀಸಿದ್ದೆಲ್ಲಾ ಇತಿಹಾಸದ ಪುಟಗಳಲ್ಲಿ ದಾಖಲಾದ, ಎಲ್ಲರೂ ನೆನಪಿಡುವಂಥ ಆಟ.
ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 16 ವರ್ಷ ಸಾಧನೆ ತೋರಿದ ಗವಾಸ್ಕರ್, ಹಲವಾರು ದಾಖಲೆಗಳನ್ನು ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುನ್ನತ ಮೈಲುಗಲ್ಲು ಸಾಧಿಸುವಲ್ಲಿಯೂ ಅವರು ಮುಖ್ಯ ಪಾತ್ರ ವಹಿಸಿದರು.
ಲಿಟ್ಲ್ ಮಾಸ್ಟರ್ ಗಾವಸ್ಕರ್ ಸಹೋದರಿ ಕವಿತಾ ವಿಶ್ವನಾಥ್ ಮನದನ್ನೆ!
ಹೌದು! ಲಿಟ್ಲ್ ಮಾಸ್ಟರ್ ಗಾವಸ್ಕರ್ ಅವರ ಸೋದರಿ ಕವಿತಾ ಅವರು ನಮ್ಮ ಕರ್ನಾಟಕದ ಲಿಟ್ಲ್ ಮಾಸ್ಟರ್ ಗುಂಡಪ್ಪ ವಿಶ್ವನಾಥ್ ಅವರನ್ನು ವರಿಸಿದ್ದಾರೆ. ಗಾವಸ್ಕರ್ ಸೋದರಿ ಕವಿತಾರನ್ನು ವಿಶ್ವನಾಥ್ ಪ್ರೀತಿಸಿ ಮದುವೆಯಾಗಿದ್ದಾರೆ.
ಸುನಿಲ್ ಗವಾಸ್ಕರ್ ವೃತ್ತಿಬದುಕಿನ ಮುಖ್ಯ ಘಟನೆಗಳು:
- ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು ಮಾರ್ಚ್ 6-10, 1971ರಲ್ಲಿ
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಕದಿನ ಪಂದ್ಯಕ್ಕೆ ಕಾಲಿರಿಸಿದ್ದು ಜುಲೈ 13, 1974ರಲ್ಲಿ. ಇಂಗ್ಲೆಂಡ್ ವಿರುದ್ಧದ ಪಂದ್ಯಾಟದಲ್ಲಿ
- ಸುನಿಲ್ ಆಡಿದ ಕೊನೆಯ ಟೆಸ್ಟ್ ಪಂದ್ಯಾಟ ಪಾಕಿಸ್ತಾನದ ವಿರುದ್ಧವಾಗಿತ್ತು ಮತ್ತು ಬೆಂಗಳೂರಿನಲ್ಲಿ ನಡೆದಿತ್ತು. ಮಾರ್ಚ್ 13, 1987ರಲ್ಲಿ ಅವರು ಕೊನೆಯ ಬಾರಿ ಭಾರತದ ತಂಡಕ್ಕೆ ಬಿಳಿ ಜೆರ್ಸಿ ತೊಟ್ಟರು
- ಕೊನೆಯ ಏಕದಿನ ಪಂದ್ಯಾಟವನ್ನು ಗವಾಸ್ಕರ್ ನವೆಂಬರ್ 5, 1987ರಲ್ಲಿ ಮುಂಬೈ ವಿರುದ್ಧ ಆಡಿದ್ದರು
- ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ ಹಾಗೂ 30 ಶತಕಗಳನ್ನು ಗಳಿಸಿದ ಮೊದಲಿಗ ಸುನಿಲ್ ಗವಾಸ್ಕರ್
- ಡೊನಾಲ್ಡ್ ಬ್ರಾಡ್ಮನ್ರ 29 ಶತಕಗಳ ದಾಖಲೆ ಸರಿಗಟ್ಟಿದ ಕೀರ್ತಿ ಗವಾಸ್ಕರ್ಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್ ನಿವೃತ್ತಿ ವೇಳೆ ಗವಾಸ್ಕರ್ ಒಟ್ಟು 34 ಶತಕಗಳನ್ನು ಬಾರಿಸಿದ್ದರು. ಇದು ಅಂದಿನ ಅತಿ ಹೆಚ್ಚು ಶತಕಗಳಾಗಿತ್ತು
- ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದರಲ್ಲಿ ಗವಾಸ್ಕರ್ ಗಳಿಸಿದ 774 ರನ್, ಸರಣಿಯೊಂದರಲ್ಲೇ ಆಟಗಾರ ಪಡೆದ ಅತಿ ಹೆಚ್ಚು ರನ್ಗಳಾಗಿತ್ತು
- ವಿಕೆಟ್ ಕೀಪರ್ ಹೊರತಾಗಿ 100 ಕ್ಯಾಚ್ಗಳನ್ನು ಪಡೆದ ಭಾರತೀಯ ಆಟಗಾರನಾಗಿ ಸುನಿಲ್ ಗವಾಸ್ಕರ್ ಕಾಣಿಸಿಕೊಂಡಿದ್ದರು
- 1975-76 ಮತ್ತು 1984-85ರ ವೇಳೆಗೆ ಸುನಿಲ್ ಗವಾಸ್ಕರ್ ರಾಷ್ಟ್ರೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು. ಅವರು ನಾಯಕನಾಗಿ ಆಡಿದ ಪಂದ್ಯಗಳಲ್ಲಿ 9 ಗೆಲುವು, 8 ಸೋಲು ಮತ್ತು 30 ಪಂದ್ಯಗಳು ಡ್ರಾ ಆಗಿದ್ದವು
- 1980 ಮತ್ತು 1985ರ ಅವಧಿಯಲ್ಲಿ ಸುನಿಲ್ ಗವಾಸ್ಕರ್ ಭಾರತೀಯ ಏಕದಿನ ಕ್ರಿಕೆಟ್ ತಂಡವನ್ನು ಕೂಡ ಮುನ್ನಡೆಸಿದ್ದರು. ಆ ಪಂದ್ಯಗಳ ಪೈಕಿ ಶೇ. 40ರಷ್ಟು ಗೆಲುವು ನೀಡಿದ್ದರು
- ಗವಾಸ್ಕರ್ ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್ 1980ರಲ್ಲಿ ಸ್ಥಾನ ಪಡೆದುಕೊಂಡಿದ್ದರು
- ಆಸ್ಟ್ರೇಲಿಯಾ ಕ್ರಿಕೆಟಿಗ ಅಲನ್ ಬಾರ್ಡರ್ ಮತ್ತು ಸುನಿಲ್ ಗವಾಸ್ಕರ್ಗೆ ಗೌರವ ಸೂಚಕವಾಗಿ, ಭಾರತ, ಆಸ್ಟ್ರೇಲಿಯಾ ವಿರುದ್ಧ ಆಡುವ ಟೆಸ್ಟ್ ಸರಣಿಯನ್ನು ‘ಬಾರ್ಡರ್-ಗವಾಸ್ಕರ್’ ಟ್ರೋಫಿ ಎಂದು ಕರೆಯಲಾಗುತ್ತದೆ
- ಸುನಿಲ್ ಗವಾಸ್ಕರ್ ಅವರನ್ನು ಸಹ ಆಟಗಾರರು, ಕಮೆಂಟೇಟರ್ಗಳು ‘ಸನ್ನಿ’ ಎಂದೂ ಕರೆಯುತ್ತಾರೆ. ICC ಕ್ರಿಕೆಟ್ ಹಾಲ್ ಆಫ್ ಫೇಮ್ನಲ್ಲಿ 2009ರಲ್ಲಿ ಸುನಿಲ್ ಸ್ಥಾನ ಪಡೆದುಕೊಂಡಿದ್ದಾರೆ
Source: TV9Kannada