ಸಿಎ ಪರೀಕ್ಷೆಯಲ್ಲಿ ರಾಷ್ಟ್ರಕ್ಕೇ ಪ್ರಥಮ​ ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾ; ಓದು, ಪುಸ್ತಕಗಳ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡ ಟಾಪರ್​

Sep 14, 2021

ಚಾರ್ಟರ್ಡ್ ಅಕೌಂಟಂಟ್ಸ್​ ಆಫ್​ ಇಂಡಿಯಾ ಇನ್​ಸ್ಟಿಟ್ಯೂಶನ್​ (ICAI) ನಿನ್ನೆ ಸಿಎ ಫೌಂಡೇಶನ್​ ಮತ್ತು ಫೈನಲ್ (ICAI CA Foundation And Final Exams Result) ಪರೀಕ್ಷೆಗಳ ಫಲಿತಾಂಶ ಬಿಡುಗಡೆ ಮಾಡಿದೆ. ಈ ಬಾರಿ ಟಾಪರ್​​ಗಳಲ್ಲೆ ವಿದ್ಯಾರ್ಥಿನಿಯರೇ ಆಗಿದ್ದಾರೆ. ಅದರಲ್ಲೂ ಸಿಎ ಹಳೆಯ ಕೋರ್ಸ್​​​ ಮಾಡಿ ಅಂತಿಮ ಪರೀಕ್ಷೆ ಬರೆದಿದ್ದ ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾ ಶೇ.59 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್​ ಪಡೆದಿದ್ದಾರೆ. ಹಾಗೇ, ಹೊಸ ಕೋರ್ಸ್​​ನಲ್ಲಿ ಮಧ್ಯಪ್ರದೇಶದ ನಂದಿನಿ ಅಗರ್​ವಾಲ್​ ದೇಶಕ್ಕೇ ಟಾಪರ್​. ಹೀಗೇ ಹಳೇ ಮತ್ತು ಹೊಸ ಕೋರ್ಸ್​ ಎರಡೂ ವಿಭಾಗಗಳ ಅಂತಿಮ ಪರೀಕ್ಷೆಯಲ್ಲೂ ಯುವತಿಯರೇ ಮೊದಲ ರ್ಯಾಂಕ್​ ಪಡೆದು ಸಾಧನೆ ಮಾಡಿದ್ದಾರೆ.

ದಿನಕ್ಕೆ 8-9 ತಾಸು ಓದು..
ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾಗೆ ಶಾಲಾ ದಿನಗಳಿಂದಲೂ ಅಕೌಂಟೆನ್ಸಿ ನೆಚ್ಚಿನ ವಿಷಯವಾಗಿತ್ತಂತೆ. ನನ್ನ ಪದವಿಯಲ್ಲಿ ಪ್ರತಿಬಾರಿಯೂ ಅಕೌಂಟ್​ನಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸಾಗುತ್ತಿದ್ದೆ. ಸಿಎ ಮಾಡಬೇಕೆಂಬ ಇಚ್ಛೆಯೂ ನನಗಿತ್ತು. ಇದೇ ಕಾರಣಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತ ಬಂದಿದ್ದೆ ಎಂದು ಟಾಪರ್​ ರುಥ್​ ಕ್ಲೇರ್​ ತಿಳಿಸಿದ್ದಾರೆ. ಹಾಗೇ, ರುಥ್​ ಕ್ಲೇರ್​ ಡಿಸಿಲ್ವಾ ಸಿಎ ಜರ್ನಿ ಶುರುವಾಗಿದ್ದು 2014ರಲ್ಲಿ. ಪ್ರತಿದಿನ ಸುಮಾರು 8-9 ತಾಸು ಸಿಎ ಓದಿಗೆಂದೇ ಆಕೆ ಮೀಸಲಿಡುತ್ತಿದ್ದರು.

ರೆಫರ್​ ಮಾಡುತ್ತಿದ್ದ ಪುಸ್ತಕಗಳು ಹೀಗಿವೆ..
ತಮ್ಮ ಓದಿನ ವಿಧಾನ ಹೇಗಿದ್ದವು ಎಂಬ ಬಗ್ಗೆ ರುಥ್​ ಕ್ಲೇರ್​ ಇಂಡಿಯನ್ ಎಕ್ಸ್​ಪ್ರೆಸ್​ ಜತೆ ಹಂಚಿಕೊಂಡಿದ್ದಾರೆ. ‘ನಾನು ವಿಷಯಗಳನ್ನು ಓದಿ, ಅಧ್ಯಯನ ಮಾಡಿಕೊಳ್ಳುತ್ತಿದ್ದೆ. ಅದಾದ ಬಳಿಕ ಆನ್​ಲೈನ್ ಕ್ಲಾಸ್​ಗಳಿಗೆ ಸೇರಿಕೊಂಡೆ. ಅದರಲ್ಲೂ ಅಜಯ್​ ಮತ್ತು ಅತುಲ್​ ಅಗರ್​ವಾಲ್​ ಸೋದರರ ಯೂಟ್ಯೂಬ್​ ಚಾನಲ್​ ಹೆಚ್ಚಾಗಿ ಫಾಲೋ ಮಾಡುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಹಾಗೇ, ಅಡಿಟ್​ಗಾಗಿ ಸಿಎ ವಿಕಾಸ್​ ಓಸ್ವಾಲ್​ ಅವರ ಪುಸ್ತಕ, ಡೈರೆಕ್ಟ್​ ಟ್ಯಾಕ್ಸ್​ ಗಾಗಿ ಸಿಎ ಸಿಎ ಭನ್ವರ್ ಬೋರಾನ ಮತ್ತು ಇಂಡೈರೆಕ್ಟ್​ ಟ್ಯಾಕ್ಸ್​ಗಾಗಿ ಯೋಗೇಂದರ್ ಬಂಗಾರ್ ಅವರ ಪುಸ್ತಕಗಳನ್ನು ರೆಫರ್​ ಮಾಡಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ಕೊವಿಡ್​19 ನಿಂದ ತೊಡಕಾಯಿತು
ಮಂಗಳೂರಿನ ಬಲ್ಮಠದ ಸಿಎ ವಿವಿಯನ್​ ಪಿಂಟೋ ಆ್ಯಂಡ್​ ಕಂಪನಿಯಲ್ಲಿ ಆರ್ಟಿಕಲ್​ ಶಿಪ್​ ಪೂರ್ಣಗೊಳಿಸಿದ್ದ ರುಥ್​​, ಕೊವಿಡ್​ 19 ಎರಡನೇ ಅಲೆಯಿಂದ ಪರೀಕ್ಷೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯಿತು ಎನ್ನುತ್ತಾರೆ. ಮೊದಲನೇ ಅಲೆ ಅಂಥ ಸಮಸ್ಯೆ ಕೊಡಲಿಲ್ಲ. ಆದರೆ ನಮ್ಮ ಪರೀಕ್ಷೆ ಹೊತ್ತಲ್ಲಿ ಎರಡನೇ ಅಲೆ ಎದ್ದಿತ್ತು. ಪರೀಕ್ಷೆ ಘೋಷಣೆಯಾಗುವ ದಿನಾಂಕದ ಬಗ್ಗೆ ಗಮನ ಇಡಬೇಕಿತ್ತು. ಅಷ್ಟಕ್ಕೂ ಸಿಎ ಪರೀಕ್ಷೆ ನಡೆಯಲಿದೆಯಾ, ಇಲ್ಲವಾ ಎಂಬ ಬಗ್ಗೆ ಕೂಡ ಗೊಂದಲ ಸೃಷ್ಟಿಯಾಯಿತು ಎನ್ನುತ್ತಾರೆ. ಹಾಗೇ, ಸಿಎಯಲ್ಲಿ ಯಶಸ್ಸು ಕಾಣಬೇಕಾದರೆ ನಿರಂತರ ಶ್ರಮ ಮುಖ್ಯ. ಓದು-ಪರಿಶ್ರಮ ಬೇಕು ಎಂಬುದು ರುಥ್​ ಕ್ಲೇರ್ ಡಿಸಿಲ್ವಾ ಅಭಿಪ್ರಾಯ.

Source:tv9kannada