ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ: ಎಸ್ಮಾ ಕಾಯ್ದೆ ಅಂದ್ರೇನು, ಅದನ್ನು ಜಾರಿಗೊಳಿಸಿದ್ರೆ ನೌಕರರಿಗೆ ಆಗುವ ಸಮಸ್ಯೆ ಏನು.. ವಿಶ್ಲೇಷಣೆ

Apr 9, 2021

ಈಗಾಗಲೇ ನೌಕರರ ಸಂಘದ ವಿರುದ್ಧ ಸಾರಿಗೆ ಇಲಾಖೆ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದೆ. 2 ಕೋಟಿ ರೂಪಾಯಿ ನಷ್ಟ ಪರಿಹಾರ ಕೇಳಿದೆ. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಹೀಗಾಗಿ ಸಾರಿಗೆ ನೌಕರರೂ ಕಾನೂನಿನ ಮಾರ್ಗ ಹಿಡಿದು ತಮ್ಮ ಕಾರ್ಯ ಸಿದ್ದಿಸಿಕೊಳ್ಳಬೇಕಿದೆ. ಹಾಗೂ ಬಡವರ, ಸಾಮಾನ್ಯವರ್ಗದವರ ಆರ್ಥಿಕತೆಗೂ ತೊಂದರೆ ನೀಡದಂತೆ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ.

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ತಮಗೂ 6ನೇ ವೇತನ ಆಯೋಗ ಅನ್ವಯಿಸುವಂತೆ ಬೇಡಿಕೆ ಮುಂದಿಟ್ಟು ಮುಷ್ಕರ ಮುಂದುವರಿದಿದೆ. ಈ ಮಧ್ಯೆ ಸರ್ಕಾರ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 ರಂತೆ ಎಸ್ಮಾ ಜಾರಿಗೂ ಚಿಂತನೆ ನಡೆಸಿದೆ. ಸಾರಿಗೆ ಇಲಾಖೆಯ ನೌಕರರಲ್ಲದಿದ್ದರೂ ನೌಕರರ ಸಂಘಟನೆಗಳ ಗೌರವಾಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್‌ ಮುಷ್ಕರ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಗಳ ನಡುವೆ ಸಂಧಾನ ಏರ್ಪಡದಿದ್ದರೆ ಆಗ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ. ಸರ್ಕಾರ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, ಎಸ್ಮಾ ಜಾರಿಗೂ ಸಿದ್ಧತೆ ನಡೆಸಿದೆ. ಹಾಗಿದ್ದರೆ, ಈ ಎಸ್ಮಾ ಕಾಯ್ದೆ ಏನು, ಇದನ್ನು ಜಾರಿಗೊಳಿಸಿದರೆ ನೌಕರರಿಗೆ ಆಗುವ ಸಮಸ್ಯೆ ಏನು ಎಂಬುದರ ವಿಶ್ಲೇಷಣೆ ಇಲ್ಲಿದೆ.

ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 ಅನ್ನು (ESMA) ಸರ್ಕಾರ 2013 ರಲ್ಲಿ ಜಾರಿಗೊಳಿಸಿದೆ. ಈ ಕಾಯ್ದೆಯಲ್ಲಿ ಒಟ್ಟು 9 ಸೆಕ್ಷನ್‌ ಗಳಿದ್ದು, ಇದರಲ್ಲಿ ಸೆಕ್ಷನ್ 1 ರ ಪ್ರಕಾರ ಈ ಅಧಿನಿಯಮ 10 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಹಾಗೂ ಇಡೀ ಕರ್ನಾಟಕಕ್ಕೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸೆಕ್ಷನ್‌ 2 ರ ಪ್ರಕಾರ ಅತ್ಯಾವಶ್ಯಕ ಸೇವೆ ಎಂದರೆ ನೀರು, ವಿದ್ಯುತ್ ಉತ್ಪಾದನೆ, ತಯಾರಿಕೆ, ಸಂಗ್ರಹಣೆ, ಸಾಗಾಟ, ವಿತರಣೆಯ ಸೇವೆಗಳು ಈ ವ್ಯಾಪ್ತಿಗೆ ಬರಲಿದೆ. ಇದಲ್ಲದೇ ಸಾರ್ವಜನಿಕರನ್ನು ಹಾಗೂ ಸರಕುಗಳನ್ನು ಸಾಗಾಟ ಮಾಡುವ ಸಾರಿಗೆ ವ್ಯವಸ್ಥೆ ಕೂಡಾ ಅತ್ಯಾವಶ್ಯಕ ಸೇವೆ ವ್ಯಾಪ್ತಿಯೊಳಗೆ ಬರಲಿದೆ.

ಹೀಗಾಗಿ ಸೆಕ್ಷನ್‌ 2 ಪ್ರಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಮೇಲೆ ಸರ್ಕಾರ ಎಸ್ಮಾ ಜಾರಿಗೊಳಿಸಬಹುದು. ಸೆಕ್ಷನ್‌ 3 ರ ಪ್ರಕಾರ ಅತ್ಯಾವಶ್ಯಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಮುಷ್ಕರ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬಹುದು. ಒಮ್ಮೆ ಆದೇಶ ಹೊರಡಿಸಿದರೆ ಆ ಆದೇಶ 1 ವರ್ಷ ಕಾಲ ಊರ್ಜಿತದಲ್ಲಿ ಇರಲಿದೆ, ಈ ಅವಧಿಯಲ್ಲಿ ಯಾವುದೇ ನೌಕರ ಅಥವಾ ಸಂಘಟನೆ ಮುಷ್ಕರ ನಡೆಸಿದರೆ ಅದು ಕಾನೂನುಬಾಹಿರವಾಗಲಿದೆ.

ಸೆಕ್ಷನ್ 4 ರ ಪ್ರಕಾರ ನೌಕರ ಅಥವಾ ಸಂಘಟನೆ ಕಾನೂನುಬಾಹಿರ ಮುಷ್ಕರ ನಡೆಸಿದರೆ ಅದು ಅಪರಾಧವಾಗಲಿದ್ದು, 1 ವರ್ಷ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಲು ಅವಕಾಶವಿದೆ. ಸೆಕ್ಷನ್‌ 5 ರ ಪ್ರಕಾರ ಇಂತಹ ಕಾನೂನುಬಾಹಿರ ಮುಷ್ಕರಕ್ಕೆ ಪ್ರೇರಣೆ ಅಥವಾ ಪ್ರಚೋದನೆ ನೀಡುವುದೂ ಕೂಡಾ ಅಪರಾಧವಾಗಿದ್ದು, 1 ವರ್ಷ ಶಿಕ್ಷೆ, 5 ಸಾವಿರ ದಂಡ ವಿಧಿಸಬಹುದಾಗಿದೆ. ಸೆಕ್ಷನ್ 6 ರ ಪ್ರಕಾರ ಇಂತಹ ಮುಷ್ಕರಕ್ಕೆ ಹಣಕಾಸಿನ ನೆರವು ನೀಡುವುದೂ ಅಪರಾಧವಾಗಿದ್ದು, ಅದಕ್ಕೂ 1 ವರ್ಷದವರೆಗೆ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಬಹುದಾಗಿದೆ. ಸೆಕ್ಷನ್‌ 7 ರ ಪ್ರಕಾರ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು.

ಸೆಕ್ಷನ್ 8 ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಕೋರ್ಟ್ ನ ವಾರೆಂಟ್ ಇಲ್ಲದೆಯೂ ಮುಷ್ಕರದಲ್ಲಿ ತೊಡಗಿದವರನ್ನು ಬಂಧಿಸಬಹುದಾಗಿದೆ. ಇನ್ನೂ ಗಂಭೀರ ಅಂಶವೆಂದರೆ ಈ ಕಾಯ್ದೆಯಡಿಯ ಎಲ್ಲಾ ಅಪರಾಧಗಳೂ ಜಾಮೀನು ರಹಿತ ಅಪರಾಧಗಳಾಗಿವೆ. ಹೀಗಾಗಿ ತಕ್ಷಣ ಜಾಮೀನು ಸಿಗುವುದೂ ಕಷ್ಟವಾಗುವ ಪರಿಸ್ಥಿತಿ ಸೃಷ್ಟಿಯಾಗಬಹುದು. ಸೆಕ್ಷನ್ 9 ಈ ಕಾಯ್ದೆಗೆ ಇನ್ನಷ್ಟು ಬಲ ತುಂಬಿದ್ದು, ಇತರೆ ಕಾಯ್ದೆಗಳಲ್ಲಿರುವ ಸೆಕ್ಷನ್‌ ಗಳನ್ನು ಈ ಕಾಯ್ದೆ ಮೀರಿ ನಿಲ್ಲುತ್ತದೆ.

ಹೀಗಾಗಿ ಒಂದು ವೇಳೆ ಸರ್ಕಾರ ಎಸ್ಮಾ ಜಾರಿಗೆ ತಂದರೆ ಅದು 1.40 ಲಕ್ಷ ನೌಕರರಿಗೆ ತೊಂದರೆ ಉಂಟು ಮಾಡಲಿದೆ. ಅಲ್ಲದೇ ಮುಷ್ಕರಕ್ಕೆ ಪ್ರಚೋದನೆ ನೀಡುವವರಿಗೂ ಎಸ್ಮಾ ಕಾಯ್ದೆ ಸಂಕಷ್ಟ ತಂದೊಡ್ಡಬಹುದು. ಸಾರಿಗೆ ಮುಷ್ಕರದಿಂದ ನಿಜಕ್ಕೂ ತೊಂದರೆಗೊಳಗಾಗಿರುವವರೆಂದರೆ ಬಿಎಂಟಿಸಿ ಬಸ್‌, ಕೆಎಸ್‌ಆರ್‌ಟಿಸಿ ಬಸ್‌ ಗಳನ್ನು ಆಶ್ರಯಿಸಿರುವ ಬಡವರು, ಮಧ್ಯಮವರ್ಗದವರು ಮಾತ್ರ. ಸಂಚಾರ ವ್ಯವಸ್ಥೆ ಕೂಡಾ ಬದುಕುವ ಹಕ್ಕಿನ ಭಾಗವಾಗಿರುವುದರಿಂದ ನೌಕರರು ಸಂಧಾನ ಮಾರ್ಗ ಹಿಡಿಯುವುದು ಸೂಕ್ತವೆಂಬುದು ಸಾರ್ವಜನಿಕರ ಅಭಿಪ್ರಾಯ.

ಮುಷ್ಕರ ನಿರತ ನೌಕರರೂ ಕೂಡಾ ಕೆಳ ಮಧ್ಯಮ ವರ್ಗದವರೇ ಆಗಿರೋದ್ರಿಂದ ಸರ್ಕಾರ ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಕೆಲ ಹಂತದ ನೌಕರರಿಗೆ ಸರ್ಕಾರ ಕಾನೂನಿನಡಿ ನೀಡಬೇಕಾದ ಕನಿಷ್ಟ ವೇತನವನ್ನೂ ನೀಡುತ್ತಿಲ್ಲ. ಹಲವು ವರ್ಷಗಳ ಕಾಲ ಸೇವೆ ಮಾಡಿದರೂ ನೌಕರರನ್ನು ಖಾಯಂ ಮಾಡದೇ ದುಡಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರ ಮಾನವೀಯತೆಯಿಂದ ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಹಾಗೆಯೇ ಸಾರಿಗೆ ನೌಕರರಲ್ಲದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಮುಷ್ಕರದ ಲಾಭ ಪಡೆಯುವ ಯತ್ನಕ್ಕೂ ನೌಕರರೇ ಕಡಿವಾಣ ಹಾಕಬೇಕು.

ಈಗಾಗಲೇ ನೌಕರರ ಸಂಘದ ವಿರುದ್ಧ ಸಾರಿಗೆ ಇಲಾಖೆ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದೆ. 2 ಕೋಟಿ ರೂಪಾಯಿ ನಷ್ಟ ಪರಿಹಾರ ಕೇಳಿದೆ. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಹೀಗಾಗಿ ಸಾರಿಗೆ ನೌಕರರೂ ಕಾನೂನಿನ ಮಾರ್ಗ ಹಿಡಿದು ತಮ್ಮ ಕಾರ್ಯ ಸಿದ್ದಿಸಿಕೊಳ್ಳಬೇಕಿದೆ. ಹಾಗೂ ಬಡವರ, ಸಾಮಾನ್ಯವರ್ಗದವರ ಆರ್ಥಿಕತೆಗೂ ತೊಂದರೆ ನೀಡದಂತೆ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ.

Source: TV9Kannada