‘ಶ್ರೀರಾಮನಿಲ್ಲದ ಅಯೋಧ್ಯೆ..ಅಯೋಧ್ಯೆಯೇ ಅಲ್ಲ’-ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind) ನಿನ್ನೆ (ಭಾನುವಾರ) ಅಯೋಧ್ಯೆಯ ರಾಮಲಲ್ಲಾ (Ram Lalla)ಗೆ ಪೂಜೆ ಸಮರ್ಪಿಸಿದ್ದಾರೆ. ಆಗಸ್ಟ್ 29ರಂದು ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Temple) ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ರಾಮನಾಥ ಕೋವಿಂದ್, ಸದ್ಯ ಅಲ್ಲೇ ಪಕ್ಕದ ಗುಡಿಯಲ್ಲಿರುವ ರಾಮ ಲಲ್ಲಾನ ದರ್ಶನ ಪಡೆದರು. ಹಾಗೇ, ಶ್ರೀರಾಮ ಎಲ್ಲರಿಗೂ ಸೇರಿದವನು..ಅವನು ಪ್ರತಿಯೊಬ್ಬರಲ್ಲೂ ಇದ್ದಾನೆ ಎಂದು ಹೇಳಿದರು.
ರಾಮ ಕಥಾ ಪಾರ್ಕ್ನಲ್ಲಿ ರಾಮಾಯಣ ಸಮಾವೇಶ ಉದ್ಘಾಟನೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜತೆಗೆ ಉತ್ತರಪ್ರದೇಶ ರಾಜ್ಯಪಾಲ ಆನಂದಿಬೆನ್ ಪಾಟೀಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು. ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸತತ ಪ್ರಯತ್ನದಿಂದಾಗಿ ಅಯೋಧ್ಯೆ ಮಾನವ ಕಲ್ಯಾಣದ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯಕ್ಕೆ ಈ ನಗರ ಉದಾಹರಣೆಯಾಗಲಿ ಎಂದೂ ಹೇಳಿದರು.
ಅಯೋಧ್ಯೆ, ಭಗವಾನ್ ಶ್ರೀರಾಮನ ಹುಟ್ಟಿದ ಸ್ಥಳ ಮತ್ತು ಅವನ ಲೀಲೆಗಳಿಗೆ ಸಾಕ್ಷಿಯಾದ ಭೂಮಿ. ರಾಮನಿಲ್ಲದ ಅಯೋಧ್ಯೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸಂಸ್ಕೃತ ಕವಿ ಭಾಸನ ಪ್ರತಿಮಾ ನಾಟಕದಲ್ಲಿ ಶ್ರೀರಾಮ ಮತ್ತು ಅಯೋಧ್ಯೆಯ ನಡುವಿನ ಸಂಬಂಧವನ್ನು ತುಂಬ ಸುಂದರವಾಗಿ ವರ್ಣಿಸಲಾಗಿದೆ. ರಾಮನಿಲ್ಲದ ಅಯೋಧ್ಯೆ, ಅಯೋಧ್ಯೆಯೇ ಅಲ್ಲ ಎಂದು ಆ ಕವಿ ಹೇಳಿದ್ದಾರೆ ಎಂದು ರಾಮನಾಥ ಕೋವಿಂದ್ ಹೇಳಿದರು. ಹಾಗೇ, ರಾಮಾಯಣ ಸಮಾವೇಶವನ್ನು ಆಯೋಜಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜೀವನ ಮೌಲ್ಯಗಳನ್ನು ಸಾರುವ ರಾಮಾಯಣ ಹೆಚ್ಚೆಚ್ಚು ಜನರಿಗೆ ತಿಳಿಯಬೇಕು ಎಂದೂ ಅಭಿಪ್ರಾಯಪಟ್ಟರು.
Source:Tv9kannada