ಶಿವರಾತ್ರಿ ಉಪವಾಸಕ್ಕೆ ಸ್ಪೆಷಲ್ ಅಡುಗೆ ಸಾಬೂದಾನ ರೆಸಿಪಿ
ಸಾಬೂದಾನ ಖಿಚಡಿ
ಬೇಕಾಗುವ ಸಾಮಗ್ರಿ: ಸಾಬೂದಾನ – 1 ಕಪ್ ಹುರಿದ ನೆಲಗಡಲೆ – 1/4 ಕಪ್, ತುಪ್ಪ, ಜೀರಿಗೆ, 2-3 ಹಸಿಮೆಣಸಿನ ಕಾಯಿ, ಕರಿಬೇವು, ಅರ್ಧ ಚಮಚ ಅರಿಶಿನ, ಕೊತ್ತಂಬರಿ ಸೊಪ್ಪು, ಲಿಂಬೆಯ ಅರ್ಧಭಾಗ.
ಮಾಡುವ ವಿಧಾನ: ಒಂದು ಕಪ್ ಸಾಬೂದಾನ್ಅನ್ನು ಮೂರೂವರೆ ಗಂಟೆಗಳ ಕಾಲ ನೆನೆಸಿಡಿ. ದಪ್ಪ ಸೈಸಿನ ಸಾಬೂದಾನ್ ಆದ್ರೂ ಒಳ್ಳೆಯದು. ಮೂರೂವರೆ ಗಂಟೆ ನೆನೆಸಿ ಬಳಿಕ ಸೋಸಿ ಒಂದು ಪಾತ್ರೆಗೆ ಹಾಕಿಡಿ. ಕಡಲೇ ಬೀಜವನ್ನು ಚೆನ್ನಾಗಿ ರೋಸ್ಟ್ ಮಾಡಿ ಅದನ್ನು ಡ್ರೈ ಆಗಿ ಮಿಕ್ಸಿಗೆ ಹಾಕಿ ಎರಡು ರೌಂಡ್ ತಿರುಗಿಸಿ ಸಾಕು. ಕಡಲೆಯನ್ನು ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಬೇಕು. ದೊಡ್ಡ ದೊಡ್ಡ ಚೂರುಗಳಿದ್ದರೆ ತಿನ್ನುವಾಗ ಹಲ್ಲಿಗೆ ಸಿಕ್ಕಿ ರುಚಿ ಇಮ್ಮಡಿಯಾಗುತ್ತದೆ. ಹೀಗೆ ಕಡಲೇ ಬೀಜ ಸೇರಿಸೋದರಿಂದ ಸಾಬೂದಾನ್‌ನಲ್ಲಿರುವ ಅಂಟಂಟು ಇರಲ್ಲ. ಬಿಡಿಬಿಡಿಯಾಗಿ ಸಾಬೂದಾನ್ ಚೆನ್ನಾಗಿರುತ್ತೆ. ಹೀಗೆ ರುಬ್ಬಿದ ಕಡಲೆಬೀಜವನ್ನು ನೆನೆಸಿ ನೋಸಿದ ಸಾಬೂದಾನ್ ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಬೇಕು. ನಂತರ ಇದಕ್ಕೆ ಜೀರಿಗೆ ಹಾಕಬೇಕು. ಬೀಕಿದ್ದರೆ ಸ್ವಲ್ಪ ಕಡಲೆಬೀಜ, ಕಡಲೆಬೇಳೆ ಹಾಕಿ ಕೆಂಪಾಗುವ ತನಕ ಹುರಿಯಬಹುದು. ನಂತರ ಹೆಚ್ಚಿದ ಹಸಿಮೆಣಸಿನ ಕಾಯಿಯನ್ನು ಇದಕ್ಕೆ ಹಾಕಿ. ನಂತರ ಕರಿಬೇವು ಹಾಕಿ ಹುರಿಯಿರಿ. ಈಗ ಸ್ಟೌಅನ್ನು ಲೋ ಫ್ಲೇಮ್‌ನಲ್ಲಿಟ್ಟುಕೊಂಡು ಅದಕ್ಕೆ ಸಾಬೂದಾನ್ ಕಡಲೇಬೀಜ ಮಿಕ್ಸ್ ಅನ್ನು ಹಾಕಿ. ಮೇಲಿಂದ ಸ್ವಲ್ಪ ಉಪ್ಪು ಹಾಕಿ. ಇದನ್ನು ತುಪ್ಪದಲ್ಲಿ ಒಂದೂವರೆ ನಿಮಿಷ ಬೇಯಲು ಬಿಡಿ. ನಂತರ ಇದಕ್ಕೆ ಸ್ಪಲ್ಪ ಅರಿಶಿನ ಪುಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.
ಸಾಬೂದಾನ ಪಾಯಸ
ಬೇಕಾಗುವ ಸಾಮಾಗ್ರಿ: ಸಾಬೂದಾನ 1 ಕಪ್, ( 3 ಗಂಟೆ ನೆನೆಸಿ ಸೋಸಿ ಇಡಬೇಕು), ಎರಡು ಸ್ಪೂನ್ ತುಪ್ಪ, ಒಂದೊಂದು ಸ್ಪೂನ್ ಗೋಡಂಬಿ ದ್ರಾಕ್ಷಿ, ಅರ್ಧ ಕಪ್ ಬೆಲ್ಲ, 200 ಎಂಎಲ್ ಹಾಲು, ಏಲಕ್ಕಿ ಅರ್ಧ ಚಮಚ.
ಮಾಡುವ ವಿಧಾನ: ಮೊದಲು ಸಾಬೂದಾನ (ಚಿಕ್ಕದಿದ್ದರೆ ಉತ್ತಮ. ದೊಡ್ಡದಾದರೆ ನಾಲ್ಕು ಗಂಟೆ ನೆನೆಸುವುದು ಕಡ್ಡಾಯ) ಚೆನ್ನಾಗಿ ತೊಳೆದು ಮೂರು ಗಂಟೆ ಕಾಲ ನೆನೆಸಿ, ನಂತರ ನೀರು ತೆಗೆದು ಸೋಸಿ ಇಡಿ. ಈಗ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಬಿಸಿಯಾದ ಮೇಲೆ ತೆಗೆದಿಟ್ಟ ಗೋಡಂಬಿ, ಒಣ ದ್ರಾಕ್ಷಿ ಹಾಕಿ. ಹದವಾಗಿ ಹುರಿಯಿರಿ. ನಂತರ ತೆಗೆದು ಪಕ್ಕಕ್ಕಿಡಿ. ಈಗ ಅದೇ ಬಾಣಲೆಗೆ ಇನ್ನಷ್ಟು ತುಪ್ಪಹಾಕಿ ನೆನೆಸಿಟ್ಟ ಸಾಬೂದಾನ್ಅನ್ನು ಹಾಕಿ ಚೆನ್ನಾಗಿ ತುಪ್ಪದಲ್ಲಿ ಸಾಬೂದಾನ್ ನ್ನ ಹುರಿಯಿರಿ. ಮೂರು ನಿಮಿಷ ಹುರಿಯಬೇಕು. ಲೋ ಫ್ಲೇಮ್ ನಲ್ಲಿ ಹುರಿಯೋದು ಅವಶ್ಯಕ. ಸಾಬೂದಾನ ಬಣ್ಣ ಬದಲಾಗುತ್ತದೆ. ಅದು ಪಾರದರ್ಶಕವಾಗಿ ಬದಲಾಗುತ್ತೆ. ಸಾಬೂದಾನಕ್ಕೆ ಇಂಥಾ ಹೊಳಪು ಬಂದಾಗ ಅದು ಬೆಂದಿದೆ ಅಂತ ಅರ್ಥ. ನಂತರ ಇದಕ್ಕೆ ಒಂದೂವರೆ ಕಪ್ ನಷ್ಟು ನೀರು ಹಾಕಿ. ಹೆಚ್ಚು ಬೇಕಿದ್ದರೂ ಹಾಕಬಹುದು. ಕೊಂಚ ಅಂಟಂಟಾದರೂ ಸಮಸ್ಯೆ ಇಲ್ಲ. ನೀರು ಕುದಿಯುವಾಗ ಇದಕ್ಕೆ ಬೆಲ್ಲ ಹಾಕಿ. ಬೆಲ್ಲದ ಬದಲಿಗೆ ಸಕ್ಕರೆಯನ್ನೂ ಹಾಕಬಹುದು. ಬೆಲ್ಲ ಚೆನ್ನಾಗಿ ಕುದಿದು ಕರಗಿದ ಬಳಿಕ ಅದನ್ನು ಸರಿಯಾಗಿ ಮಿಕ್ಸ್ ಮಾಡಿ ನಂತರ ಚೆನ್ನಾಗಿ ಕುದಿಸಿ ಆರಿಸಿದ ಗಟ್ಟಿ ಹಾಲನ್ನು ಇದನ್ನು ಹಾಕಬೇಕು. ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ನಂತರ ಕರಿದಿಟ್ಟ ಗೋಡಂಬಿ, ದ್ರಾಕ್ಷಿ ಹಾಕಿ. ಇದಕ್ಕೆ ಬಾದಾಮಿ ಪೌಡರ್ ಸೇರಿಸುವ ರೂಡಿಯೂ ಇದೆ.
Source: Suvarna News