ಶಿವಮೊಗ್ಗದಲ್ಲಿ ಹೋಟೆಲ್ ಮಾಲೀಕನ ಆರ್ಸಿಬಿ ಅಭಿಮಾನ; ರಾಯಲ್ ಚಾಲೆಂಜರ್ಸ್ಗೆ ವಿಭಿನ್ನ ರೀತಿಯ ಬೆಂಬಲ
ಸಂತೋಷ್ ರವರ ಬಜಾಜ್ ಸ್ಕೂಟರ್ ಮೇಲೆ ಡಾಕ್ಟರ್ ರಾಜಕುಮಾರ್ ರವರ ಭಾವಚಿತ್ರ ಹಾಗೂ ಕೆಂಪು ಹಳದಿ ಬಣ್ಣದ ಚಿತ್ರ ಹಾಕಿದ್ದು, ಈ ಸಲ ಕಪ್ ನಮ್ದೆ ಎಂದು ಬರೆದಿದ್ದಾರೆ. ಈ ವಾಹನ ಸದ್ಯ ನೋಡುಗರ ಗಮನಸೆಳೆಯುತ್ತಿದೆ.
ಶಿವಮೊಗ್ಗ: ಕ್ರಿಕೆಟ್ ಲೋಕದ ವರ್ಣರಂಜಿತ ಪಂದ್ಯಾವಳಿ ಐಪಿಎಲ್ 2021 ಸಾಲಿನ 14ನೇ ಆವೃತ್ತಿಯ ಉದ್ಘಾಟನೆ ಪಂದ್ಯ ಶುಕ್ರವಾರ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸೆಣೆಸಾಟದಲ್ಲಿ ಆರ್ಸಿಬಿ ತಂಡ ಗೆಲವು ಸಾಧಿಸಿದೆ. ಕಳೆದ 13 ಆವೃತ್ತಿಯಿಂದಲೂ ಈ ಸಲ ಕಪ್ ನಮ್ದೆ ಎನ್ನುತ್ತಿರುವ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ. ಅದು ಈ ಬಾರಿ ಕೂಡ ಯತಾಪ್ರಕಾರ ಮುಂದುವರಿದಿದೆ. ಇದಕ್ಕೆ ಕಮ್ಮಕ್ಕು ನೀಡುವಂತೆ ಸಾಗರ ನಗರದ ಗಾಂಧಿನಗರ ಸರ್ಕಲ್ನಲ್ಲಿ ಇರುವ ಸದ್ಗುರು ಹೋಟೆಲ್ ಮಾಲಿಕ ಸಂತೋಷ್ ಸದ್ಗುರು ಅವರು ವಿಶಿಷ್ಟ ರೀತಿಯಲ್ಲಿ ಈ ಸಲ ಕಪ್ ನಮ್ದೆ ಎಂದು ಹೇಳಿದ್ದಾರೆ.
ಸಂತೋಷ ಸದ್ಗುರು ಗಾಂಧಿನಗರ ಸರ್ಕಲ್ನಲ್ಲಿ ಸದ್ಗುರು ಹೋಟೆಲ್ ಎಂಬ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದು, ಇವರ ಹೋಟೆಲ್ಗೆ ಬರುವ ಗ್ರಾಹಕರಿಗೆ ಕಂಪ್ಯೂಟರಿಕೃತ ಬಿಲ್ ನೀಡುವ ವೇಳೆ ಬಿಲ್ ಕೆಳಭಾಗದಲ್ಲಿ ವಿಸಿಟ್ ಎಗೈನ್ ಮತ್ತು ಈ ಸಲ ಕಪ್ ನಮ್ದೆ ಎನ್ನುವ ಬರಹ ಸೇರಿಸಿ ವಿಭಿನ್ನವಾಗಿ ಸಾರ್ವಜನಿಕ ವಲಯದಲ್ಲಿ ಗಮನಸೆಳೆಯುತ್ತಿದ್ದಾರೆ .
ಇದರ ಜೊತೆಗೆ ಸಂತೋಷ್ ರವರ ಬಜಾಜ್ ಸ್ಕೂಟರ್ ಮೇಲೆ ಡಾಕ್ಟರ್ ರಾಜಕುಮಾರ್ ರವರ ಭಾವಚಿತ್ರ ಹಾಗೂ ಕೆಂಪು ಹಳದಿ ಬಣ್ಣದ ಚಿತ್ರ ಹಾಕಿದ್ದು, ಈ ಸಲ ಕಪ್ ನಮ್ದೆ ಎಂದು ಬರೆದಿದ್ದಾರೆ. ಈ ವಾಹನ ಸದ್ಯ ನೋಡುಗರ ಗಮನಸೆಳೆಯುತ್ತಿದೆ.
ಹೋಟೆಲ್ ಬಿಲ್ನಲ್ಲಿ ಈ ಸಲ ಕಪ್ ನಮ್ದೆ ಎಂಬ ಬರಹ
ಐಪಿಎಲ್ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿರುವ ಸಂತೋಷ್ ಆರ್ಸಿಬಿಗೆ ಈ ರೀತಿ ವಿಭಿನ್ನವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೆ ತಮ್ಮ ಹೋಟೆಲ್ಗೆ ಬರುವ ಗ್ರಾಹಕರಿಗೆ ಹಾಗೂ ಪ್ರವಾಸಿಗರಿಗೆ ಈ ಸಲ ಕಪ್ ನಮ್ದೆ ಎನ್ನುವ ಬಜಾಜ್ ಸ್ಕೂಟರ್ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಸದ್ಯ ಹೊಟೇಲ್ಗೆ ಬರುವ ಗ್ರಾಹಕರಿಗೆ ಬಿಲ್ ಮತ್ತು ಸ್ಕೂಟರ್ ಪ್ರಮುಖ ಆಕರ್ಷಣೆಯಾಗಿದ್ದು, ಹೊಟೆಲ್ಗೆ ಬರುವ ಗ್ರಾಹಕರು ಆರ್ಸಿಬಿಗೆ ಹೆಚ್ಚು ಬೆಂಬಲ ಸೂಚಿಸುತ್ತಿದ್ದಾರೆ.
(Hotel owner who is supporting the RCB team in different ways in Shivamogga)
Source: TV9Kannada