ಶಿವಕುಮಾರಶ್ರೀ ಸ್ಮರಣೆ ಇನ್ನು ದಾಸೋಹ ದಿನ: ಸಿಎಂ ಬಿಎಸ್‌ವೈ

Jan 22, 2021

ತುಮಕೂರು(ಜ.22): ನಡೆದಾಡುವ ದೇವರು ಲಿಂ. ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಅವರು ಗುರುವಾರ ಸಿದ್ದಗಂಗಾಮಠದಲ್ಲಿ ನಡೆದ ಲಿಂ. ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ದಗಂಗಾ ಶ್ರೀಗಳು ಪ್ರಾತಃಸ್ಮರಣೀಯರು ಯಡಿಯೂರಪ್ಪ ಬಣ್ಣಿಸಿದರು.\\

ವೀರಾಪುರ ತೀರ್ಥಕ್ಷೇತ್ರವಾಗಬೇಕು:

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಾದ ವೀರಾಪುರದಲ್ಲಿ 111ಅಡಿ ಎತ್ತರದ ಪುತ್ಥಳಿ, ಗ್ರಾಮದ ಅಭಿವೃದ್ಧಿಗೆ 25 ಕೋಟಿ ಬಿಡುಗಡೆ ಮಾಡಲಾಗಿದೆ. ವೀರಾಪುರ ತೀರ್ಥಕ್ಷೇತ್ರವಾಗಬೇಕು ಎಂದು ತಿಳಿಸಿದರು.

ಕೋಟ್ಯಂತರ ಭಕ್ತರಿಗೆ ದೇವರಾಗಿದ್ದ ಶಿವಕುಮಾರ ಶ್ರೀಗಳು, ಅನ್ನ, ಅರಿವು, ಆಶ್ರಯ ನೀಡಿ ತ್ರಿವಿಧ ದಾಸೋಹ ನೀಡಿದ್ದಾರೆ. ಜಾತಿ,ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಿ ಅವರ ಬಾಳಿನ ಬೆಳಕಾಗಿದ್ದಾರೆ ಎಂದು ಯಡಿಯೂರಪ್ಪ ಪ್ರಶಂಶಿಸಿದರು.

Source: Suvarna News