ಶಿಕ್ಷಣದ ಜತೆ ಮಕ್ಕಳ ಜೀವವೂ ಮುಖ್ಯ, ಶಾಲೆ ಆರಂಭಕ್ಕೆ ಆತುರ ಬೇಡ – ಆರೋಗ್ಯ ಸಚಿವ ಡಾ.ಸುಧಾಕರ್

Jun 28, 2021

ಕೊರೊನಾ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಎನ್ನುವುದು ಇನ್ನೂ ಗೊತ್ತಿಲ್ಲ. ಬಹುಶಃ ಇನ್ನೊಂದು ವಾರ ಸಮಯ ಬೇಕಾಗಬಹುದು. ಜುಲೈ 5ನೇ ತಾರೀಖಿನವರೆಗಾದರೂ ಕಾದು ನೋಡಬೇಕು. ಹಂತ ಹಂತವಾಗಿ ಲಾಕ್​ಡೌನ್ ತೆರವು ಮಾಡುವ ಕುರಿತು ಏಮ್ಸ್ ನಿರ್ದೇಶಕರು ಕೂಡಾ ಪತ್ರ ಬರೆದಿದ್ದಾರೆ: ಡಾ|ಸುಧಾಕರ್.

ಬೆಂಗಳೂರು: ಕೊರೊನಾ ಲಸಿಕೆ ವಿತರಣೆ ಹಾಗೂ ಶೈಕ್ಷಣಿಕ ಚಟುವಟಿಕೆ ಆರಂಭಿಸುವುದರ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಇನ್ನೂ ಎರಡನೇ ಅಲೆ ಬಗ್ಗೆಯೇ ಅನುಮಾನವಿದೆ. ಅದು ಯಾವಾಗ ಕಡಿಮೆಯಾಗುತ್ತದೆ ಎಂದು ಗೊತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ ಮುಖ್ಯ ಎನ್ನುವುದು ನಿಜ. ಆದರೆ, ಶಿಕ್ಷಣದ ಜತೆಗೆ ಜೀವ ಕೂಡಾ ಬಹಳ ಮುಖ್ಯ. ಹೀಗಾಗಿ ಶಾಲಾ ಆರಂಭದ ಬಗ್ಗೆ ಆತುರದ ನಿರ್ಧಾರ ಬೇಡ. ಸ್ವಲ್ಪ ಗಮನಿಸಬೇಕು ಎಂದು ಹೇಳುವ ಮೂಲಕ ಶಿಕ್ಷಣ ಸಚಿವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

24 ಲಕ್ಷದ 37 ಸಾವಿರದ 732 ಜನ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಇಂದಿನಿಂದಲೇ ಲಸಿಕೆ ವಿತರಣೆ ಮಾಡಲಾಗುತ್ತದೆ. 10 ವಷರ್ದೊಳಗಿನ ಮಕ್ಕಳ ಎಲ್ಲಾ ಪೋಷಕರಿಗೂ ಕೊರೊನಾ ಲಸಿಕೆ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಲಸಿಕೆ ಪೂರೈಕೆಯನ್ನು ಹೆಚ್ಚಳ ಮಾಡುವುದಕ್ಕೆ ಮನವಿ ಮಾಡುತ್ತೇವೆ. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಆದರೆ, ಶಿಕ್ಷಣದ ಜತೆಗೆ ಜೀವ ಕೂಡ ಬಹಳ ಮುಖ್ಯ. ಹೀಗಾಗಿ ಈ ವಿಚಾರದಲ್ಲಿ ಆತುರದ ನಿರ್ಧಾರ ಬೇಡ ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಎನ್ನುವುದು ಇನ್ನೂ ಗೊತ್ತಿಲ್ಲ. ಬಹುಶಃ ಇನ್ನೊಂದು ವಾರ ಸಮಯ ಬೇಕಾಗಬಹುದು. ಜುಲೈ 5ನೇ ತಾರೀಖಿನವರೆಗಾದರೂ ಕಾದು ನೋಡಬೇಕು. ಹಂತ ಹಂತವಾಗಿ ಲಾಕ್​ಡೌನ್ ತೆರವು ಮಾಡುವ ಕುರಿತು ಏಮ್ಸ್ ನಿರ್ದೇಶಕರು ಕೂಡಾ ಪತ್ರ ಬರೆದಿದ್ದಾರೆ. ಕಡೇಪಕ್ಷ ಲಸಿಕೆ 70 ಪರ್ಸೆಂಟ್ ವಿತರಣೆ ಆಗುವವರೆಗೂ ಕಾಯಬೇಕು. ಮಕ್ಕಳ ಶಿಕ್ಷಣ ಬಗ್ಗೆ ಕಾಳಜಿ ಇದೆ. ಜತೆಗೆ ಜೀವನೂ ಅಷ್ಟೇ ಮುಖ್ಯ ಎಂಬ ಅರಿವಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜನರು ಕೂಡ ಎಚ್ಚರದಿಂದ ಇರಬೇಕು. ಮನೆಗಳಲ್ಲಿ ಹೆಚ್ಚು ಜಾಗವಿಲ್ಲ ಅಂತ ಚೌಲ್ಟ್ರಿಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ನಿಯಮ ಮೀರಿ 500, 1000 ಜನ ಸೇರುತ್ತಿದ್ದಾರೆ. ಈ ರೀತಿ ಮಾಡಿ ಸರ್ಕಾರವನ್ನ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ನಿಯಮ ಉಲ್ಲಂಘಿಸಿದರೆ ದಂಡದ ಪ್ರಯೋಗ ಮಾಡಿ ಕ್ರಮವಹಿಸಲಾಗುತ್ತದೆ. ಅಲ್ಲದೇ, ಸಮಾರಂಭಗಳಲ್ಲಿ, ಹೊಟೇಲ್, ಚೌಲ್ಟ್ರಿಗಳಲ್ಲಿ ಮಾಸ್ಕ್ ಇಲ್ಲದೇ ಜನ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಯಾವ ಜಿಲ್ಲೆಯಲ್ಲಿ ಈ ರೀತಿಯಾಗುತ್ತದೋ ಅಲ್ಲಿನ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರಿಕೆಯನ್ನಾಗಿ ಮಾಡಲಾಗುವುದು ಎನ್ನುವ ಮೂಲಕ ನಿಯಂತ್ರಣದ ಜವಾಬ್ದಾರಿಯನ್ನು ಜಿಲ್ಲಾಡಳಿತದ ಮೇಲೆ ಹೊರಿಸಿದ್ದಾರೆ.

ಮುಖ್ಯಮಂತ್ರಿಯವರು ಕೊಟ್ಟಿರುವ ಅನುಮತಿಯನ್ನೇ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಜೀವ ಮತ್ತು ಜೀವನ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇನ್ನು ಮೂರ್ನಾಲ್ಕು ತಿಂಗಳು ಕಾಯಬೇಕು. ಬ್ಲಾಕ್ ಫಂಗಸ್ ಕಡಿಮೆಯಾಗಲೂ ಒಂದರಿಂದ ಮೂರು ತಿಂಗಳು ಸಮಯ ಬೇಕು. ಹೀಗಾಗಿ ಈ ಸಂದರ್ಭದಲ್ಲಿ ಗೃಹ ಸಚಿವರಿಗೂ ಸಹಕಾರ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಕೊರೊನಾ ಲಸಿಕೆ ಮೂರರಿಂದ ಐದು ಲಕ್ಷ ಕೊಡುತ್ತಿದ್ದೇವೆ. ನಿರಂತರವಾಗಿ ಪೂರೈಕೆಯಾಗುತ್ತಿದೆ. ಆದರೆ, ಪ್ರತಿದಿನ 10 ಲಕ್ಷ ಡೋಸ್ ಕೋಡುವುದಕ್ಕೆ ಆಗದಿರಬಹುದು ಹಂತ ಹಂತವಾಗಿ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಭರವಸೆ ವ್ಯಕ್ತಪಡಿಸಿದ್ದಾರೆ.

 

Source: Tv9Kannada