ವಾಚ್‌ನಲ್ಲಿಯೇ ಬೈಕ್ ಆನ್ ಆಫ್ ಮಾಡಿ: ಕನ್ನಡಿಗನಿಂದ ಸಂಶೋಧನೆ..!
ಕೊಪ್ಪಳ(ಫೆ.06): ಕೈಯಲ್ಲಿರುವ ವಾಚ್‌ನಲ್ಲಿಯೇ ನಿಮ್ಮ ಬೈಕ್ ಆನ್-ಆಫ್ ಮಾಡಿ. ಅಷ್ಟೆ ಯಾಕೆ? ನೀವು ಚಲಿಸುವಾಗ ಸ್ಟ್ಯಾಂಡ್ ತೆಗೆಯದಿದ್ದರೂ ನಿಮಗೆ ಬೀಪ್ ಸೌಂಡ್ ಬರುತ್ತದೆ. ನಿಮ್ಮ ಬೈಕ್ ಯಾರಾದರೂ ಬೇರೆಯವರು ಶುರು ಮಾಡುವ ಯತ್ನ ಮಾಡಿದರೂ ಬೀಪ್ ಸೌಂಡ್ ನಿಮ್ಮ ವಾಚ್‌ನಲ್ಲಿ ಬರುತ್ತದೆ.
ಇಂಥದ್ದೊಂದು ವಾಚ್ ಅನ್ನು ಗಂಗಾವತಿಯ ಅಕ್ಬರ್‌ಸಾಬ ಅಭಿವೃದ್ಧಿ ಪಡಿಸಿದ್ದಾರೆ. ಹಾಗಂತ ನಾವು ಅವರ ಬಳಿಯೇ ಇರುವ ವಾಚ್ ಖರೀದಿಸಿಬೇಕು ಎಂದೇನಿಲ್ಲ. ನಿಮ್ಮ ಬಳಿ ಬ್ಯಾಟರಿ ಇರುವ ವಾಚ್ ಇದ್ದರೆ ಸಾಕು, ಅವರು ಡಿವೈಸ್ ಅಳವಡಿಸುತ್ತಾರೆ. ರೇಡಿಯೇಷನ್ ಮೂಲಕ ಸ್ಮಾರ್ಟ್ ವಾಚ್‌ನಲ್ಲಿ ಇದನ್ನು ಅಳವಡಿಸಬಹುದಾಗಿದೆ. ಜಿಲ್ಲೆಯ ಗಂಗಾವತಿ ನಗರದ 5ನೇ ವಾರ್ಡಿನ ಅಕ್ಬರ್‌ಸಾಬ ಗಂಗಾವತಿ ಎಂಬ ಯುವಕನೇ ಇಂತಹದ್ದೊಂದು ಸಂಶೋಧನೆ ಮಾಡಿದ್ದು, ಭಾರಿ ಅಚ್ಚರಿ ಮೂಡಿಸಿದ್ದಾರೆ.
ಐಟಿಐ ಶಿಕ್ಷಣ ಪಡೆದಿರುವ ಇವರಿಗೆ ಸುಮಾರು 7 ವರ್ಷ ಎಲೆಕ್ಟ್ರೆಶಿಯನ್ ಆಗಿ ಕೆಲಸ ಮಾಡಿದ ಅನುಭವ ಇದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಇಂಥ ಹಲವಾರು ಸಂಶೋಧನೆ ಮಾಡುತ್ತಲೇ ಇರುತ್ತಾರೆ. ಈಗ ಬೈಕ್ ಶುರು ಮಾಡುವ ಡಿವೈಸ್ ಕಂಡು ಹಿಡಿದು, ಅದರಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ಬೈಕ್‌ಗಳಿಗೆ ಕೀ ಹಾಕಿ, ಆನ್ ಮಾಡಿ, ಕಿಕ್ ಮಾಡಿದ ಬಳಿಕ ಬೈಕ್ ಆರಂಭವಾಗುತ್ತವೆ. ಇಲ್ಲವೇ ಬಟನ್ ಒತ್ತಿದ ಬಳಿಕ ಆರಂಭವಾಗುತ್ತವೆ. ಆದರೆ, ಇವರು ಬೈಕ್ ಕೀ ಇಟ್ಟು ಆನ್ ಮಾಡಿ ತಮ್ಮ ಕೈ ಗಡಿಯಾರದಲ್ಲಿ(ವಾಚ್) ಸಿದ್ಧಪಡಿಸಿದ ಡಿವೈಸ್ ಬಟನ್ ಒತ್ತಿದ ತಕ್ಷಣವೇ ಬೈಕ್ ಆರಂಭಾಗುತ್ತದೆ. ಅದೇ ಬಟನ್ ಮತ್ತೊಮ್ಮೆ ಒತ್ತಿದರೆ ಬಂದ್ ಆಗುತ್ತದೆ. ಇದಕ್ಕೆ ಸ್ಮಾರ್ಟ್ ವಾಚ್ ಡಿವೈಸ್ ಎಂದು ಹೆಸರಿಟ್ಟಿದ್ದಾರೆ. ಬೈಕ್ ಕಳ್ಳತನವಾಗುವುದನ್ನ ತಪ್ಪಿಸಲು ಇದನ್ನು ಬಳಸಬಹುದಾಗಿದೆ ಎನ್ನುತ್ತಾರೆ.
ಈ ಸ್ಮಾರ್ಟ್ ವಾಚ್ ಡಿವೈಸ್ ತರಂಗಾಂತರದ ಮೂಲಕ ಕೆಲಸ ಮಾಡುತ್ತದೆ. ಕನಿಷ್ಠ 30-40 ಅಡಿ ದೂರದಲ್ಲಿದ್ದರೂ ಆಪರೇಟ್ ಮಾಡಬಹುದು. ಈ ಯಂತ್ರವನ್ನು ಲೈಟ್ ಆನ್-ಆಫ್ ಮಾಡಲು, ವಾಟರ್ ಮೋಟರ್, ಫ್ರಿಜ್ ಸೇರಿದಂತೆ ಯಾವುದೇ ವಿದ್ಯುತ್ ನಿಯಂತ್ರಿತ ಸಾಮಗ್ರಿಗಳಲ್ಲಿ ಡಿವೈಸ್ ಅಳವಡಿಕೆ ಮಾಡಿ ಕಂಟ್ರೋಲ್ ಮಾಡಬಹುದಾಗಿದೆ.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿ, ಅದರ ಕಾರ್ಯ ನಿರ್ವಹಣೆಯನ್ನು ಪ್ರಾಯೋಗಿಕವಾಗಿಯೂ ಮಾಧ್ಯಮದವರ ಎದುರು ತೋರಿಸಿದರು. ಇದನ್ನು ಈಗಷ್ಟೇ ಕಂಡು ಹಿಡಿದಿದ್ದೇನೆ. ಹೀಗಾಗಿ, ನೋಂದಣಿ ಮಾಡಿಸಿಲ್ಲ. ನಾನಾ ಕಂಪನಿಗಳು ಇದನ್ನು ಕೇಳುತ್ತಿವೆಯಾದರೂ ಕೊಟ್ಟಿಲ್ಲ. ನಾನೇ ಇತರರ ಸಹಾಯದಿಂದ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ.
2015ರಲ್ಲಿ ಸ್ಮಾರ್ಟ್ ಸೆಕ್ಯೂರಿಟಿ ಡಿವೈಸ್, 2017ರಲ್ಲಿ ಹೆಲ್ಮೆಟ್ ಅಲರ್ಟ್ ಡಿವೈಸ್, 2019ರಲ್ಲಿ ರಿಮೈಂಡರ್-19 ಡಿವೈಸ್‌ಗಳನ್ನ ಕಂಡು ಹಿಡಿದಿದ್ದಾರೆ. ಈಗ ಸ್ಮಾರ್ಟ್ ವಾಚ್ ಡಿವೈಸ್ 4ನೇ ಸಂಶೋಧನೆಯಾಗಿದೆ. ಈ ಡಿವೈಸ್‌ನ್ನು ನಾನು ಈಗ ಮಾಡಿಕೊಡಲು ಸಿದ್ಧವಿದ್ದೇನೆ. ಕೇವಲ 1000-1500 ವೆಚ್ಚವಾಗುತ್ತದೆ. ಬೇಕೆಂದವರು ಮೊ. 9886549211ಗೆ ಕರೆ ಮಾಡಬಹುದು ಎಂದಿದ್ದಾರೆ.
Source:Suvarna News