ರಿಲಯನ್ಸ್ ಫೌಂಡೇಷನ್​ನಿಂದ ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ; ಹರ್ ಸರ್ಕಲ್​ನಲ್ಲಿ ಏನೇನಿದೆ?

Mar 10, 2021

Her Circle App: ಹರ್ ಸರ್ಕಲ್ ಆ್ಯಪ್​ನ್ನು ಗೂಗಲ್ ಪ್ಲೇ ಸ್ಟೋರ್ ಮೈ ಜಿಯೊ ಆ್ಯಪ್ ಸ್ಟೋರ್ ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಮಹಿಳೆಯರಿಗಾಗಿಯೇ ಇರುವ ಸಾಮಾಜಿಕ ತಾಣ ಇದಾಗಿದ್ದು ಇದರಲ್ಲಿ ಆಸಕ್ತಿಯ ಗುಂಪುಗಳನ್ನು ಸೇರುವ ಅವಕಾಶವಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯಕ್ತ ನೀತಾ ಅಂಬಾನಿ ಅವರ ರಿಲಯನ್ಸ್ ಫೌಂಡೇಷನ್ ಮಹಿಳೆಯರಿಗಾಗಿ ಹರ್ ಸರ್ಕಲ್ (Her Circle) ಎಂಬ ಡಿಜಿಟಲ್ ವೇದಿಕೆಯನ್ನು ಆರಂಭಿಸಿದೆ. ಮಹಿಳೆಯರಿಗೆ ಸುರಕ್ಷಿತವಾಗಿ ಪರಸ್ಪರ ಸಂವಹನ ನಡೆಸುತ್ತಾ ಪರಸ್ಪರ ಬೆಂಬಲದಿಂದ ಜತೆಯಾಗಿ ಮುನ್ನಡೆಯೋಣ ಎಂಬ ಉದ್ದೇಶವನ್ನು ಈ ವೇದಿಕೆ ಹೊಂದಿದೆ. ಮಾರ್ಚ್ 8ರಂದು ಆ್ಯಪ್​ಗೆ ಚಾಲನೆ ನೀಡಿದ ನೀತಾ ಅಂಬಾನಿ, ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಗೆ ಸಹಾಯ ಹಸ್ತ ಚಾಚಿದಾಗ ಅಲ್ಲಿ ಮಹತ್ತರ ಕಾರ್ಯಗಳು ನಡೆಯುತ್ತವೆ ಎಂದಿದ್ದಾರೆ.

ರಿಲಯನ್ಸ್ ಫೌಂಡೇಷನ್​ನ ಮಹಿಳೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಹಿಳಾ ನಾಯಕಿಯರ ಜತೆ ನಾನು ಕೆಲಸ ಮಾಡಿದ್ದೇನೆ. ನಮ್ಮ ಹೋರಾಟ ಮತ್ತು ಗೆಲುವು ಪರಸ್ಪರ ಸಂಬಂಧ ಹೊಂದಿರುತ್ತದೆ. ಇದು ಅವರೊಂದಿಗೆ ನಾನು ಮಾಡಿದ ಕೆಲಸದ ಅನುಭವದಿಂದ ಹೇಳುತ್ತಿದ್ದೇನೆ. ಪ್ರತಿ ಮಹಿಳೆಯೊಂದಿಗೆ ಬೆರೆಯಲು ಮತ್ತು ತನ್ನ ಆಸಕ್ತಿ ವಲಯಕ್ಕೆ ಇತರ ಮಹಿಳೆಯನ್ನು ಆಹ್ವಾನಿಸುವ ಡಿಜಿಟಲ್ ಪ್ಲಾಟ್‌ಫಾರ್ಮ್ ಹರ್ ಸರ್ಕಲ್. ಈ ಮೂಲಕ ನಾವು ಲಕ್ಷಾಂತರ ಮಹಿಳೆಯರಿಗೆ ಬೆಂಬಲ ಮತ್ತು ಒಗ್ಗಟ್ಟಿನ ವಲಯವನ್ನು ರಚಿಸಲು ಸಾಧ್ಯವಾಗುತ್ತದೆ. ಡಿಜಿಟಲ್ ಕ್ರಾಂತಿಯೊಂದಿಗೆ 24×7 ಜಾಗತಿಕ ನೆಟ್‌ವರ್ಕಿಂಗ್ ಮತ್ತು ಸಹಯೋಗವನ್ನು ಸಕ್ರಿಯಗೊಳಿಸುವ ಮೂಲಕ ಎಲ್ಲಾ ಸಂಸ್ಕೃತಿಗಳು, ಸಮುದಾಯಗಳು ಮತ್ತು ದೇಶಗಳ ಮಹಿಳೆಯರ ಆಲೋಚನೆಗಳನ್ನು ಹರ್ ಸರ್ಕಲ್ ಸ್ವಾಗತಿಸುತ್ತದೆ ಎಂದಿದ್ದಾರೆ ನೀತಾ ಅಂಬಾನಿ.

ಏನಿದು ಹರ್ ಸರ್ಕಲ್
ಹರ್ ಸರ್ಕಲ್ ಎಂಬುದು ಆ್ಯಪ್ ಆಗಿದ್ದು ಗೂಗಲ್ ಪ್ಲೇ ಸ್ಟೋರ್, ಮೈ ಜಿಯೊ ಆ್ಯಪ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಹಿಳೆಯರಿಗಾಗಿಯೇ ಇರುವ ಸಾಮಾಜಿಕ ತಾಣ ಇದಾಗಿದ್ದು ಇದರಲ್ಲಿ ಆಸಕ್ತಿಯ ಗುಂಪುಗಳನ್ನು ಸೇರುವ ಅವಕಾಶವಿದೆ. ಗೂಗಲ್ ಖಾತೆ ಇಲ್ಲವೇ ಫೇಸ್ ಬುಕ್ ಖಾತೆಯ ಲಾಗಿನ್ ಐಡಿ ಬಳಸಿ ಈ ಆ್ಯಪ್ ಗೆ ಲಾಗಿನ್ ಆಗಬಹುದು.

ಆ್ಯಪ್ ನಲ್ಲಿ ಏನೇನಿದೆ?
Connect , Engage, Grow, Goals, Help ಹೀಗೆ ಐದು ವಿಭಾಗಗಳನ್ನು ಇಲ್ಲಿ ಕಾಣಬಹುದು. ಕನೆಕ್ಟ್ ಮೂಲಕ ನಿಮಗೆ ಆಸಕ್ತಿ ಇರುವ ವಲಯದವರೊಂದಿಗೆ ಸಂಪರ್ಕ ಹೊಂದಬಹುದು. ಫೇಸ್​ಬುಕ್ ನಲ್ಲಿರುವಂತೆ ಇಲ್ಲಿ ನಿಮ್ಮದೇ ಆದ ಪೋಸ್ಟ್ ರಚಿಸಲು, ಸ್ಟೋರಿ ಹಾಕಲು ಅವಕಾಶವಿದೆ. ಎಂಗೇಜ್ ಕ್ಲಿಕ್ ಮಾಡುವ ಮೂಲಕ ಆಸಕ್ತಿ ವಲಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು. ಆರೋಗ್ಯ, ಸಾಧನೆ, ಕೆಲಸ, ಸಾಧಕಿಯರ ಬಗ್ಗೆ ಇಲ್ಲಿ ಮಾಹಿತಿಗಳಿವೆ. ಗ್ರೋ ಕ್ಲಿಕ್ ಮಾಡಿದರೆ ಕೆಲಸ, ಕೌಶಲ್ಯ, ಸೃಜನಶೀಲ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಉದ್ಯೋಗವಕಾಶಗಳ ಬಗ್ಗೆ ಮಾಹಿತಿ, ಉದ್ಯೋಗದಲ್ಲಿ ಕೌಶಲಭಿವೃದ್ದಿ, ವಿವಿಧ ಕಸೂತಿ ಕಲೆ, ಪೇಟಿಂಗ್ ಹೇಗೆ ಮಾಡುವುದು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲಿದೆ.

ಗೋಲ್ಸ್ ಕ್ಲಿಕ್ ಮಾಡಿದರೆ ಋತುಚಕ್ರ ( Period) ಟ್ರ್ಯಾಕಿಂಗ್, ಗರ್ಭಧಾರಣೆ, ಡಯಟ್, ಆರ್ಥಿಕ ಗುರಿಗಳ ಬಗ್ಗೆಯೂ ಇಲ್ಲಿ ನೋಟ್ ಮಾಡಿಟ್ಟುಕೊಳ್ಳಬಹುದು. ಹೆಲ್ಫ್ ಕ್ಲಿಕ್ ಮಾಡಿದರೆ ಕೌನ್ಸಿಲಿಂಗ್ ಕಾರ್ನರ್ ತೆರೆದು ಕೊಳ್ಳುತ್ತದೆ. ಇಲ್ಲಿ ವಿವಿಧ ವಿಭಾಗದ ತಜ್ಞರಿದ್ದು ಅವರೊಂದಿಗೆ ಸಂವಹನ ನಡೆಸಬಹುದು.

ವಿಡಿಯೊ
ಸಾಧಕಿಯರ ಬಗ್ಗೆ ವಿವರಿಸುವ, ಸ್ಫೂರ್ತಿ ತುಂಬುವ, ಮೊದಲ ಬಾರಿ ಅಡುಗೆ ಮಾಡುವವರಿಗೆ ಸಹಾಯವಾಗಲು ಅಡುಗೆ ಹೇಳಿಕೊಡುವ ವಿಡಿಯೊಗಳೂ ಇಲ್ಲಿವೆ. ಆರೋಗ್ಯ, ಫಿಟ್ ನೆಸ್, ಮೇಕಪ್, ಉಡುಗೆ ತೊಡುಗೆಗಳ ಬಗ್ಗೆಯೂ ಕಿರು ವಿಡಿಯೊಗಳು ಈ ಆ್ಯಪ್ ನಲ್ಲಿದೆ. ಇದೀಗ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾಗಿರುವ ಈ ಆ್ಯಪ್ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ.

Source: TV9Kannada