ರಾಜಕಾರಣಿ ಇದ್ದಾರೆ ಈ ಸಲ, ಕುತೂಹಲ ಇದೆ; ಬಿಗ್‌ ಬಾಸ್‌ ಸುದೀಪ್‌ ಮಾತುಕತೆ!

Feb 27, 2021

ಸಿನಿಮಾದಲ್ಲಾದರೆ ಸ್ಕಿ್ರಪ್ಟ್‌ ಇರುತ್ತೆ. ಅದಕ್ಕೆ ತಕ್ಕಂತೆ ಅಭಿನಯಿಸಿದರೆ ಮುಗೀತು. ಆದರೆ ಇಲ್ಲಿ ಹಾಗಲ್ಲ. ಆ ಸ್ಪರ್ಧಿಗಳಿಗೆ ನಾನೇ ಹೊರಜಗತ್ತಿನ ಕೀಲಿಗೈ. ತಮ್ಮ ಏಕತಾನತೆ, ಫ್ರಸ್ಪ್ರೇಶನ್‌, ನೋವು, ದುಃಖ, ಆಸೆ ಹೀಗೆ ಅವರ ಮಾತು ನಾನಾ ಭಾವಗಳಿಂದ ವರ್ಣರಂಜಿತವಾಗಿರುತ್ತದೆ. ಅದಕ್ಕೆ ಸ್ಪಂದಿಸುವುದೇ ಚಾಲೆಂಜಿಂಗ್‌. ಇವರ ಸ್ವಭಾವ ಹೀಗೇ ಅಂತ ಪ್ರೆಡಿಕ್ಟ್ ಮಾಡೋದಕ್ಕಾಗಲ್ಲ. ಇವತ್ತು ಒಂಥರಾ ಮಾತನಾಡಿದ ಸ್ಪರ್ಧಿ ಮರುಕ್ಷಣವೇ ಬೇರೆ ರೀತಿಯ ವರ್ತನೆ ತೋರುತ್ತಾಳೆ. ಉದಾಹರಣೆಗೆ ಹುಚ್ಚ ವೆಂಕಟ್‌ ಮನೆಯಲ್ಲಿದ್ದಾಗ ಜನರ ರೆಸ್ಪಾನ್ಸ್‌ ನೋಡಿ, ಅವರೇ ವಿನ್‌ ಆಗಬಹುದು ಅಂತ ಪರಮೇಶ್ವರ ಗುಂಡ್ಕಲ್‌ ಬಳಿ ಹೇಳುತ್ತಿದ್ದೆ. ಅದೇ ದಿನ ಅವರು ಇನ್ನೊಬ್ಬರ ಮೇಲೆ ಹಲ್ಲೆ ಮಾಡಿ ಮನೆಯಿಂದಲೇ ಆಚೆ ಹೋದರು.

ಬಿಗ್‌ ಬಾಸ್‌ ಸ್ಪರ್ಧಿ ಆಗಬಹುದು ಆದರೆ..

ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಹೋಗಲು ನಾನು ರೆಡಿ. ಆದರೆ ಇಲ್ಲಿರುವ ಸ್ಪರ್ಧಿಗಳ್ಯಾರೂ ಫ್ರೀಯಾಗಿ ಹೋಗಲ್ಲ, ಅವರ ಅರ್ಹತೆಗನುಸಾರ ಸಂಭಾವನೆ ಪಡೆಯುತ್ತಾರೆ. ನನ್ನ ಲೆವೆಲ್‌ಗೆ ತಕ್ಕಂತೆ ನೀಡಿದ್ರೆ ನಾನೂ ರೆಡಿ. ಆದರೆ ಸ್ಪರ್ಧಿಗಳು ಬಹಳ ಜನ ಇರುತ್ತಾರೆ. ನಾನೇ ಒಳಗೆ ಹೋದರೆ ಹೋಸ್ಟ್‌ ಮಾಡೋದಕ್ಕೆ ಮತ್ತೊಬ್ಬ ಸುದೀಪ್‌ನ ಎಲ್ಲಿಂದ ತರ್ತೀರ, ನನಗೆ ಹೋಸ್ಟ್‌ ಮಾಡೋದಿಷ್ಟ. ಅದನ್ನೇ ಮಾಡ್ತೀನಿ.

ಸೀಸನ್‌ 8 ಬಗ್ಗೆ ಕುತೂಹಲವಿದೆ

ಬಿಗ್‌ಬಾಸ್‌ನಲ್ಲಿ ನನಗಿಷ್ಟವಾದದ್ದು ಮೊದಲನೇ ಸೀಸನ್‌. ಬಹಳ ಕಷ್ಟವಾದದ್ದು ಸೀಸನ್‌ 6. ಆಗ ಯಾವ ಪರಿ ಒತ್ತಡಕ್ಕೆ ಸಿಲುಕಿದ್ದೆ ಅಂದರೆ, ನೆಕ್ಸ್ಟ್‌ಸೀಸನ್‌ಗೆ ನಾನಿರಲ್ಲ, ಬೇರೆ ಯಾರನ್ನಾದ್ರೂ ಹುಡುಕಿಕೊಳ್ಳಿ ಅಂತ ಪರಮ್‌(ಪರಮೇಶ್ವರ ಗುಂಡ್ಕಲ್‌)ಗೆ ಹೇಳಿದ್ದೆ. ಆದರೆ ಸೀಸನ್‌ 7ಗೂ ಮೊದಲು ಪರಮ್‌ ಮನೆಗೆ ಬಂದರು, ಬಿಗ್‌ ಬಾಸ್‌ ಬಗ್ಗೆ ಏನೊಂದೂ ಹೇಳದೇ ನಗುತ್ತಾ ಮಾತನಾಡಿಸಿ ಹೋದರು. ಮತ್ತೊಂದು ಭೇಟಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿದೆ. ಅಂಥಾ ಕುತೂಹಲ ಹುಟ್ಟಿಸುತ್ತೆ ಬಿಗ್‌ ಬಾಸ್‌. ಈ ಸೀಸನ್‌ ಬಗ್ಗೆಯೂ ಕುತೂಹಲ ಇದೆ. ರಾಜಕೀಯದವರು ಬೇರೆ ಇದ್ದಾರೆ ಅಂತ ಹೆದರಿಸ್ತಿದ್ದಾರೆ, ನೋಡೋಣ. ನಾನು ಎಲ್ಲಿ ಸ್ಪರ್ಧಿಗಳ ಬಗ್ಗೆ ಕೇಳ್ತೀನೋ ಅಂತ ಪರಮ್‌ ಕೈಗೆ ಸಿಗದ ಹಾಗೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ.

ಪ್ರೋಮೋ ಖುಷಿಕೊಟ್ಟಿತು

ಬಿಗ್‌ಬಾಸ್‌ನಲ್ಲಿ ಕ್ರಿಯೇಟಿವಿಟಿಗೆ ಕೊರತೆ ಇರಲ್ಲ. ಈ ಬಾರಿಯ ಪ್ರೊಮೊ ಇಷ್ಟವಾಯ್ತು. ಆರಂಭದ ಸೀಸನ್‌ ಪ್ರೋಮೋಗಳಲ್ಲಿ ಹೀರೋಯಿಸಂ ಜಾಸ್ತಿ ಇತ್ತು. ಇತ್ತೀಚೆಗೆ ಕಾಮನ್‌ಮ್ಯಾನ್‌ ಗುಣ ಹೆಚ್ಚಿದೆ. ಈ ಬಾರಿ ಪ್ರೋಮೋ ಕ್ರಿಯೇಟಿವ್‌ ಆಗಿತ್ತು. ನೋಡಿ ಖುಷಿಪಟ್ಟೆ.

ಸ್ಪರ್ಧಿಗಳು ಹೇಗಿರಬೇಕು?

ಕೇವಲ ಸೆಲೆಬ್ರಿಟಿಯಾಗಿದ್ದರೆ ಸಾಕಾಗಲ್ಲ. ಯುನಿಕ್‌ ಅನಿಸೋ ಸ್ಪೆಷಲ್‌ ವ್ಯಕ್ತಿತ್ವ ಇರಬೇಕು. ಮನೆಯಲ್ಲಿರುವ ಎಲ್ಲರೂ ಬೆಳಗ್ಗೆದ್ದು ನಗು ನಗುತ್ತಾ ಮಾತಾಡಿ, ವಿಧೇಯತೆಯಿಂದ ಟಾಸ್ಕ್‌ ಮುಗಿಸಿ, ದಿನದ ಕೊನೆಯವರೆಗೂ ಸಿಕ್ಕಾಪಟ್ಟೆಒಳ್ಳೆಯವರಾಗಿದ್ದರೆ ಶೋವನ್ನು ಯಾರು ನೋಡ್ತಾರೆ, ಅಲ್ಲೊಂದು ವೈವಿಧ್ಯತೆ ಇದ್ದರೆ ಮಾತ್ರ ಜನ ನೋಡುತ್ತಾರೆ.

ನನಗೂ ಸಿಟ್ಟು ಬರುತ್ತೆ

ಕೆಲವೊಮ್ಮೆ ಶೋನಲ್ಲಿ ಸ್ಪರ್ಧಿಗಳ ಜೊತೆಗೆ ಮಾತಾಡುವಾಗ ಸಿಟ್ಟು ಬರುತ್ತೆ. ಆಗ ಟೇಕ್‌ ಎ ಬ್ರೇಕ್‌ ಅಂದು ಕ್ಯಾಮರಾ ಆಫ್‌ ಆದ್ಮೇಲೆ ಸಿಟ್ಟು ತೋರಿಸುತ್ತೇನೆ. ಆದರೆ ಇಷ್ಟೂಸೀಸನ್‌ಗಳಲ್ಲಿ ಕ್ಯಾಮರ ಮುಂದೆಯೇ ಸಿಟ್ಟು ನಿಯಂತ್ರಿಸಲಾಗದ್ದು ವೆಂಕಟ್‌ ಕೈ ಎತ್ತಿದ ಪ್ರಸಂಗದಲ್ಲಿ ಮಾತ್ರ.

ಬಿಗ್‌ ಬಾಸ್‌ ಮನೆ ಹೀಗಿರುತ್ತೆ

ಬಿಗ್‌ಬಾಸ್‌ ಮನೆಯನ್ನು ಬಹಳ ಪ್ಲಾನ್‌್ಡ ಆಗಿ ಮನಃಶಾಸ್ತ್ರೀಯವಾಗಿ ಅಧ್ಯಯನ ಮಾಡಿ ನಿರ್ಮಿಸಲಾಗಿದೆ. ಇಲ್ಲಿರುವ ಬಣ್ಣ, ವಸ್ತುಗಳು, ಮನೆಯ ಶೇಪ್‌, ವಿನ್ಯಾಸ ಎಲ್ಲದಕ್ಕೂ ಅರ್ಥ ಇದೆ. ಸಣ್ಣ ಪಿನ್‌ ಬಿದ್ದರೂ ಕೇಳುವಷ್ಟುನಿಶ್ಶಬ್ದ ಇರುತ್ತೆ. ಒಬ್ಬೊಬ್ಬರ ಮೇಲೂ ಕ್ಯಾಮರಾ ಫೋಕಸ್‌ ಆಗುತ್ತಿರುತ್ತೆ. ಆ ಮನೆಯ ಅನುಭವವನ್ನು ಅಲ್ಲಿಗೆ ಹೋಗಿಯೇ ಸವಿಯಬೇಕು.

ಸುದೀಪ್‌ ಸಂಭಾವನೆ ಎಷ್ಟು?

ಬಿಗ್‌ಬಾಸ್‌ ಹೋಸ್ಟ್‌ಗೆ ಸುದೀಪ್‌ ಸಂಭಾವನೆ ಎಷ್ಟುಅನ್ನೋದು ಬಹಳಷ್ಟುಜನರ ಕುತೂಹಲ. ಕೊರೋನಾದಿಂದ ಅವರ ಸಂಭಾವನೆ ಮೇಲೇನಾದ್ರೂ ಪರಿಣಾಮ ಆಗಿದೆಯಾ ಅನ್ನೋ ಪ್ರಶ್ನೆಯೂ ಇದೆ. ಆದರೆ ತಮ್ಮ ಸಂಭಾವನೆ ವಿಚಾರವನ್ನು ಸುದೀಪ್‌ ಬಾಯಿ ಬಿಡಲಿಲ್ಲ. ಈ ವೇಳೆ ಮಾತನಾಡಿದ ಪರಮೇಶ್ವರ ಗುಂಡ್ಕಲ್‌, ‘ಅವತ್ತು ಹೊಟೇಲ್‌ನಲ್ಲಿ ಸುದೀಪ್‌ ಮಗಳಿಗಾಗಿ ಕಾಯುತ್ತಿದ್ದರು. ಮಗಳು ಬರಲು 3 ನಿಮಿಷವಷ್ಟೇ ಬಾಕಿಯಿತ್ತು. ಆಗ ಸುದೀಪ್‌ ಅಲ್ಲೇ ಇದ್ದ ಟಿಶ್ಯೂ ಮೇಲೆ ಒಂದು ಮೊತ್ತ ಬರೆದರು. ಅದು ನಮಗೂ ಅವರಿಗೂ ಗ್ರೇಟ್‌ ಅನಿಸುವ ಐದು ಸೀಸನ್‌ಗಳ ಮೊತ್ತವದು. ಅದೇ ಫೈನಲ್‌ ಆಯ್ತು’ ಅಂದರು. ಬಹುಶಃ ಅದು ಸೀಸನ್‌ 7 ವೇಳೆಗೆ ನಡೆದ ಮಾತುಕತೆ. ಅಂದರೆ ಇನ್ನು ಸೀಸನ್‌ 11 ತನಕ ಸುದೀಪ್‌ ಬಿಗ್‌ಬಾಸ್‌ನಲ್ಲಿರುವುದು ಖಾತ್ರಿ.

Source: Suvarna News