ಯೋಗದ ಮೂಲ ಭಾರತ ಅಲ್ಲ..ಅದನ್ನು ವಿಶ್ವಕ್ಕೆ ಪರಿಚಯಿಸಿದ್ದಷ್ಟೇ ಪ್ರಧಾನಿ ಮೋದಿ’-ಮತ್ತೊಂದು ವಿವಾದ ಹುಟ್ಟಿಸಿದ ನೇಪಾಳ ಪ್ರಧಾನಿ

Jun 22, 2021

ಕಳೆದ ವರ್ಷ ಶ್ರೀರಾಮನ ವಿಚಾರಕ್ಕೆ ಓಲಿ ಭಾರತೀಯರಿಂದ ಟೀಕೆಗೆ ಗುರಿಯಾಗಿದ್ದರು. ಶ್ರೀರಾಮ ಹುಟ್ಟಿದ್ದು ಭಾರತದ ಅಯೋಧ್ಯೆಯಲ್ಲಿ ಅಲ್ಲ. ನೇಪಾಳದ ಅಯೋಧ್ಯಾಪುರಿಯಲ್ಲಿ ಎಂದು ಹೇಳಿದ್ದರು.

ಕಟ್ಮಂಡು: ಪ್ರಭು ಶ್ರೀರಾಮ ಭಾರತದಲ್ಲಿ ಹುಟ್ಟಿದ್ದಲ್ಲ.. ಅವನು ನೇಪಾಳದವನು ಎಂದು ಹೇಳಿ ಕಳೆದ ವರ್ಷ ವಿವಾದ ಸೃಷ್ಟಿಸಿದ್ದ ನೇಪಾಳ ಪ್ರಧಾನಮಂತ್ರಿ ಕೆಪಿ ಶರ್ಮಾ ಓಲಿ ಇದೀಗ ಯೋಗದ ಮೂಲ ಭಾರತವಲ್ಲ, ನೇಪಾಳ ಎಂದು ಹೇಳಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ನಿನ್ನೆ (ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ನಡೆದಿದೆ. ನೇಪಾಳದಲ್ಲೂ ಸಹ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಕೆಪಿ ಶರ್ಮಾ ಓಲಿ, ಯೋಗದ ಮೂಲ ಭಾರತವಲ್ಲ. ಭಾರತ ಒಂದು ದೇಶವಾಗಿ ಅಸ್ತಿತ್ವಕ್ಕೆ ಬರುವ ಮೊದಲೇ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿತ್ತು. ನೇಪಾಳದಲ್ಲಿ ಯೋಗಾಭ್ಯಾಸ ಶುರುವಾದಾಗ ಹಲವು ಅಪ್ರಧಾನ ರಾಜ್ಯಗಳಿದ್ದವೇ ಹೊರತು ಭಾರತ ಎಂಬ ದೇಶ ಇನ್ನೂ ಇರಲಿಲ್ಲ. ಹಾಗಾಗಿ ಯೋಗದ ಮೂಲ ಭಾರತವಾಗಲು ಸಾಧ್ಯವಿಲ್ಲ. ನೇಪಾಳ ಮತ್ತು ಉತ್ತಾರಖಂಡದ ಹಲವು ಭಾಗಗಳಲ್ಲಿ ಮೊದಲು ಯೋಗ ಪ್ರಾರಂಭವಾಗಿದೆ ಎಂದು ಓಲಿ ಹೇಳಿದ್ದಾರೆ.

ನಮ್ಮಲ್ಲಿ ಯೋಗವನ್ನು ಕಂಡು ಹಿಡಿದ ಋಷಿ ಮುನಿಗಳಿಗೆ ನಾವ್ಯಾವತ್ತೂ ಸರಿಯಾಗಿ ಮನ್ನಣೆ ನೀಡಲಿಲ್ಲ. ನಾವು ಕೇವಲ ಈಗ ಯೋಗವನ್ನು ಕಲಿಸುವ ಪ್ರಾಧ್ಯಾಪಕರು ಮತ್ತು ಅವರ ಕೊಡುಗೆಗಳ ಬಗ್ಗೆಯಷ್ಟೇ ಮಾತನಾಡುತ್ತೇವೆ. ನಮಗೆ ಯೋಗದ ಕುರಿತಾದ ನಮ್ಮ ಹಕ್ಕನ್ನು ಇಂದಿಗೂ ಸರಿಯಾಗಿ ಪ್ರತಿಪಾದಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ನಾವು ಯೋಗವನ್ನು ಜಗತ್ತಿಗೆ ಪರಿಚಯಿಸಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭಿಸುವ ಮೂಲಕ ಯೋಗವನ್ನು ವಿಶ್ವಕ್ಕೇ ಪರಿಚಯಿಸಿದರು ಎಂದು ಓಲಿ ಹೇಳಿದ್ದಾರೆ.

ಕಳೆದ ವರ್ಷ ಶ್ರೀರಾಮನ ವಿಚಾರಕ್ಕೆ ಓಲಿ ಭಾರತೀಯರಿಂದ ಟೀಕೆಗೆ ಗುರಿಯಾಗಿದ್ದರು. ಶ್ರೀರಾಮ ಹುಟ್ಟಿದ್ದು ಭಾರತದ ಅಯೋಧ್ಯೆಯಲ್ಲಿ ಅಲ್ಲ. ನೇಪಾಳದ ಅಯೋಧ್ಯಾಪುರಿಯಲ್ಲಿ ಎಂದು ಹೇಳಿದ್ದರು. ಹಾಗೇ, ವಿಶ್ವಾಮಿತ್ರ ಸೇರಿ ಅದೆಷ್ಟೋ ಋಷಿಮುನಿಗಳು ಜನಿಸಿದ್ದೂ ನೇಪಾಳದಲ್ಲೇ ಎಂದು ಪ್ರತಿಪಾದಿಸಿದ್ದಾರೆ. ಆ ಜಾಗದಲ್ಲಿ ಶ್ರೀರಾಮ, ಸೀತಾ ಮತ್ತು ಲಕ್ಷ್ಮಣ ದೇವಸ್ಥಾನ ಕಟ್ಟಲು ಆದೇಶವನ್ನೂ ಹೊರಡಿಸಿದ್ದಾರೆ.

Source: Tv9Kannada