ಮೈಸೂರಿನಲ್ಲಿ ಸಿಕ್ಸ್​​ ಸ್ಕ್ರೀನ್ ಮಲ್ಟಿಪ್ಲೆಕ್ಸ್ ಆರಂಭಿಸಲಿದೆ ಪಿವಿಆರ್ ಸಿನಿಮಾಸ್

Mar 5, 2021

ಪಿವಿಆರ್ ಸಿನಿಮಾಸ್​​ನಿಂದ ಕರ್ನಾಟಕದ ಮೈಸೂರಿನಲ್ಲಿ ಆರು ಸ್ಕ್ರೀನ್ ಮಲ್ಟಿಪ್ಲೆಕ್ಸ್ ಆರಂಭಿಸಲಾಗುವುದು ಎಂದು ಶುಕ್ರವಾರ ಘೋಷಣೆ ಮಾಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಕರ್ನಾಟಕದ ಮೈಸೂರಿನಲ್ಲಿ ಆರು- ತೆರೆಯ ಹೊಸ ಮಲ್ಟಿಪ್ಲೆಕ್ಸ್ ಆರಂಭ ಮಾಡುವುದಾಗಿ ಶುಕ್ರವಾರ ಪಿವಿಆರ್ ಘೋಷಣೆ ಮಾಡಿದೆ. “ಈ ಮೂಲಕವಾಗಿ 109 ತೆರೆ, 16 ಆಸ್ತಿಗಳನ್ನು ಹೊಂದಿದಂತಾಗುತ್ತದೆ. ಪಿವಿಆರ್ ಸಿನಿಮಾಸ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತದೆ. ಮತ್ತು ದಕ್ಷಿಣದಲ್ಲಿ 47 ಸ್ಥಳಗಳಲ್ಲಿ 292 ತೆರೆಗಳನ್ನು ಹೊಂದಿದೆ. ಮೈಸೂರಿನಲ್ಲಿ 32,240 ಚದರಡಿ ವ್ಯಾಪ್ತಿಯಲ್ಲಿ ಪಿವಿಆರ್ ಸಿನಿಮಾಸ್ ತಲೆ ಎತ್ತಲಿದೆ. ಇದರಲ್ಲಿ 1078 ವೀಕ್ಷಕರಿಗೆ ಸ್ಥಳಾವಕಾಶ ಇರಲಿದೆ,” ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂಬುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಿವಿಆರ್ ಕಂಪನಿ ಹೇಳಿಕೆಯ ಪ್ರಕಾರ, ಮೈಸೂರಿನಲ್ಲಿ ಸ್ಥಾಪಿಸುವ ಮಲ್ಟಿಪ್ಲೆಕ್ಸ್ ನಲ್ಲಿ ಆಧುನಿಕ ಸಿನಿಮಾ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ಸಿನಿಮಾಗೆ ಹೋಗುವವರಿಗೆ ಅದ್ಭುತ ಅನುಭೂತಿ ಒದಗಿಸಲಾಗುತ್ತದೆ. ಸ್ವಚ್ಛ, ಸುರಕ್ಷಿತ ಮತ್ತು ಒಟ್ಟಾರೆ ಸಿನಿಮಾ ವೀಕ್ಷಣೆ ಅನುಭವವನ್ನು ಕಟ್ಟಿಕೊಡುವಂತೆ ಇದನ್ನು ರೂಪಿಸಲಾಗಿದೆ. ಈ ಹೊಸ ಮಲ್ಟಿಪ್ಲೆಕ್ಸ್ ಹೊಸ ತಲೆಮಾರಿನ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕವಾಗಿ ಸುಂದರ ರೂಪದಲ್ಲಿ ತಲೆ ಎತ್ತಲಿದೆ ಎನ್ನಲಾಗಿದೆ.

ಪಿವಿಆರ್ ಲಿಮಿಟೆಡ್ ಜಂಟಿ ಕಾರ್ಯನಿರ್ವಹಣಾ ನಿರ್ದೇಶಕ ಸಂಜೀವ್ ಕುಮಾರ್ ಬಿಜಿಲಿ ಮಾತನಾಡಿ, ದಕ್ಷಿಣವು ನಮ್ಮ ಪಾಲಿಗೆ ಬಹಳ ಮುಖ್ಯವಾದ ಮಾರುಕಟ್ಟೆ. ದೊಡ್ಡ ಪ್ರಮಾಣದಲ್ಲಿ ತೆರೆಯನ್ನು ಹೊಂದಿದ್ದು, ವೀಕ್ಷಕರಲ್ಲಿ ಸಿನಿಮಾ ನೋಡುವ ಪ್ರೀತಿ ಉತ್ಕಟವಾಗಿದೆ. ಆದ್ದರಿಂದ ಈ ಭಾಗದಲ್ಲಿ ವಿಸ್ತರಣೆ ಮಾಡುತ್ತಿದ್ದೇವೆ. ಕಂಪನಿಯ ವಿಸ್ತರಣೆ ಯೋಜನೆಯ ಭಾಗವಾಗಿ ಮೈಸೂರಿನಲ್ಲಿ ಅತಿ ದೊಡ್ಡ ಮಲ್ಟಿಪ್ಲೆಕ್ಸ್ ಪರಿಚಯಿಸುತ್ತಿದ್ದೇವೆ. ಮನರಂಜನೆಯಲ್ಲಿ ಅತ್ಯುತ್ತಮವಾದದ್ದನ್ನು ಒದಗಿಸುತ್ತಿದ್ದು, ನಮ್ಮ ಪ್ರೇಕ್ಷಕರಿಗೆ ವಿಸ್ತೃತ ಅನುಭವ ಮಾಡಿಕೊಡುತ್ತಿದ್ದೇವೆ ಎಂದಿದ್ದಾರೆ. ಈ ಆರಂಭದೊಂದಿಗೆ ಭಾರತ ಮತ್ತು ಶ್ರೀಲಂಕಾ ಸೇರಿ ಪಿವಿಆರ್​ನಿಂದ 71 ನಗರಗಳಲ್ಲಿ 177 ಸ್ಥಳಗಳಲ್ಲಿ 844 ತೆರೆಗಳನ್ನು ನಡೆಸಿದಂತಾಗುತ್ತದೆ.

ಕೋವಿಡ್- 19 ಬಿಕ್ಕಟ್ಟಿನಿಂದ ಅತಿ ದೊಡ್ಡ ಪೆಟ್ಟು ಬಿದ್ದಿದ್ದರಲ್ಲಿ ಮಲ್ಟಿಪ್ಲೆಕ್ಸ್​ಗಳೂ ಒಂದು. ಕೋವಿಡ್-19 ಸುರಕ್ಷಾ ಕ್ರಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಫೆಬ್ರವರಿ 1, 2021ರಿಂದ ಸರ್ಕಾರ ದೇಶಾದ್ಯಂತ ಅನುವು ಮಾಡಿಕೊಟ್ಟಿದೆ.

Source: TV9Kannada