ಮೂರನೇ ಡೋಸ್​ ಕೊರೊನಾ ಲಸಿಕೆ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದ ಸಿಡಿಸಿ; ಆದ್ಯತೆ ಮೇರೆಗೆ ವಿತರಿಸಲು ಸೂಚನೆ

Aug 14, 2021

ಅಮೆರಿಕಾದಲ್ಲಿ ತಜ್ಞರ ಸ್ವತಂತ್ರ ಸಮಿತಿಯೊಂದು ಕೊರೊನಾ ಲಸಿಕೆಗಳ (Corona Vaccine) ಕುರಿತಾಗಿ ಅಧ್ಯಯನ ನಡೆಸಿದ್ದು, ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಅಂಡ್ ಪ್ರಿವೆನ್ಷನ್​ (ಸಿಡಿಸಿ – CDC) ಸಂಸ್ಥೆಗೆ ಮಹತ್ತರ ಸಲಹೆಯೊಂದನ್ನು ನೀಡಿದೆ. ಆ ಸಮಿತಿ ನೀಡಿದ ವರದಿ ಪ್ರಕಾರವಾಗಿ ಈಗಾಗಲೇ ಎರಡು ಡೋಸ್​ ಕೊರೊನಾ ಲಸಿಕೆ (Corona Vaccine 2nd Dose) ಪಡೆದಿರುವ ಕೆಲವರಿಗೆ ಮೂರನೇ ಡೋಸ್​ ಲಸಿಕೆ (Corona Vaccine 3rd Dose) ನೀಡುವ ಬಗ್ಗೆ ಯೋಚಿಸಬೇಕು ಎನ್ನಲಾಗಿದ್ದು, ರೋಗ ನಿರೋಧಕ ಶಕ್ತಿಯ ಕೊರತೆ ಎದುರಿಸುತ್ತಿರುವವರನ್ನು ಆದ್ಯತೆಯ ಮೇರೆಗೆ ಹುಡುಕಿ ಮೂರನೇ ಡೋಸ್​ ನೀಡುವುದು ಸೂಕ್ತ ಎಂದು ತಿಳಿಸಿದೆ. ಆ ಮೂಲಕ ಆಹಾರ ಮತ್ತು ಔಷಧ ನಿಯಂತ್ರಣಾ ಸಮಿತಿ (ಎಫ್​ಡಿಎ – FDA) ನಿಲುವಿಗೆ ಸಿಡಿಸಿ ಕೂಡಾ ಬೆಂಬಲ ಸೂಚಿಸಿದೆ.

ಗುರುವಾರದಂದು ಮೂರನೇ ಡೋಸ್ ಕೊರೊನಾ ಲಸಿಕೆ ಬಗ್ಗೆ ಸಲಹೆ ನೀಡಿದ್ದ ಸಿಡಿಸಿ, ಅಂಗಾಂಗ ಮರುಜೋಡಣೆಗೆ ಒಳಪಟ್ಟವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕೊರತೆ ಉಳ್ಳವರಿಗೆ ಹೆಚ್ಚುವರಿಯಾಗಿ ಇನ್ನೊಂದು ಡೋಸ್ ಕೊರೊನಾ ಲಸಿಕೆ ಕೊಡಬೇಕು. ಅವರಿಗೆ ಕೊರೊನಾ ಹೆಚ್ಚು ಅಪಾಯಕಾರಿಯಾಗಿರುತ್ತದೆ ಎಂದು ತಿಳಿಸಿತ್ತು.

ಅದಾದ ನಂತರ ಶುಕ್ರವಾರ ಸಭೆ ನಡೆಸಿದ ಸಿಡಿಸಿ ತಜ್ಞ ವೈದ್ಯರು ಹಾಗೂ ಹಿರಿಯ ವಿಜ್ಞಾನಿಗಳಿಂದ ಅಭಿಪ್ರಾಯ ಸಂಗ್ರಹಿಸಿದಾಗ ಮೂರನೇ ಡೋಸ್ ಕೊರೊನಾ ಲಸಿಕೆ ನೀಡುವುದಕ್ಕೆ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಫೈಜರ್​-ಬಯೋಎನ್​ಟೆಕ್ ಹಾಗೂ ಮಾಡೆರ್ನಾ ಲಸಿಕೆಗಳ ಎರಡು ಡೋಸ್​ ಈಗಾಗಲೇ ಪಡೆದವರನ್ನು ಗುರುತಿಸಿ ಮೂರನೇ ಡೋಸ್ ನೀಡಲಾರಂಭಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಇದೇ ವೇಳೆ ವ್ಯಕ್ತವಾಗಿದೆ.

ಈ ನಿರ್ಧಾರವು ಜನರ ಆರೋಗ್ಯದ ದೃಷ್ಟಿಯಿಂದ ಅತಿ ಮಹತ್ವದ್ದಾಗಿದ್ದು, ಎರಡು ಡೋಸ್​ ಲಸಿಕೆ ಪಡೆದ ನಂತರವೂ ಅಪಾಯದ ಹೊಸ್ತಿಲಲ್ಲೇ ನಿಂತಿರುವವರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮೂರನೇ ಡೋಸ್​ನಿಂದಾಗಿ ಮತ್ತಷ್ಟು ಹೆಚ್ಚಿನ ಸುರಕ್ಷತೆ ಲಭಿಸುವುದರಲ್ಲಿ ಅನುಮಾನವಿಲ್ಲ ಎಂದು ಸಿಡಿಸಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಹಿರಿಯ ತಜ್ಞರು ತಿಳಿಸಿದ್ದಾರೆ.

ಈಗಾಗಲೇ ಅಮೆರಿಕಾದಲ್ಲಿ ಸುಮಾರು ಶೇಕಡಾ 3ರಷ್ಟು ಮಂದಿಗೆ ವಿವಿಧ ಕಾರಣಗಳಿಂದಾಗಿ ರೋಗ ನಿರೋಧಕ ಶಕ್ತಿ ಸಂಪೂರ್ಣ ಕುಂಠಿತವಾಗಿದೆ. ಇದೀಗ ಮೂರನೇ ಡೋಸ್​ ಪಡೆಯಲು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮುಂದೆ ಬರಬೇಕು. ಎರಡನೇ ಡೋಸ್​ ಪಡೆದ ಕನಿಷ್ಠ 28ದಿನಗಳ ನಂತರ ಮೂರನೇ ಡೋಸ್​ ಪಡೆಯುವುದಕ್ಕೆ ಅವರು ಅರ್ಹರಾಗಿರುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

Source: tv9 kannada