ಮಾಫಿಯಾಗಳಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಾಣ; ಸಿಎಂ ಯೋಗಿ ಘೋಷಣೆ
ಲಖನೌ: ಮಾಫಿಯಾ(Mafia)ಗಳಿಂದ ವಶಪಡಿಸಿಕೊಳ್ಳಲಾದ ಭೂಮಿಗಳಲ್ಲಿ, ರಾಜ್ಯದ ಬಡವರು, ದಲಿತರಿಗೆ ಮನೆಗಳನ್ನು, ಸರ್ಕಾರದ ವತಿಯಿಂದಲೇ ಕಟ್ಟಿಸಿಕೊಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ (Uttar Pradesh Chief Minister) ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ ಇಂಥದ್ದೊಂದು ಬಹುಮುಖ್ಯವಾದ ಘೋಷಣೆ ಪ್ರಕಟಿಸಿದ್ದಾರೆ.
ಭೂ ಮಾಫಿಯಾಗಳ ನಿಯಂತ್ರಣದಲ್ಲಿದ್ದ ಭೂಮಿಯನ್ನು ಉತ್ತರ ಪ್ರದೇಶ ಸರ್ಕಾರ ವಶಪಡಿಸಿಕೊಂಡ ಬಗ್ಗೆ ಈ ವರ್ಷದ ಫೆಬ್ರವರಿಯಲ್ಲಿ ಯೋಗಿ ಆದಿತ್ಯನಾಥ್, ವಿಧಾನಪರಿಷತ್ನಲ್ಲಿ ವಿವರಣೆ ನೀಡಿದ್ದರು. ನಮ್ಮ ಬಿಜೆಪಿ ಸರ್ಕಾರ 2017ರಲ್ಲಿ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಕಂದಾಯ ಇಲಾಖೆ ಸುಮಾರು 67,000 ಎಕರೆ ಭೂಮಿಯನ್ನು ಮಾಫಿಯಾ ಒಡೆತನದಿಂದ ಮುಕ್ತಗೊಳಿಸಿದೆ. ಹೀಗೆ ವಶಪಡಿಸಿಕೊಳ್ಳಲಾದ ಜಾಗದಲ್ಲಿ ಒಂದು ಕ್ರೀಡಾ ಮೈದಾನ ನಿರ್ಮಾಣ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದರು. ಅಂದು ಎಂಎಲ್ಸಿ ಸುರೇಶ್ ಕುಮಾರ್ ತ್ರಿಪಾಠಿಯವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಯೋಗಿ ಆದಿತ್ಯನಾಥ್, ಈ ಹಿಂದೆ ಅಧಿಕಾರದಲ್ಲಿದ್ದವರ ಸಹಾಯದಿಂದ ರಾಜ್ಯದಲ್ಲಿ ಅದೆಷ್ಟೋ ಎಕರೆಗಳಷ್ಟು ಸಾರ್ವಜನಿಕ ಮತ್ತು ಖಾಸಗಿ ಭೂಮಿಗಳನ್ನು ಮಾಫಿಯಾಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದವು. ಆ ಭೂಮಿಯನ್ನು ಮರಳಿ ಪಡೆಯಲೆಂದೇ ನಮ್ಮ ಸರ್ಕಾರ ಆ್ಯಂಟಿ ಭೂ ಮಾಫಿಯಾ ಟಾಸ್ಕ್ ಫೋರ್ಸ್ ರಚನೆ ಮಾಡಿತ್ತು. ಈ ಟಾಸ್ಕ್ ಫೋರ್ಸ್ ತನ್ನ ಕೆಲಸದಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದರು.
ತಾಲಿಬಾನ್ ಬಗ್ಗೆ ಪ್ರತಿಕ್ರಿಯೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕೃತ್ಯದ ಬಗ್ಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ನಮ್ಮ ದೇಶದ ಕೆಲವು ಪ್ರತಿಪಕ್ಷಗಳ ಮುಖಂಡು ನಾಚಿಕೆಯನ್ನು ಬಿಟ್ಟು, ತಾಲಿಬಾನ್ ಉಗ್ರರನ್ನು ಬೆಂಬಲಿಸುತ್ತಿದ್ದಾರೆ. ಅದೇ ಬಾಯಲ್ಲಿ, ಮಹಿಳೆಯರ ಹಕ್ಕು, ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಇಂಥ ವ್ಯತಿರಿಕ್ತವಾಗಿ ಮಾತನಾಡುವವರ ಮನಸ್ಥಿತಿ ಈಗ ಹೊರಬರುತ್ತಿದೆ ಎಂದು ಹೇಳಿದರು.
Source: tv9 Kannada