ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ
Indian Women Hockey Team: ಭಾರತದ ಮಹಿಳೆಯರ ಹಾಕಿ ತಂಡವು ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ.
ಟೊಕಿಯೊ ಒಲಂಪಿಕ್ಸ್: ಭಾರತದ ವನಿತೆಯರ ಹಾಕಿ ತಂಡವು ನಿರ್ಣಾಯಕವಾಗಿದ್ದ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ. ಇಂದು (ಶುಕ್ರವಾರ) ‘ಓಯ್ ಹಾಕಿ ಕ್ರೀಡಾಂಗಣದ ಉತ್ತರ ಪಿಚ್’ನಲ್ಲಿ ನಡೆದ ಪಂದ್ಯದಲ್ಲಿ ರಾಣಿ-ರಾಮ್ಪಾಲ್ ನೇತೃತ್ವದ ಮಹಿಳೆಯರ ತಂಡ 1-0 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿತು. ಈ ಮೊದಲು ಗ್ರೂಪ್ ಹಂತದದ ಮೊದಲ ಮೂರು ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಈಗ ಗೆಲುವಿನ ಹಾದಿಗೆ ಮರಳಿದೆ.
ಪಂದ್ಯದ ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನಡೆಸಿದ ಎರಡೂ ತಂಡಗಳು ಹಲವು ಬಾರಿ ಪ್ರಯತ್ನ ಪಟ್ಟರೂ ಗೋಲು ದಾಖಲಿಸಲು ಸಾಧ್ಯವಾಗಿರಲಿಲ್ಲ. ದ್ವಿತೀಯಾರ್ಧದಲ್ಲೂ ಮೂರನೇ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ನಾಲ್ಕನೇ ಅವಧಿಯಲ್ಲಿ ಭಾರತದ ತಂಡವು ಒತ್ತಡವನ್ನು ಹಿಮ್ಮೆಟ್ಟಿ ಆಟದ ಮುಕ್ತಾಯಕ್ಕೆ ಕೊನೆಯ ಮೂರು ನಿಮಿಷಗಳಿರುವಾಗ ಗೋಲು ದಾಖಲಿಸಿತು. ಕೊನೆಯಲ್ಲಿ ಭಾರತದ ಗೆಲುವಿನ ನಗುವಿಗೆ ಕಾರಣವಾಗಿದ್ದು ನವನೀತ್ ಕೌರ್ ದಾಖಲಿಸಿದ ಗೋಲು. ಅದಕ್ಕೆ ಪ್ರತಿಯಾಗಿ ಐರ್ಲೆಂಡ್ ವನಿತೆಯರು ಬಹಳ ಪ್ರಯತ್ನಪಟ್ಟರೂ ಗೋಲು ದಾಖಲಾಗಲಿಲ್ಲ. ಕೊನೆಯಲ್ಲಿ ಭಾರತವೇ ವಿಜಯದ ನಗೆ ಬೀರಿತು.
ಭಾರತದ ಅಧಿಕೃತ ಕ್ರೀಡಾ ಖಾತೆ ಎಸ್ಎಐಎಮ್ ಹಂಚಿಕೊಂಡ ಟ್ವೀಟ್:
Our women hockey team is live in action.
Stay tuned for updates. #Cheer4India pic.twitter.com/RoG6xeLrWZ— SAIMedia (@Media_SAI) July 30, 2021
ಇತ್ತ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಪದಕವೊಂದು ಖಚಿತವಾಗಿದೆ. ಅಸ್ಸಾಂ ಮೂಲದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದು, ಮೇರಿ ಕೋಮ್, ವಿಜೇಂದರ್ ಸಿಂಗ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಭಾರತದ ಭರವಸೆಯ ಷಟ್ಲರ್ ಪಿ.ವಿ.ಸಿಂಧು ಅವರು ಇಂದು ಕ್ವಾರ್ಟರ್ ಫೈನಲ್ನಲ್ಲಿ ಸೆಣಸಲಿದ್ದಾರೆ.
Source: Tv9 kannada