ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ (Mangaluru) ಚಾಕ್ಲೇಟ್‍ನಲ್ಲಿ ಡ್ರಗ್ಸ್ ಇದೆ ಎಂಬ ಸುದ್ದಿ ತಲ್ಲಣ ಸೃಷ್ಟಿಸಿತ್ತು. ಅಂತಹ ಚಾಕ್ಲೇಟ್ ನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಚಾಕ್ಲೆಟ್‍ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ರು. ಇದೀಗ ಎಫ್‍ಎಸ್‍ಎಲ್ (FSL) ವರದಿಯಲ್ಲಿ ಚಾಕ್ಲೆಟ್‍ನಲ್ಲಿ ಡ್ರಗ್ಸ್ ಇರೋದು ಬೆಳಕಿಗೆ ಬಂದಿದೆ. ಈ ವಿಚಾರದಿಂದ ಮಂಗಳೂರಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಎಸ್ ಆವತ್ತು ಈ ಸುದ್ದಿ ಕೇಳಿ ಮಂಗಳೂರಿನ ಜನ ದಂಗಾಗಿದ್ರು. ಮಕ್ಕಳು ತಿನ್ನೋ ಚಾಕ್ಲೇಟ್‍ನಲ್ಲಿ ಡ್ರಗ್ಸ್ ಇದೆ ಅನ್ನೋ ವಿಚಾರ ಎಲ್ಲರನ್ನ ತಲ್ಲಣಗೊಳಿಸಿತ್ತು. ಕಳೆದ ಜುಲೈ 19 ರಂದು ಮಂಗಳೂರಿನ ಎರಡು ಅಂಗಡಿಗಳಲ್ಲಿ ಬಾಂಗ್ ಚಾಕ್ಲೇಟ್‍ಗಳು ಪತ್ತೆಯಾಗಿತ್ತು. ಈ ಚಾಕ್ಲೇಟ್ (Chocklates) ಮಾದರಿಯನ್ನ ವಶಕ್ಕೆ ಪಡೆದಿದ್ದ ಮಂಗಳೂರು ನಗರ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ರು. ಇದೀಗ ಎಫ್‍ಎಸ್‍ಎಲ್ ವರದಿ ಬಂದಿದ್ದು, ಬಾಂಗ್ ಚಾಕ್ಲೇಟ್‍ನಲ್ಲಿ ಗಾಂಜಾ ಅಂಶವಿರೋದು ದೃಢಪಟ್ಟಿದೆ.
ಮಾದಕ ಚಾಕ್ಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ಪೈಕಿ ಓರ್ವ ಮಂಗಳೂರಿನ ಕಾರ್ ಸ್ಟ್ರೀಟ್ ಬಳಿಯ ವೈಭವ್ ಪೂಜಾ ಸೇಲ್ಸ್ ಮಾಲಿಕ ಮನೋಹರ್ ಶೇಟ್ ಹಾಗೂ ಇನ್ನೋರ್ವ ನಗರದ ಫಳ್ನೀರ್ ಬಳಿಯ ಅಂಗಡಿ ಹೊಂದಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೋಂಕರ್. ಈ ಎರಡು ಅಂಗಡಿಗಳಲ್ಲಿ ಪತ್ತೆಯಾಗಿದ್ದ ಬಾಂಗ್ ಮಾದರಿಯ ಚಾಕ್ಲೇಟ್ ಮೌಲ್ಯ ಒಟ್ಟು 53,500 ರೂಪಾಯಿಗಳು. ಕಳೆದ ಬಾರಿ ಪ್ರಕರಣ ಬೆಳಕಿಗೆ ಬಂದಿದ್ದ ಸಂದರ್ಭ ಬಂಧಿತ ಮನೋಹರ್ ಶೇಟ್ ಉತ್ತರ ಪ್ರದೇಶದಿಂದ ಚಾಕ್ಲೇಟ್ ತರಿಸಿಕೊಳ್ಳುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. 30ವರ್ಷ ಮೇಲ್ಪಟ್ಟವರಿಗೆ ಮಾತ್ರ ಬಾಂಗ್ ಚಾಕ್ಲೇಟ್ ಮಾರಾಟ ಮಾಡುತ್ತೇವೆ ಎಂಬ ಸ್ಫೋಟಕ ವಿಚಾರವನ್ನ ಬಾಯಿಬಿಟ್ಟಿದ್ದ.
ಒಟ್ಟಿನಲ್ಲಿ ಪೊಲೀಸರ ಊಹೆಯಂತೆ ಬಾಂಗ್ ಚಾಕ್ಲೇಟ್‍ಗಳಲ್ಲಿ ಮಾದಕ ಅಂಶವಿರೋದು ಪಕ್ಕಾ ಆಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದಂತೆ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ನೇತೃತ್ವದ ಪೊಲೀಸ್ ಇಲಾಖೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದೆ. ಆದರೆ ಈವರೆಗಿನ ಮಾಹಿತಿ ಪ್ರಕಾರ ಬೇರೆ ಯಾವುದೇ ಅಂಗಡಿಗಳ್ಲಲೂ ಇಂತಹ ಚಾಕ್ಲೇಟ್‍ಗಳು ಪತ್ತೆಯಾಗಿಲ್ಲ. ಆದರೂ ಪೋಷಕರು ತಮ್ಮ ಮಕ್ಕಳಿಗೆ ಈ ವಿಚಾರಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.