ಮಂಗಳನ ಮೇಲೆ ಚೀನಾ ದೇವತೆಯ ಹೆಸರಲ್ಲಿ ನಗರ ನಿರ್ಮಾಣ; ಭೂಮಿ ಮೇಲಿನ ಸಿಟಿಯಂತೆ ಇರಲಿದೆ ಅಲ್ಲಿನ ಪಟ್ಟಣ, ಎಬಿಬೂ ಸಂಸ್ಥೆಯಿಂದ ವಿನ್ಯಾಸ ಬಿಡುಗಡೆ
ಸುಮಾರು 2,50,000 ಜನರು ವಾಸಿಸಲು ಯೋಗ್ಯವಾಗುವಂತೆ ನುವಾ ನಗರವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಪ್ರಧಾನ ಸಿಟಿಯಾಗಲಿದ್ದು, ಇದರೊಳಗೆ ಮತ್ತೆ 5 ಸಣ್ಣಸಣ್ಣ ನಗರಗಳ ನಿರ್ಮಾಣ ಮಾಡುವಂತೆ ಯೋಜನೆ ರೂಪಿಸಲಾಗಿದೆ.
ಮಂಗಳ ಗ್ರಹದ ಮೇಲೆ ಮನುಷ್ಯರ ಸಂಶೋಧನೆ ನಿರಂತರವಾಗಿ ನಡೆದುಕೊಂಡೇ ಬಂದಿದೆ. 2013ರ ನವೆಂಬರ್ನಲ್ಲಿ ಇಸ್ರೋ ಕೂಡ ಮಂಗಳ ಗ್ರಹದ ಅನ್ವೇಷಣೆಗಾಗಿ ಮಾರ್ಸ್ ಆರ್ಬಿಟರ್ ಮಿಷನ್ ಹೆಸರಿನಲ್ಲಿ ಮಂಗಳಯಾನವನ್ನು ನಡೆಸಿದೆ. ಇನ್ನು ಮಂಗಳನ ಮೇಲೆ ನೀರು, ಮಣ್ಣುಗಳು ಇವೆ ಎಂಬುದನ್ನು 2015ರಲ್ಲೇ ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ಘೋಷಣೆ ಮಾಡಿದೆ. ಆ ಗ್ರಹದಲ್ಲಿ ಜೀವಿಗಳು ಯೋಸಿಸಲು ಯೋಗ್ಯವಾಗ ವಾತಾವರಣ ಇದೆ ಎಂಬ ಒಂದು ಚಿಂತನೆ 2018ರಿಂದಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆಯುತ್ತಲೂ ಇವೆ.
ಇದೀಗ ಜಾಗತಿಕ ಮಟ್ಟದ, ಖ್ಯಾತ ವಾಸ್ತುವಿನ್ಯಾಸ ಸಂಸ್ಥೆಯಾದ ABIBOO ಸ್ಟುಡಿಯೋ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಂಪು ಗ್ರಹ (ಮಂಗಳ)ದ ಮೇಲೆ ಒಂದು ಸುಸ್ಥಿರ ನಗರ ನಿರ್ಮಾಣ ಮಾಡುವ ಯೋಜನೆಯನ್ನು ಈಗಾಗಲೇ ರೂಪಿಸುತ್ತಿದೆ. ABIBOO ಸ್ಟುಡಿಯೋ ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು, ಅಮೆರಿಕದಲ್ಲೇ ಎರಡು ಕಚೇರಿಗಳು ಇವೆ. ಈ ಸ್ಟುಡಿಯೋವೀಗ ಮಂಗಳನ ಮೇಲಿರುವ Tempe Mensaದಲ್ಲಿ ನಿರ್ಮಾಣ ಮಾಡಲಿರುವ ನುವಾ ಎಂಬ ಹೆಸರಿನ ನಗರದ ವಿನ್ಯಾಸದ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಸುಮಾರು 2,50,000 ಜನರು ವಾಸಿಸಲು ಯೋಗ್ಯವಾಗುವಂತೆ ನುವಾ ನಗರವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಪ್ರಧಾನ ಸಿಟಿಯಾಗಲಿದ್ದು, ಇದರೊಳಗೆ ಮತ್ತೆ 5 ಸಣ್ಣಸಣ್ಣ ನಗರಗಳ ನಿರ್ಮಾಣ ಮಾಡುವಂತೆ ಯೋಜನೆ ರೂಪಿಸಲಾಗಿದೆ. ಇನ್ನು ಮಂಗಳದಲ್ಲಿ ನುವಾ ನಗರ ನಿರ್ಮಿಸಲ್ಪಟ್ಟರೆ ಅದು ಕೆಂಪು ಗ್ರಹದ ಮೊದಲ ಸಿಟಿಯಾಗಲಿದೆ. ವಿಶೇಷವೆಂದರೆ ಇದನ್ನು Tempe Mensaದ ಬಂಡೆಗಳ ಪ್ರದೇಶದಲ್ಲಿ ಸಮಾನಾಂತರ ವಿನ್ಯಾಸದ ಬದಲು, ಲಂಬವಾಗಿ ಕಟ್ಟಲಾಗುತ್ತಿದೆ. ಸಿಟಿಯನ್ನು ಲಂಬ ವಿನ್ಯಾಸದಲ್ಲಿ ಕಟ್ಟಲು ಮುಖ್ಯವಾದ ಕಾರಣ ಇದೆ. ಹೀಗೆ ಮಾಡುವುದರಿಂದ ವಾತಾವರಣದ ಒತ್ತಡ ಮತ್ತು ವಿಕಿರಣದ ಅಪಾಯವಿರುವುದಿಲ್ಲ. ಸಮಾನಾಂತರ ವಿನ್ಯಾಸದಲ್ಲಿ ಕಟ್ಟಿದರೆ ಅಲ್ಲಿ ಯಾವುದೇ ನೆರಳೂ ಇರುವುದಿಲ್ಲ. ಹೀಗಾದರೆ ಅಲ್ಲಿ ವಾಸ ಮಾಡುವ ಜನರು ವಿಕಿರಣದಿಂದ ಸಾಯಲೂ ಬಹುದು. ಈ ಅಪಾಯ ನಿವಾರಿಸಲು ಲಂಬವಾಗಿ ನಿರ್ಮಾಣವಾಗುತ್ತಿದೆ.
ಹೇಗಿರಲಿದೆ ನಗರ?
ಮಂಗಳನ ಮೇಲೆ ನಿರ್ಮಾಣವಾಗಲಿರುವ ನಗರ ಭೂಮಿಯ ಮೇಲಿನ ಪಟ್ಟಣಗಳಂತೆ ಇರಲಿದೆ ಎಂದು ವಿನ್ಯಾಸ ಸಂಸ್ಥೆ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಭೂಮಿಯ ಮೇಲಿನ ನಗರಗಳಂತೆ ಹಸಿರು ಉದ್ಯಾನಗಳು, ಮನೆಗಳು, ಕಚೇರಿಗಳು ಇರಲಿವೆ. ಮನುಷ್ಯ ವಾಸಕ್ಕೆ ಯೋಗ್ಯವಾಗಿಯೇ ಇರಲಿದೆ. ಮಂಗಳನ ಮೇಲೆ ನಗರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನಾವು ಅನೇಕ ಗಣಕೀಕೃತ ವಿಶ್ಲೇಷಣೆ ಮಾಡಿದ್ದೇವೆ. ಹಾಗೇ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ಯಾವ ರೀತಿಯ ಸಂದರ್ಭ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಹಲವು ವಿಜ್ಞಾನಿಗಳೊಂದಿಗೆ ಚರ್ಚಿಸಿದ್ದೇವೆ ಎಂದು ABIBOO ಸಂಸ್ಥಾಪಕ ಆಲ್ಫ್ರೆಡೋ ಮುನೊಜ್ ಯುರೋನ್ಯೂಸ್ಗೆ ತಿಳಿಸಿದ್ದಾರೆ.
ಸದ್ಯಕ್ಕೇನೂ ನಿರ್ಮಾಣ ಶುರುವಾಗೋದಿಲ್ಲ
ಮಂಗಳನ ಮೇಲೆ ನಗರ ನಿರ್ಮಾಣವಾದರೆ ನಾವೂ ಅಲ್ಲಿಗೆ ಹೋಗಿ ನೆಲೆಸಬಹುದು ಎಂದು ಕನಸು ಕಾಣುತ್ತಿದ್ದರೆ, ಸದ್ಯಕ್ಕೆ ಅಷ್ಟೊಂದೇನೂ ಆಸೆ ಬೇಡ. ಯಾಕೆಂದರೆ ಈ ನುವಾ ನಗರ ನಿರ್ಮಾಣವಾಲು ಪ್ರಾರಂಭವಾಗುವುದೇ 2054ನೇ ಇಸ್ವಿಯ ನಂತರ. 2100ನೇ ಇಸ್ವಿಯ ಒಳಗೆ ಪಟ್ಟಣ ನಿರ್ಮಾಣ ಸಾಧ್ಯವಿಲ್ಲ. ಅದರ ನಂತರವಷ್ಟೇ ಅಲ್ಲಿ ಹೋಗಿ ನೆಲೆಸಬಹುದಾಗಿದೆ.
ನಗರ ವಿನ್ಯಾಸದ ಫೋಟೋಗಳು
ಚೀನಾ ದೇವತೆಯ ಹೆಸರು
ನುವಾ ಎಂಬುದು ಚೀನಾದ ದೇವತೆಯ ಹೆಸರು. ಅಲ್ಲಿನ ಪುರಾಣ ಪ್ರಕಾರ ಈ ದೇವತೆ ಸಕಲರನ್ನೂ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಮಂಗಳನ ಮೇಲೆ ನಿರ್ಮಾಣ ಮಾಡುತ್ತಿರುವ ನಗರಕ್ಕೂ ABIBOO ಇದೇ ಹೆಸರನ್ನು ಇಡಲು ನಿರ್ಧಾರ ಮಾಡಿದೆ.
Source:Tv9 news