ಭಾರತದ ರೈತ ಹೋರಾಟದ ಬಗ್ಗೆ ಬ್ರಿಟನ್ ಸಂಸತ್ ಚರ್ಚೆ
ಲಂಡನ್(ಮಾ.04): ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿಭಟನಾಕಾರರ ಸುರಕ್ಷತೆ ವಿಚಾರವು ಮುಂದಿನ ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ಪ್ರತಿಧ್ವನಿಸಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ಈ ವಿಚಾರಗಳ ಕುರಿತಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ 10 ಸಾವಿರಕ್ಕೂ ಹೆಚ್ಚು ಇ-ಅರ್ಜಿಗಳು ಸಲ್ಲಿಕೆಯಾಗಿತ್ತು. 10 ಸಾವಿರಕ್ಕೂ ಹೆಚ್ಚು ಸಹಿ ಹೊಂದಿದ ಇ-ಅರ್ಜಿಗಳ ಕುರಿತಾಗಿ ಸಂಸತ್ತಿನಲ್ಲಿ ಚರ್ಚೆ ಕೈಗೆತ್ತಿಕೊಳ್ಳಬೇಕು. ಹೀಗಾಗಿ ಈ ಕುರಿತಾಗಿ ಮುಂದಿನ ಸೋಮವಾರ ಬ್ರಿಟನ್ ಸಂಸತ್ತು ಚರ್ಚೆ ನಡೆಸಲಿದೆ ಎಂದು ಬ್ರಿಟನ್ ಸಂಸತ್ತಿನ ಅರ್ಜಿಗಳ ಸಮಿತಿ ಬುಧವಾರ ಖಚಿತಪಡಿಸಿದೆ.
ಲಂಡನ್ನಲ್ಲಿರುವ ಸಂಸತ್ತಿನ ಆವರಣದಲ್ಲಿನ ವೆಸ್ಟ್ಮಿನ್ಸ್ಟರ್ ಹಾಲ್ನಲ್ಲಿ 90 ನಿಮಿಷಗಳ ಈ ಚರ್ಚೆಯಲ್ಲಿ ಸ್ಕಾಟಿಷ್ ನ್ಯಾಷನಲ್ ಪಕ್ಷದ ಸದಸ್ಯರೊಬ್ಬರು ಚರ್ಚೆಗೆ ಚಾಲನೆ ನೀಡಲಿದ್ದು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿಭಟನಾಕಾರರ ಸುರಕ್ಷತೆಗೆ ಭಾರತದ ಸರ್ಕಾರದ ಮೇಲೆ ಬ್ರಿಟನ್ ಸರ್ಕಾರ ಒತ್ತಡ ಹೇರಬೇಕು ಎಂದು ಒತ್ತಾಯಿಸಲಿದ್ದಾರೆ. ಆ ಬಳಿಕ ಸಚಿವರೊಬ್ಬರು ಸರ್ಕಾರದ ಪರವಾಗಿ ಉತ್ತರಿಸಲಿದ್ದಾರೆ.
ನೂತನ 3 ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಒತ್ತಾಯಿಸಿ ದಿಲ್ಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಸಂಚು ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ, ಭಾರತದ ವಿಚಾರಕ್ಕೆ ಸಂಬಂಧಿಸಿ ಬ್ರಿಟನ್ ಸಂಸತ್ತು ಚರ್ಚೆಗೆ ಅಸ್ತು ನೀಡಿದೆ.
Source: Suvarna News