ಭಾರತದಲ್ಲೇ ಔಷಧ ಉತ್ಪಾದಿಸಿದರೆ ಪ್ರೋತ್ಸಾಹಧನ!
ನವದೆಹಲಿ(ಫೆ.25): ಔಷಧ ತಯಾರಿಕಾ ಸಂಸ್ಥೆಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾದ ಈ ಕ್ರಮದಿಂದ ಔಷಧ ಕ್ಷೇತ್ರದಲ್ಲಿ 15,000 ಕೋಟಿ ರು. ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ.
ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಪಡೆಯುವ ಕಂಪನಿಗಳನ್ನು ಸರ್ಕಾರ ಎ, ಬಿ, ಸಿ ಎಂಬ 3 ವಿಧವಾಗಿ ವಿಂಗಡಿಸಿದೆ. 5000 ಸಾವಿರ ಕೋಟಿಗೂ ಅಧಿಕ ಜಾಗತಿಕ ಉತ್ಪಾದನಾ ಆದಾಯ ಹೊಂದಿರುವ ಕಂಪನಿಗಳಿಗೆ 11,000 ಕೋಟಿ ರು. ಪ್ರೋತ್ಸಾಹ ಧನ, 500 ಕೋಟಿ ರು. ಅಥವಾ ಅದಕ್ಕಿಂತ ಹೆಚ್ಚು ಜಾಗತಿಕ ಉತ್ಪಾದನಾ ಆದಾಯ ಹೊಂದಿರುವ ಔಷಧ ಕಂಪನಿಗಳಿಗೆ 2,250 ಕೋಟಿ ರು. ಪ್ರೋತ್ಸಾಹ ಧನ ಹಾಗೂ 500 ಕೋಟಿ ರು.ಗಿಂತಲೂ ಕಡಿಮೆ ಆದಾಯ ಇರುವ ಕಂಪನಿಗಳಿಗೆ 1,750 ಕೋಟಿ ರು. ಭತ್ಯೆ ಲಭ್ಯವಾಗಲಿದೆ.
ಇದರಿಂದ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಔಷಧ ಉತ್ಪಾದನೆಗೆ ಈ ಯೋಜನೆ ಉತ್ತೇಜನ ದೊರೆಯಲಿದ್ದು, ಆಮದು ಅವಲಂಬನೆ ತಪ್ಪಿಸಿ ರಫ್ತಿನ ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದೆ. ಅಲ್ಲದೇ ಈ ಯೋಜನೆಯಿಂದ ನೇರವಾಗಿ 20,000 ಉದ್ಯೋಗಗಳು ಮತ್ತು ಪರೋಕ್ಷವಾಗಿ 80,000 ಉದ್ಯೋಗಗಳು ಸೃಷ್ಟಿಆಗುವ ನಿರೀಕ್ಷೆ ಇದೆ. ಇದರಿಂದ ಮುಂದಿನ 6 ವರ್ಷಗಳಲ್ಲಿ ಔಷಧ ಉತ್ಪನ್ನಗಳ ಮಾರಾಟ 2.94 ಲಕ್ಷ ಕೋಟಿ ರು. ಹಾಗೂ ರಫ್ತಿನ ಪ್ರಮಾಣ 1.96 ಲಕ್ಷ ಕೋಟಿ ರು. ತಲುಪುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರೋತ್ಸಾಹಧನ ಹೇಗೆ?
– ಪ್ರೋತ್ಸಾಹಧನ ಪಡೆಯುವ ಕಂಪನಿಗಳು ಎ, ಬಿ, ಸಿ ಗುಂಪುಗಳಾಗಿ ವರ್ಗೀಕರಣ
– 5 ಸಾವಿರ ಕೋಟಿ ರು. ಉತ್ಪಾದನೆ ಹೊಂದಿದ್ದರೆ 11 ಸಾವಿರ ಕೋಟಿ ರು.
– 500 ಕೋಟಿ ರು.ಗಿಂತ ಹೆಚ್ಚು ಉತ್ಪಾದನೆ ಹೊಂದಿದ್ದರೆ 2,250 ಕೋಟಿ ರು.
– 500 ಕೋಟಿ ರು.ಗಿಂತಲೂ ಕಡಿಮೆ ಆದಾಯ ಇರುವ ಕಂಪನಿಗಳಿಗೆ 1,750 ಕೋಟಿ ರು.
Source: Suvarna News