ಭಾರತಕ್ಕಿಂತ ಮುಂಬೈ ಇಂಡಿಯನ್ಸ್ ಬಲಿಷ್ಠ ಎಂದ ಇಂಗ್ಲೆಂಡ್ ಮಾಜಿ ನಾಯಕನ ಬಾಯಿ ಮುಚ್ಚಿಸಿದ ಜಾಫರ್..!
ಅಹಮದಾಬಾದ್(ಮಾ.13): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಭಾರತ ತಂಡದ ಕಳಪೆ ಪ್ರದರ್ಶನ ಪಂದ್ಯ ಸುಲಭವಾಗಿ ಕೈಚೆಲ್ಲುವಂತೆ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಕೇವಲ 124 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಇದಾದ ಬಳಿಕ ಸುಲಭ ಗುರಿ ಬೆನ್ನತ್ತಿದ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು, ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
ಟೀಂ ಇಂಡಿಯಾದ ಈ ಸಾಧಾರಣ ಪ್ರದರ್ಶನ ಕಂಡ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್, ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ತಂಡವೇ ಬಲಿಷ್ಠವಾಗಿದೆ ಎಂದು ಟ್ವೀಟ್ ಮೂಲಕ ಟೀಂ ಇಂಡಿಯಾವನ್ನು ಕಾಲೆಳೆದಿದ್ದರು.
The @mipaltan are a better T20 team than @BCCI !!! #JustSaying #INDvENG
— Michael Vaughan (@MichaelVaughan) March 12, 2021
ಇಂಗ್ಲೆಂಡ್ ಮಾಜಿ ನಾಯಕ ಟ್ವೀಟ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ಎಲ್ಲಾ ತಂಡಗಳು ನಾಲ್ಕಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದುವ ಅದೃಷ್ಠವಿಲ್ಲ ಮೈಕೆಲ್ ಎನ್ನುವ ಮೂಲಕ ವಾನ್‌ಗೆ ಜಾಫರ್ ಸಕ್ಕತ್ ತಿರುಗೇಟು ನೀಡಿದ್ದಾರೆ.
Not all teams are lucky enough to play four overseas players Michael😏 #INDvENG https://t.co/sTmGJLrNFt — Wasim Jaffer (@WasimJaffer14) March 12, 2021
ಇಂಗ್ಲೆಂಡ್ ತಂಡದಲ್ಲಿ ಎಲ್ಲಾ ಆಟಗಾರರು ಇಂಗ್ಲೆಂಡ್ ಮೂಲದವರೇ ಆಗಿಲ್ಲ. ಡೆಡ್ಲಿ ವೇಗಿ ಆರ್ಚರ್, ಕ್ರಿಸ್ ಜೋರ್ಡನ್ ವಿಂಡೀಸ್ ಮೂಲದವರಾಗಿದ್ದರೆ, ಸ್ವತಃ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಐರ್ಲೆಂಡ್ ದೇಶದವರು. ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ದೇಶದವರು. ಜೇಸನ್ ರಾಯ್ ದಕ್ಷಿಣ ಆಫ್ರಿಕಾ ಮೂಲದವರು. ಹೀಗೆ ವಿದೇಶಿ ಆಟಗಾರರೆಲ್ಲಾ ಸೇರಿ ಇಂಗ್ಲೆಂಡ್ ತಂಡ ರೂಪುಗೊಂಡಿದ್ದು, ಮೈಕಲ್ ವಾನ್ ಹೇಳಿಕೆಗೆ ಜಾಫರ್ ಸರಿಯಾಗಿಯೇ ಜಾಡಿಸಿದ್ದಾರೆ.
Source:Suvarna News