ಭದ್ರಾ ಯೋಜನೆಗೆ ಈಗ ರಾಷ್ಟ್ರೀಯ ಸ್ಥಾನಮಾನ!
ಬೆಂಗಳೂರು(ಮಾ.26): ದಶಕದ ಬೇಡಿಕೆ ಕೊನೆಗೂ ಈಡೇರಿದ್ದು, ಕೇಂದ್ರ ಹೂಡಿಕೆ ಸಮಿತಿಯು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿ ಅನುಮೋದಿಸಿದೆ.
ರಾಷ್ಟ್ರೀಯ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಎಂಬ ಹೆಗ್ಗಳಿಕೆಗೆ ಈ ಭದ್ರಾ ಮೇಲ್ದಂಡೆ ಯೋಜನೆ ಪಾತ್ರವಾಗಿದ್ದು, ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗಲಿದೆ. ಯೋಜನೆಗೆ 21,450 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 16,125 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ನೀಡಲಿದೆ.
ಹೂಡಿಕೆ ಸಮಿತಿಯ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಮನವಿಗೆ ಸ್ಪಂದಿಸಿ ಯೋಜನೆಗೆ ಅನುಮೋದನೆ ದೊರಕಿಸಿಕೊಟ್ಟಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ನಾಡಿನ ಜನರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ನಿರ್ಧಾರದ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಪರಿಶ್ರಮವೂ ಸಾಕಷ್ಟಿದೆ. ಇದಕ್ಕಾಗಿ ಜಾರಕಿಹೊಳಿ ಅವರು ಹಲವು ಬಾರಿ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ 2.25 ಲಕ್ಷ ಹೆಕ್ಟೇರ್ ನೀರಾವರಿ ಮಾಡಲು ವಿನ್ಯಾಸಗೊಳಿಸಲಾಗಿದೆ. ಹನಿ ನೀರಾವರಿ ಅಡಿಯಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶವನ್ನೊಳಗೊಂಡ ಯೋಜನೆಗಳು ಮಾತ್ರ ರಾಷ್ಟ್ರೀಯ ಯೋಜನೆಯ ಸ್ಥಾನಮಾನವನ್ನು ಪಡೆಯುತ್ತವೆ. ಈ ಮೂಲಕ ಕೇಂದ್ರದಿಂದ ಹಣವನ್ನು ಪಡೆಯಲು ಅರ್ಹತೆ ಪಡೆಯುತ್ತವೆ.
ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಬಯಸಿದ ಬಳಿಕ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯುವ ಕೆಲಸ ನಡೆಯಿತು. 12 ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಕಳೆದ ಎರಡು ವರ್ಷದಲ್ಲಿ ಎಂಟು ಇಲಾಖೆಗಳಿಂದ ಎನ್‌ಒಸಿ ಪಡೆಯಲಾಗಿದೆ. ಈ ಮೊದಲು ನಾಲ್ಕು ಇಲಾಖೆಗಳಿಂದ ಎನ್‌ಒಸಿ ಪಡೆಯಲಾಗಿತ್ತು.
2003ರಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯಲಾಯಿತು. ಭೂಸ್ವಾಧೀನ ಸಮಸ್ಯೆಗಳು, ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವಲ್ಲಿ ವಿಳಂಬ, ವೆಚ್ಚ ಹೆಚ್ಚಳ ಸೇರಿದಂತೆ ಇತರೆ ಕಾರಣಗಳಿಂದಾಗಿ ತಡವಾಯಿತು. ಪ್ರಸ್ತುತ ಒಟ್ಟಾರೆ ಕೆಲಸದಲ್ಲಿ ಕೇವಲ ಶೇ.16ರಷ್ಟುಮಾತ್ರ ಪೂರ್ಣಗೊಂಡಿದೆ. ಯೋಜನೆಯು ಸುಮಾರು ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಏನಿದು ಯೋಜನೆ?:
ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲೂಕಿನ ಲಕ್ಕವಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಉಣಿಸುವುದು ಯೋಜನೆಯ ಉದ್ದೇಶ. ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಜ್ಯದ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದೆ. ಯಾವುದೇ ಅಣೆಕಟ್ಟು ನಿರ್ಮಿಸದೆ ಭಾರೀ ಪ್ರಮಾಣದ ನೀರು ಹಂಚಿಕೆ ಮಾಡಿ ರೂಪಿಸಿದ ಯೋಜನೆ ಇದಾಗಿದೆ.
ಭದ್ರಾ ಜಲಾಶಯದ ನೀರನ್ನು ಚಿತ್ರದುರ್ಗಕ್ಕೆ ಹರಿಸಬೇಕು ಎಂಬುದು ದಶಕಗಳ ಕನಸು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕಾಲದಿಂದಲೂ ಈ ಪ್ರಯತ್ನ ನಡೆಯುತ್ತಲೇ ಇತ್ತು. ಎರಡೂವರೆ ದಶಕದಿಂದೀಚೆಗೆ ಹೋರಾಟದ ರೂಪು ಪಡೆದುಕೊಂಡಿತು. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತು.
Source:Suvarna News