ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿದರೆ ಠಾಕ್ರೆಗೇನು ಕಷ್ಟ?: ಎಚ್ಡಿಕೆ ಆಕ್ರೋಶ
ಬೆಂಗಳೂರು(ಜ.22): ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಶಿವಸೇನೆಯವರು ನಡೆಸುತ್ತಿರುವ ಪ್ರತಿಭಟನೆ ಸಮಾಜ ವಿರೋಧಿ ನಡೆ. ಅವರ ಮನಸ್ಸಲ್ಲಿರುವ ವಿಷ, ದೇಶದ್ರೋಹಕ್ಕೆ ಸಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.
ಇದು ನಮ್ಮ ನೆಲ, ನಮ್ಮ ಭಾಷೆ, ನಮ್ಮ ಧ್ವಜ. ನಾವು ಕನ್ನಡ ಮಾತನಾಡುತ್ತೇವೆ. ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು? ಇವರ ಬಾಧೆಯಾದರೂ ಏನು? ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ‘ಉದ್ಧಟ ಠಾಕ್ರೆ’ ಹೇಳಿದ್ದರು. ಬೆಳಗಾವಿಯಲ್ಲಿ ಕಿಡಿಗೇಡಿಗಳು, ಸಮಾಜಘಾತುಕರು ನಡೆಸುತ್ತಿರುವ ಧ್ವಜ ವಿರೋಧಿ ಹೋರಾಟ ಬೆಂಬಲಿಸುವ ಮೂಲಕ ಶಿವಸೇನೆ, ಠಾಕ್ರೆ ಇಚ್ಛೆಯನ್ನು ಜಾರಿಗೆ ತರಲು ಹೊರಟಿದೆ. ನ್ಯಾಯದ ಉದ್ದೇಶವಿಲ್ಲದ ಈ ಹೋರಾಟವನ್ನು ಸರ್ಕಾರ ಮುಲಾಜಿಲ್ಲದೆ ಹತ್ತಿಕ್ಕಬೇಕು ಎಂದು ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗಾಗಿ ಎಂಇಎಸ್, ಶಿವಸೇನೆ ಇಷ್ಟು ಕುತಂತ್ರ ಮಾಡುತ್ತಿದ್ದರೂ ಬಿಜೆಪಿ ಸರ್ಕಾರದ ಯಾವೊಬ್ಬ ಪ್ರತಿನಿಧಿಯಾಗಲಿ, ಕಾಂಗ್ರೆಸ್ನ ಯಾವ ನಾಯಕರಾಗಲಿ ಪ್ರತಿಕ್ರಿಯಿಸಿದ್ದನ್ನು ನಾನು ನೋಡಲಿಲ್ಲ. ಇದೇ ಸಲುಗೆಯಲ್ಲೇ ಉದ್ಧವ ಠಾಕ್ರೆ ಬೆಳಗಾವಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮಾತನಾಡಿದ್ದಾರೆ. ಈ ಧ್ಜಜ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಕನ್ನಡದ ವಿಚಾರಕ್ಕೆ ಮಾತನಾಡಲು, ಕನ್ನಡಕ್ಕೆ ಕೈ ಎತ್ತಲು ರಾಜ್ಯ ನಾಯಕರು ರಾಜಕೀಯ ಮರೆಯಬೇಕು. ಪಕ್ಷ ನೋಡಬಾರದು, ಮಿತ್ರಪಕ್ಷವೆಂದು ಎಣಿಸಬಾರದು, ದೆಹಲಿ ಕಡೆಗೆ ನೋಡಬಾರದು. ಆಗ ಮಾತ್ರ ಇಂತಹ ಅಕ್ರಮಣಕಾರಿ ಪ್ರವೃತ್ತಿಗಳನ್ನು ನಾವು ಹತ್ತಿಕ್ಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Source: Suvarna News