ಪ್ರಯಾಣಿಕರ ಗಮನಕ್ಕೆ: ಸದ್ಯದಲ್ಲೇ ಬಸ್‌ ಪ್ರಯಾಣ ದರ ಏರಿಕೆ

Feb 13, 2021

ಹುಬ್ಬಳ್ಳಿ(ಫೆ.13): ಬಸ್‌ ಪ್ರಯಾಣ ದರ ಏರಿಕೆಯ ಪ್ರಸ್ತಾವವನ್ನು ಮಾರ್ಚ್‌ನಲ್ಲಿ ಜರುಗುವ ಅಂತರ್‌ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಲಾಗುವುದು. ಆನಂತರ ಸರ್ಕಾರದ ನಿರ್ದೇಶನ ಆಧರಿಸಿ ಪ್ರಯಾಣದರ ಹೆಚ್ಚಳ ಮಾಡಲಾಗುವುದು ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದರು.

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ವೇಳೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೀಸೆಲ್‌ ಬೆಲೆ ಏರಿಕೆ ಆಧರಿಸಿ ಪ್ರಯಾಣದ ದರವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಳ ಮಾಡಬೇಕು. ಈಗ ಕೆಎಸ್‌ಆರ್‌ಟಿಸಿ ನಿಯಮದಂತೆ ಮೂರು ವರ್ಷಗಳಿಗೆ ಒಮ್ಮೆ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಒಮ್ಮೆಲೆ ಹೆಚ್ಚಿನ ದರ ಏರಿಕೆಯಾದಂತೆ ಸಾರ್ವಜನಿಕರಿಗೆ ಗೋಚರವಾಗುತ್ತದೆ. ಕೋವಿಡ್‌ ಲಾಕ್‌ಡೌನ್‌ನಿಂದ ಸಂಸ್ಥೆ ನಷ್ಟದಲ್ಲಿ ಇದೆ ಎಂದರು.

ಸಂಸ್ಥೆಯ 30 ನೌಕರರು ಕೋವಿಡ್‌ನಿಂದ ಮೃತರಾಗಿದ್ದಾರೆ. ಅವರ ವಿವರಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿಯಿಂದ ಶೀಘ್ರವಾಗಿ ಪರಿಹಾರ ನೀಡಲು ಅನುಮತಿ ಆದೇಶ ದೊರೆಯಲಿದೆ ಎಂದರು.

ಬಿಆರ್‌ಟಿಎಸ್‌ ಅಪಘಾತ ವಲಯ:

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಜರುಗಿದ ಅಪಘಾತದಲ್ಲಿ ಇಬ್ಬರು ಮೃತರಾಗಿದ್ದಾರೆ. ಇದನ್ನು ಹೊರತು ಪಡಿಸಿದ ಮಿಶ್ರಪಥ, ಹುಬ್ಬಳ್ಳಿ -ಧಾರವಾಡ ಪೊಲೀಸ್‌ ಸಂಚಾರಿ ವ್ಯವಸ್ಥೆಗೆ ಸಂಬಂಧ ಪಟ್ಟಿದೆ. ಕಾರಿಡಾರ್‌ ಸಂಪರ್ಕಿಸುವ 70 ಜಾಗಗಳಿವೆ. ಕಳೆದ ಮೂರುನಾಲ್ಕು ತಿಂಗಳಿನಿಂದ ಬಿಆರ್‌ಟಿಎಸ್‌ ಕಾರಿಡಾರ್‌ ವ್ಯಾಪ್ತಿಯಲ್ಲಿ ಅಪಘಾತವಾದ ಸ್ಥಳಗಳ ನಕ್ಷೆ ಸಿದ್ಧಪಡಿಸಲಾಗಿದೆ. ಅವುಗಳಲ್ಲಿ ಮೂರುನಾಲ್ಕು ಸ್ಥಳಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸಿ ಪ್ರಾಣಹಾನಿಯಾಗಿದೆ. ಈ ಸ್ಥಳಗಳನ್ನು ಅಪಘಾತ ವಲಯಗಳೆಂದು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳು ಹಾಗೂ ಸೂಚಕ ಫಲಕಗಳನ್ನು ಅಳವಡಿಸಲಾಗುತ್ತಿದೆ. ಕಾರಿಡಾರ್‌ನಲ್ಲಿ ಬರುವ ಖಾಸಗಿ ವಾಹನಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತಿದೆ. ವಾಹನಗಳ ದಟ್ಟಣೆ ಹಾಗೂ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸ್‌ ಆಯುಕ್ತ ಲಾಬುರಾಮ್‌ ಹೊಸ ಯೋಜನೆ ರೂಪಿಸಲಿದ್ದಾರೆ ಎಂದರು.

ಸಿಬಿಟಿ ಬಸ್‌ ನಿಲ್ದಾಣದ ಕಟ್ಟಡದಲ್ಲಿ ಲಿಫ್ಟ್‌ ಹಾಗೂ ಪಾರ್ಕಿಂಗ್‌ ಸಮಸ್ಯೆ ಇದೆ. ಸದ್ಯ ಲಿಫ್ಟ್‌ ಅಳವಡಿಸಲಾಗಿದೆ. ಇಡೀ ಕಟ್ಟಡಕ್ಕೆ ಬಾಡಿಗೆ ನಿಗದಿಪಡಿಸಿದ್ದರಿಂದ ಹೆಚ್ಚಿನ ಪ್ರಮಾಣದ ದರವೆನಿಸಿ ಯಾರು ಬಾಡಿಗೆ ಪಡೆಯಲು ಮುಂದೆ ಬಂದಿಲ್ಲ. ಹೀಗಾಗಿ ಪ್ರತಿ ಮಹಡಿಗೆ ದರ ನಿಗದಿಪಡಿಸಿ ಟೆಂಡರ್‌ ಕರೆಯಲಾಗುವುದು. ವಾಸ್ತವ ನೆಲೆಗಟ್ಟಿನಲ್ಲಿ ಬಾಡಿಗೆ ದರ ನಿಗದಿ ಪಡಿಸಲಾಗುವುದು ಎಂದರು.

ಬೇಂದ್ರೆ ನಿಲ್ಲಿಸಲು ಮುಂದು:

ಖಾಸಗಿಯ ಬೇಂದ್ರ ಬಸ್‌ ಓಡಾಟ ನಿಲ್ಲಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೇಂದ್ರ ಬಸ್‌ಗಳ ಓಡಾಟ ನಿಲ್ಲಿಸುವ ಆದೇಶ ಸಿದ್ಧಪಡಿಸಲಾಗುತ್ತಿದೆ. ಬೇಂದ್ರೆ ಬಸ್‌ ಸಂಸ್ಥೆಯವರು ಬದಲಿ ಸಾರಿಗೆ ಮಾರ್ಗವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಲಾಭದಾಯಕ ಮಾರ್ಗಗಳನ್ನು ಖಾಸಗಿ ಬಸ್‌ಗಳ ಓಡಾಟಕ್ಕೆ ನೀಡಲು ಆಗುವುದಿಲ್ಲ. ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಸ್‌ಗಳ ಸಂಚಾರ ದಟ್ಟಣೆಯನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಬೇರೆ ಬೇರೆ ಬಸ್‌ ನಿಲ್ದಾಣಗಳಿಂದ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಪ್ರಸರಣೆ ಮಾಡಲಾಗುವುದು. ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿ ನಗರದಲ್ಲಿ ಸಂಸ್ಥೆಯ ಬಸ್‌ಗಳು ನಿರ್ದಿಷ್ಟಪಡಿಸಿದ ರಸ್ತೆಯಲ್ಲಿ ಓಡಾಡುವಂತೆ ಮಾಡಲಾಗುವುದು ಎಂದು ಹೇಳಿದರು.

ಸಂಸ್ಥೆಯ ಮೇಲೆ ಅಪಘಾತ ಪರಿಹಾರ ಹಾಗೂ ನಷ್ಟದ ಹಾನಿ ಕುರಿತು ಹೆಚ್ಚಿನ ಮೊಕದ್ದಮೆಗಳು ದಾಖಲಾಗಿವೆ. ಕೆಲವೊಮ್ಮೆ ನ್ಯಾಯಾಲಯದಲ್ಲಿ ಸೂಕ್ತವಾದ ಸಾಕ್ಷ್ಯಗಳನ್ನು ಒದಗಿಸದೆ ಹೆಚ್ಚಿನ ಅಪಘಾತ ವಿಮೆ ನೀಡುವ ಸಂದರ್ಭ ಎದುರಾಗುವುದು. ಅಪಘಾತ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್‌ಗಳ ಮುಂದೆ, ಒಳಗಡೆ ಹಾಗೂ ನಿಲ್ದಾಣಗಳಲ್ಲಿ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗುತ್ತಿದೆ. ನಿರ್ಭಯ ಯೋಜನೆ ಅಡಿ ಬಸ್‌ಗಳಲ್ಲಿ ಕ್ಯಾಮೆರಾ ಅಳವಡಿಸಲು ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

600 ಬಸ್‌ ಖರೀದಿ ಅಗತ್ಯ

ಸಂಸ್ಥೆಯಲ್ಲಿ 5 ಸಾವಿರ ಬಸ್‌ಗಳು ಇವೆ. ಇದರಲ್ಲಿ ಶೇ. 40 ರಷ್ಟು ಬಸ್‌ಗಳು ನಿಯಮಾನುಸಾರ 9 ಲಕ್ಷ ಕಿಮೀ ಓಡಾಟ ನಡೆಸಿವೆ. ಇವುಗಳನ್ನು ಸೇವೆಯಿಂದ ನಿಷ್ಕಿ್ರಯಗೊಳಿಸಲಾಗಿದೆ. ಕಳೆದ ಸಾಲಿನಲ್ಲಿ 450 ನೂತನ ಬಸ್‌ಗಳ ಖರೀದಿಗೆ ಸರ್ಕಾರದಿಂದ ಅನುಮತಿ ನೀಡಲಾಗಿತ್ತು. ಕೊವಿಡ್‌ ಕಾರಣದಿಂದ ಇದನ್ನು ತಡೆ ಹಿಡಿಯಲಾಗಿದೆ. ಸದ್ಯ ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳ ಓಡಾಟ ಮುಂದುವರಿಸಲಾಗುತ್ತಿದೆ. ಈ ವರ್ಷ 600 ಹೊಸ ಬಸ್‌ಗಳ ಖರೀದಿಸುವ ಅಗತ್ಯ ಸಂಸ್ಥೆಗಿದೆ. ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಅವಧಿಯಲ್ಲಿ ಬಿಆರ್‌ಟಿಎಸ್‌ಗೆ 50 ಹೊಸ ಎಲೆಕ್ಟ್ರಿಕಲ್‌ ಬಸ್‌ಗಳನ್ನು ಖರೀದಿಸಲು ಟೆಂಡರ್‌ ಆಗಿತ್ತು. ಕೋವಿಡ್‌ ಪೂರ್ವದಲ್ಲಿ ಬಿಆರ್‌ಟಿಎಸ್‌ ಪ್ರಯಾಣಿಕರ ಸಂಖ್ಯೆ 1.30 ಲಕ್ಷ ಇದ್ದು, ಈಗ ಕಡಿಮೆಯಾಗಿದೆ. ಇದರ ಅನುಸಾರ 25 ಬಿಆರ್‌ಟಿಎಸ್‌ ಹಾಗೂ 25 ನಗರ ಸಾರಿಗೆ ಬಸ್‌ಗಳನ್ನು ಖರೀದಿಸಲು ಚಿಂತನೆ ನೆಡಸಲಾಗಿದೆ. ಪ್ರತಿ ಕಿಮೀ ಪಾವತಿ ಆಧಾರದ ಮೇಲೆ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಎಲೆಕ್ಟ್ರಿಕಲ್‌ ಬಸ್‌ ಖರೀದಿಸಲಾಗುವುದು ಎಂದು ಬಾಜಪೇಯಿ ತಿಳಿಸಿದರು.

Source:SuvarnaNews